ಕಂಪ್ಲಿ: ತಾಲೂಕಿನ ನೆಲ್ಲುಡಿ ಕೊಟಾಲ್ ಗ್ರಾಮದ ಯುವಕ ಯು.ಬಾಲು ಟಾಟಾ ಎಸಿ ವಾಹವನ್ನು ಚಾಲನೆ ಮಾಡಿ ಕುಟುಂಬ ನಿರ್ವಹಣೆಯ ಜೊತೆಗೆ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ತಾಲೂಕಿಗೆ ತೃತೀಯ ಸ್ಥಾನ ಗಳಿಸಿದ್ದಾನೆ.
ಮೂಲತಃ ಬಡ ಕುಟುಂಬದ ವಿದ್ಯಾರ್ಥಿಯಾಗಿದ್ದ ಯು.ಬಾಲು 10ನೇ ತರಗತಿ ಮುಗಿಸಿಕೊಂಡು ಪಟ್ಟಣದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕಾನಿಕಲ್ ಡಿಪ್ಲೊಮಾ ನೋಂದಣಿ ಮಾಡಿಸಿ ವಿದ್ಯಾಭ್ಯಾಸ ನಡೆಸುತ್ತಿದ್ದ. ತನ್ನ ತಂದೆಯ ಅಕಾಲಿಕ ಮರಣದಿಂದಾಗಿ ಅನಿವಾರ್ಯವಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಕುಟುಂಬದ ಜವಬ್ದಾರಿಯನ್ನು ನಡೆಸಿಕೊಂಡು ಹೋಗಲು ನಿರ್ಧರಿಸಿದ.
ಟಾಟಾ ಎಸಿ ವಾಹನದ ಚಾಲಕನಾಗಿ ಕೆಲಸವನ್ನು ಅಳವಡಿಸಿಕೊಂಡ ವಿದ್ಯಾರ್ಥಿ ಯು.ಬಾಲು 2 ವರ್ಷಗಳ ಬಳಿಕ ಮತ್ತೆ ವಿದ್ಯಾಭ್ಯಾಸ ನಡೆಸುವ ಕನಸನ್ನು ಹೊತ್ತು ಇಲ್ಲಿನ ಜವಳಿ ವೀರಮ್ಮ ಚನ್ನಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಸೇರಿ ವಿದ್ಯಾಭ್ಯಾಸ ಮುಂದುವರಿಸಿದ.
ತಾಲೂಕಿಗೆ ತೃತೀಯ ಸ್ಥಾನ
ಪ್ರಥಮ ಪಿಯುಸಿಯಲ್ಲಿ 88% ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ಯು.ಬಾಲು ದ್ವಿತೀಯ ಪಿಯುಸಿಯ ಕನ್ನಡ ಭಾಷೆಯಲ್ಲಿ 92, ಇಂಗ್ಲಿಷ್ ನಲ್ಲಿ 72, ಬಿಸನೆಸ್ ಸ್ಟಡಿ ನಲ್ಲಿ 95, ಎಕನಾಮಿಕ್ಸ್ ನಲ್ಲಿ 95, ಅಕೌಂಟೆನ್ಸಿ ನಲ್ಲಿ 98, ಕಂಪ್ಯೂಟರ್ ಸೈನ್ಸ್ ನಲ್ಲಿ 94 ಸೇರಿ ಒಟ್ಟು 546, (ಶೇ.91%) ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನವನ್ನು, ಕಂಪ್ಲಿ ತಾಲೂಕಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾನೆ.
ಇದನ್ನೂ ಓದಿ: 2nd PUC Result 2023: ಕೂಲಿ ಮಾಡುವವರ ಮಗ ರಾಹುಲ್ ಈಗ ಪಿಯುಸಿ ಟಾಪರ್! ಸಾಧನೆಗೆ ಅಡ್ಡಿಯಾಗದ ಬಡತನ
ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಕಾಲೇಜಿನ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಹಿರೇಮಠ, ಪ್ರಾಚಾರ್ಯ ಎಂ.ಶಿವಬಸವನಗೌಡ ಸೇರಿದಂತೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಿಎಸ್ಐ ಆಗುವ ಕನಸು
ಈ ವೇಳೆ ಮಾತನಾಡಿದ ವಿದ್ಯಾರ್ಥಿ ಯು.ಬಾಲು, ಟಾಟಾ ಎಸಿ ಚಾಲಕನಾಗಿ ಕೆಲಸ ನಡೆಸುತ್ತ ಬಿಡುವಿನ ವೇಳೆಯಲ್ಲಿ ನಿತ್ಯ 3 ಗಂಟೆಗಳ ಕಾಲ ವಿದ್ಯಾಭ್ಯಾಸ ನಡೆಸಿಕೊಂಡು ಪರೀಕ್ಷೆಯನ್ನು ಎದುರಿಸಿದ್ದು 546 (ಶೇ.91%) ಅಂಕಗಳನ್ನು ಪಡೆದುಕೊಂಡಿದ್ದೇನೆ. ತಾಯಿ ಹಾಗೂ ಕುಟುಂಬಸ್ಥರ ಮತ್ತು ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರ ಪ್ರೋತ್ಸಾಹದಿಂದ ನಾನು ಇಷ್ಟು ಅಂಕಗಳನ್ನು ಗಳಿಸಲು ಸಾಧ್ಯವಾಗಿದೆ. ವಿದ್ಯಾಭ್ಯಾಸವನ್ನು ಮುಂದುವರಿಸಿ, ಪಿಎಸ್‌ಐ ಆಗಬೇಕೆನ್ನುವ ಕನಸನ್ನು ಹೊತ್ತಿದ್ದೇನೆ ಎಂದು ತಿಳಿಸಿದ್ದಾನೆ.