ಸುಳ್ಯ: ಪರೀಕ್ಷೆ ಎಂದ ಕೂಡಲೇ ಮಕ್ಕಳಿಗಿಂತ ಹೆಚ್ಚು ಹೆತ್ತವರಿಗೆ, ಅದರಲ್ಲೂ ಅಮ್ಮಂದಿರಿಗೆ ತಲೆಬಿಸಿ ಜಾಸ್ತಿ. ಆದರೆ, ಇಲ್ಲಿ ತಾಯಿಗೆ ನಿಜವಾದ ಅರ್ಥದಲ್ಲಿ ತಲೆ ಬಿಸಿ ಇತ್ತು. ಯಾಕೆಂದರೆ, ಮಗಳ ಜತೆಗೆ ಅವರೂ ಪರೀಕ್ಷೆ ಬರೆದಿದ್ದರು! ತಾಯಿ ಮತ್ತು ಮಗಳು ಒಟ್ಟಿಗೆ ಪಿಯುಸಿ ಪರೀಕ್ಷೆ (2nd PU Results 2023) ಬರೆದು ಉತ್ತೀರ್ಣರಾದ ಅಪರೂಪದ ಫಲಿತಾಂಶಕ್ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಸಾಕ್ಷಿಯಾಗಿದೆ.
ಸುಳ್ಯ ಜಯನಗರದ ರಮೇಶ್ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಶಾ ಒಟ್ಟಿಗೆ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.
ಸುಳ್ಯದ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆಯೂ ಅಧ್ಯಯನ ನಡೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು 45ನೇ ವರ್ಷದಲ್ಲಿ ಉತ್ತೀರ್ಣರಾಗಿದ್ದಾರೆ.
ಮಗಳು ತೃಿಶಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. 25 ವರ್ಷದ ಹಿಂದೆ ಗೀತಾ ಅವರ ಹೈಸ್ಕೂಲ್ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಎರಡು ವರ್ಷಗಳ ಹಿಂದೆ ಇವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು. ಈ ವರ್ಷ ಪಿಯುಸಿ ಪರೀಕ್ಷೆಯನ್ನು ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಬರೆದಿದ್ದರು.
ಗೃಹ ರಕ್ಷಕ ದಳದ ಸಿಬ್ಬಂದಿಯಾಗಿರುವ ಇವರು ಕರ್ತವ್ಯ, ಮನೆಗೆಲಸದ ಬಿಡುವಿನ ವೇಳೆ ತನ್ನ ವಿದ್ಯಾಭ್ಯಾಸ ನಡೆಸಿದ್ದಾರೆ. ಅಲ್ಲದೆ ಇವರ ಕಲಿಕೆಗೆ ಪೂರಕವಾಗಿ ಕಾಲೇಜಿನ ಉಪನ್ಯಾಸಕರೂ ಪುಸ್ತಕಗಳನ್ನು ನೀಡಿ ಸಹಕರಿಸಿದ್ದಾರೆ. ಅವರಿಗೆ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮೂಲಕ ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ : 2nd PUC Result 2023: ಕೂಲಿ ಮಾಡುವವರ ಮಗ ರಾಹುಲ್ ಈಗ ಪಿಯುಸಿ ಟಾಪರ್! ಸಾಧನೆಗೆ ಅಡ್ಡಿಯಾಗದ ಬಡತನ