Site icon Vistara News

2nd PUC Result 2023: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್‌; ಮನನೊಂದು ನೇಣು ಬಿಗಿದುಕೊಂಡ ವಿದ್ಯಾರ್ಥಿನಿ

#image_title

ಚಿತ್ರದುರ್ಗ: ದ್ವಿತೀಯ ಪಿಯು ಪರೀಕ್ಷೆಯಲ್ಲಿ (2nd PUC Result 2023) ಫೇಲ್ ಆಗಿದ್ದಕ್ಕೆ ಬಾಲಕಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ನಿಶಾರಾಣಿ (18) ಮೃತ ದುರ್ದೈವಿ ಆಗಿದ್ದಾಳೆ. ಚಿತ್ರದುರ್ಗದ ಭೋವಿ ಕಾಲೊನಿ‌ಯ ನಿವಾಸಿಗಳಾದ ಪ್ರಕಾಶ್‌ ಹಾಗೂ ಸುಮಲತಾರ ಮಗಳಾದ ನಿಶಾ ಚಿತ್ರದುರ್ಗದ ಗರ್ಲ್ಸ್‌ ಜ್ಯೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಶುಕ್ರವಾರ ಪರೀಕ್ಷೆ ಫಲಿತಾಂಶ ನೋಡಿದವಳೇ ಅಘಾತಕ್ಕೆ ಒಳಗಾಗಿದ್ದಾಳೆ. ಪರೀಕ್ಷೆಯಲ್ಲಿ ಫೇಲ್‌ ಆಗಿರುವುದು ತಿಳಿಯುತ್ತಿದ್ದಂತೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇತ್ತ ಹೊರಗೆ ಹೋಗಿದ್ದ ಪೋಷಕರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

4 ವಿಷಯಗಳಲ್ಲಿ ಫೇಲ್‌, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Result 2023) ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಫೇಲ್‌ (2nd puc Student fail) ಆಗಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಮನನೊಂದು (Student suicide) ನೇಣಿಗೆ ಶರಣಾಗಿದ್ದಾಳೆ. ವಿಜಯಲಕ್ಷ್ಮಿ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಗುಂಡ್ಲುಪೇಟೆ ತಾಲೂಕಿನ ಮೂಡಗೂರು ಗ್ರಾಮದ ನಿವಾಸಿ ವಿಜಯಲಕ್ಷ್ಮಿ, ನಗರದ ಜೆಎಸ್ಎಸ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರ ಬೆಳಗ್ಗೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ನಾಲ್ಕು ವಿಷಯಗಳಲ್ಲಿ ಫೇಲ್‌ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜೆ‌ಎಸ್‌ಎಸ್ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಕಳೆದ ಬಾರಿಯೂ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ

ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂರನೇ ಬಾರಿಯೂ ಫೇಲ್‌ ಆಗಿದ್ದಕ್ಕೆ ಪೂಜಾ ಚಳಗೇರಿ (19) ಎಂಬಾಕೆ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ‌ ಯಡಹಳ್ಳಿ ಗ್ರಾಮದಲ್ಲಿ ಗಲಗಲಿಯ ಶ್ರೀ ಗಾಲವ ಮಹರ್ಷಿ ಶಿಕ್ಷಣ ಸಂಸ್ಥೆಯ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎರಡು ಬಾರಿ ಅನುತ್ತೀರ್ಣಳಾಗಿದ್ದ ಪೂಜಾ ಮೂರನೇ ಬಾರಿಗೆ ಪರೀಕ್ಷೆ ಬರೆದಾಗಲೂ ಎರಡು ವಿಷಯಗಳಲ್ಲಿ ಫೇಲಾಗಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಕೊಡಗಿನಲ್ಲಿ ಫಲಿತಾಂಶಕ್ಕೂ ಮುನ್ನವೇ ಆತ್ಮಹತ್ಯೆ

ಪಿಯುಸಿ ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲೇ ಹೆದರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗಿನ ಕುಶಾಲನಗರದ ಬಸವನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಸಂಧ್ಯಾ ಎಂಬ ವಿದ್ಯಾರ್ಥಿನಿ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಸಂಧ್ಯಾ ಯಾರು ಮನೆಯಲ್ಲಿಲ್ಲದ ಸಂದರ್ಭ ನೋಡಿ ನೇಣು ಬಿಗಿದು ಸಾವಿಗೀಡಾಗಿದ್ದಳು. ಆದರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡ 67ರಷ್ಟು ಅಂಕ ಗಳಿಸಿದ್ದಳು.

ಇದನ್ನೂ ಓದಿ: 2nd PUC Result 2023: ಪರೀಕ್ಷೆ ತಯಾರಿಯ ಸೀಕ್ರೆಟ್‌ ರಿವೀಲ್‌ ಮಾಡಿದ ದ್ವಿತೀಯ ಪಿಯುಸಿ ಟಾಪರ್ಸ್‌

ಪರೀಕ್ಷೆಯ ಫಲಿತಾಂಶಕ್ಕೆ ಹೆದರಿ ದುಡುಕಿನ ನಿರ್ಧಾರಕ್ಕೆ ಕೈ ಹಾಕಿ ಜೀವನನ್ನೇ ಕಳೆದುಕೊಂಡಿದ್ದರು. ಈ ಬಾರಿಯೂ ಇಬ್ಬರು ವಿದ್ಯಾರ್ಥಿನಿಯರು ಫೇಲ್‌ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Exit mobile version