ಬೆಂಗಳೂರು/ವಿಜಯನಗರ: ದ್ವಿತೀಯ ಪಿಯುಸಿ ಪರೀಕ್ಷೆಯ (2nd Puc Exam Result 2023) ಮರು ಮೌಲ್ಯಮಾಪನದ (Re evaluation) ಬಳಿಕ ವಿಜಯನಗರದ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿ ಕುಶಾ ನಾಯ್ಕ್ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (kseeb) ಕಳೆದ ಏಪ್ರಿಲ್ 21ರಂದು ದ್ವಿತೀಯ ಪಿಯುಸಿ ಫಲಿತಾಂಶವನ್ನು (2nd PUC Result 2023) ಪ್ರಕಟಿಸಿತ್ತು. ಆಗ ಕಲಾ ವಿಭಾಗದಲ್ಲಿ ಬೆಂಗಳೂರಿನ ಎನ್‌ಎಂಕೆಆರ್‌ವಿ ಪಿಯು ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ತಮುಸುಮ್ ಶೇಖ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು. ಇದೀಗ ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಕುಶಾ ನಾಯ್ಕ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ವಿಶೇಷ ಚೇತನ ವಿದ್ಯಾರ್ಥಿ ಆಗಿರುವ ಕುಶಾನಾಯ್ಕ್, ಮೌಲ್ಯಮಾಪನ ಫಲಿತಾಂಶದಲ್ಲಿ ಕಲಾ ವಿಭಾಗದ ಐಚ್ಚಿಕ ಕನ್ನಡ ವಿಷಯದಲ್ಲಿ ಎರಡು ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ 592 ಅಂಕಗಳಿಂದ 594 ಅಂಕಗಳನ್ನು ಪಡೆದಿದ್ದಾರೆ. ಎನ್‌ಎಂಕೆಆರ್‌ವಿ ಪಿಯು ಮಹಿಳಾ ಕಾಲೇಜಿನ ತಮಸುಮ್ ಶೇಖ್ ಕಲಾ ವಿಭಾಗದಲ್ಲಿ 593 ಅಂಕ ಗಳಿಸಿ ಮೊದಲ ಸ್ಥಾನವನ್ನು ಗಳಿಸಿದರು. ಇದೀಗ ಈಕೆಗಿಂತ ಒಂದು ಅಂಕ ಜಾಸ್ತಿ ಗಳಿಸಿ ಮೊದಲ ಸ್ಥಾನವನ್ನು ಕುಶಾನಾಯ್ಕ್ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಸತತ ಎಂಟು ಬಾರಿ ವಿಜಯ ನಗರದ ಕೊಟ್ಟೂರಿಗೆ ಫಸ್ಟ್ ರ‍್ಯಾಂಕ್ ಸಿಕ್ಕಿದಂತಾಗಿದೆ.
ಜಿಲ್ಲೆಗೆ ನಾಲ್ವರು ಟಾಪರ್ಸ್
ರಾಜ್ಯದ ಟಾಪರ್ ಲಿಸ್ಟ್‌ನಲ್ಲಿ ವಿಜಯನಗರ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಇದ್ದರು. ವಿಜಯನಗರದ ಕೊಟ್ಟೂರು ಇಂದು ಪಿಯು ಕಾಲೇಜಿನ ಇಬ್ಬರು, ಇಂದು ಇನ್ನೊವೇಟಿವ್ ಕಾಲೇಜಿನ ಒಬ್ಬರು, ಹರಪನಹಳ್ಳಿಯ SUJM ಪಿಯು ಕಾಲೇಜಿನ ಒಬ್ಬ ವಿದ್ಯಾರ್ಥಿ ಟಾಪರ್ ಪಟ್ಟಿಯಲ್ಲಿದ್ದರು. ಕೊಟ್ಟೂರು ಇಂದು ಪಿಯು ಕಾಲೇಜಿನ ಕುಶಾನಾಯ್ಕ್ , ದಡ್ಡಿ ಕರಿಬಸಮ್ಮ, ಕಲಾ ವಿಭಾಗದಲ್ಲಿ 592 ಅಂಕ ಪಡೆದಿದ್ದರು. ಇದೀಗ ಮರುಮೌಲ್ಯಮಾಪನದಲ್ಲಿ ಕುಶಾನಾಯ್ಕೆಗೆ 2 ಅಂಕ ಹೆಚ್ಚುವರಿಯಾಗಿ ಬಂದಿದೆ. ಹರಪನಹಳ್ಳಿ SUJM ಕಾಲೇಜ್‌ನ ಮುತ್ತೂರು ಮಲ್ಲಮ್ಮ ಸಹ ಕಲಾ ವಿಭಾಗದಲ್ಲಿ 592 ಅಂಕಗಳು ಪಡೆದಿದ್ದಳು.
ಇದನ್ನೂ ಓದಿ: KCET 2023 : ಸಿಇಟಿಯಂದೇ ಪ್ರಮಾಣ; ಇದೇ ದಿನ ಬೇಕಿತ್ತಾ ಎಂದು ಪ್ರಶ್ನಿಸಿದ ಸಂತೋಷ್
ಮಾರ್ಚ್ 9 ರಿಂದ 29 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. ಏಪ್ರಿಲ್ 21ರಂದು ಪರೀಕ್ಷೆ ಫಲಿತಾಂಶ (2nd PUC Result 2023) ಪ್ರಕಟಗೊಂಡಿತ್ತು. ರಾಜ್ಯ 5,716 ಕಾಲೇಜುಗಳಿಂದ 7.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 74.67ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ