ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಶುರುವಾಗಿದ್ದು, ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಇಬ್ಬರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ (2nd PU Exam 2023) ಮೊದಲ ದಿನ ಕನ್ನಡ ಹಾಗೂ ಅರೇಬಿಕ್ ವಿಷಯದ ಪರೀಕ್ಷೆ ನಡೆದಿತ್ತು.
ಮೊದಲ ದಿನ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಪ್ರಕರಣಗಳು ವರದಿ ಆಗದಿದ್ದರೂ, ಬೆಳಗಾವಿ ಹಾಗೂ ಯಾದಗಿರಿಯಲ್ಲಿ ಪರೀಕ್ಷಾ ಅಕ್ರಮ ಎಸಗಿದ ಕಾರಣಕ್ಕೆ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು ಪಿಯು ಬೋರ್ಡ್ ಮಾಹಿತಿ ನೀಡಿದೆ. ಪ್ರಥಮ ಭಾಷೆಗೆ 5,33,797 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ ಇದರಲ್ಲಿ 5,10,026 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 95.55% ಪರೀಕ್ಷೆ ಹಾಜರಾತಿ ಇದ್ದು, 23,771 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಸಿಸಿಟಿವಿ ಕಣ್ಗಾವಲು
ಭದ್ರತಾ ದೃಷ್ಟಿಯಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಿಸಿ ಕ್ಯಾಮೆರಾ ಕಣ್ಗಾವಲು ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಇತ್ತು, ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಕೇಂದ್ರಗಳು ಬಂದ್ ಆಗಿತ್ತು. ಪರೀಕ್ಷಾ ಕರ್ತವ್ಯದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದ ಅಧೀಕ್ಷಕರು ಮಾತ್ರ ಕ್ಯಾಮೆರಾ ಸೌಲಭ್ಯ ಇಲ್ಲದ ಬೇಸಿಕ್ ಮೊಬೈಲ್ ಫೋನ್ ಬಳಕೆಗೆ ಅನುಮತಿ ನೀಡಲಾಗಿತ್ತು.
ಹಾಲ್ ಟಿಕೆಟ್ ಪರದಾಟ
ಮೊದಲ ದಿನವೇ ಹಾಲ್ ಟಿಕೆಟ್ ಸಿಗದೇ ವಿದ್ಯಾರ್ಥಿಗಳು ಪರದಾಟ ಅನುಭವಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ನಗರದ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆ ಪರೀಕ್ಷೆ ಹಾಲ್‌ಗೆ ಪ್ರವೇಶ ನೀಡಿಲ್ಲ. ಪೋಷಕರು ಪರೀಕ್ಷೆ ಶುಲ್ಕ ಸಂದಾಯ ಮಾಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ಆಡಳಿತ ಮಂಡಳಿ ತಡೆಹಿಡಿದಿದೆ. ಪೋಷಕರು ಹಾಗೂ ಆಡಳಿತ ಮಂಡಳಿಯ ಹಗ್ಗಜಗ್ಗಾಟದ ನಡುವೆ ಸಿಕ್ಕಿಬಿದ್ದಿರುವ ವಿದ್ಯಾರ್ಥಿಗಳು ಆತಂಕದಿಂದ ಕಾಲೇಜು ಗೇಟ್ ಮುಂದೆ ನಿಂತಿದ್ದರು. ಮಕ್ಕಳ ಭವಿಷ್ಯದ ಜತೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಕಿಡಿಕಾರಿದ್ದಾರೆ.
ಇತ್ತ ವಿಜಯನಗರದಲ್ಲಿಯೂ ಪಿಯು ಪರೀಕ್ಷೆಯಿಂದ 48 ವಿದ್ಯಾರ್ಥಿಗಳು ವಂಚಿತರಾದರು. ಹರಪನಹಳ್ಳಿ ಪಟ್ಟಣ ಎಚ್‌ಪಿಎಸ್ ಕಾಲೇಜಿನಲ್ಲಿ ಹಾಲ್ ಟಿಕೆಟ್ ಇಲ್ಲದೆ ಇತ್ತ ಪರೀಕ್ಷೆ ಬರೆಯಲು ಬಿಡದಿದ್ದಕ್ಕೆ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದರು. ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು. ಹಾಜರಾತಿ ಕಡಿಮೆ ಇರುವ ಕಾರಣಕ್ಕೆ ಪರೀಕ್ಷೆ ಬರೆಯಲು ಅನುಮತಿ ಕೊಟ್ಟಿಲ್ಲ ಎಂದು ಕಾಲೇಜು ಸಿಬ್ಬಂದಿ ಹೇಳಿದ್ದಾರೆ.
ಇದನ್ನೂ ಓದಿ: 2nd Pu Exam : ದ್ವಿತೀಯ ಪಿಯು ಪರೀಕ್ಷೆ ಹಾಲ್ ಟಿಕೆಟ್ ಪದೇಪದೆ ನಾಶ; ವಿದ್ಯಾರ್ಥಿನಿ ಬಾಳಲ್ಲಿ ಎಂಥಾ ಅಗ್ನಿ ಪರೀಕ್ಷೆ?
ಪರೀಕ್ಷಾ ಕೇಂದ್ರಗಳಲ್ಲಿ ಇರಲಿಲ್ಲ ಹಿಜಾಬ್ ಗಲಾಟೆ
ಈ ಮೊದಲೇ ತಿಳಿಸಿದಂತೆ ಹಿಜಾಬ್ ಧರಿಸಿ ಬಂದವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶವನ್ನು ನಿಷೇಧ ಮಾಡಲಾಗಿತ್ತು. ಕಳೆದ ವರ್ಷ ಕೆಲವು ವಿದ್ಯಾರ್ಥಿಗಳು ಇದೇ ಕಾರಣಕ್ಕೆ ಪರೀಕ್ಷೆಯಿಂದ ಹೊರಗೆ ಉಳಿದಿದ್ದರು. ಆದರೆ, ಈ ವರ್ಷ ಹಿಜಾಬ್ ಸಂಘರ್ಷ ಇಲ್ಲದೆ ಇರುವುದು ಕಂಡು ಬಂತು. ಹಿಜಾಬ್ ಧರಿಸಿ ಬಂದವರಿಗೆ ಕೇಂದ್ರದಲ್ಲಿನ ಪ್ರತ್ಯೇಕ ಕೊಠಡಿಯಲ್ಲಿ ತೆರವು ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ