ಬೆಂಗಳೂರು: ಬ್ರಿಟನ್‌ನ ಡಂಡೀ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಯನ ನಡೆಸಲು ಆಯ್ಕೆಯಾಗಿರುವ ರಾಜ್ಯದ ಮೂರು ವಿಶ್ವವಿದ್ಯಾಲಯಗಳ ಆಯ್ದ ಪ್ರತಿಭಾವಂತ 15 ವಿದ್ಯಾರ್ಥಿಗಳನ್ನು ಗುರುವಾರ ಕಳುಹಿಸಿಕೊಡಲಾಯಿತು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ ಬೆಳೆಸಬೇಕೆಂಬ ಎನ್‌ಇಪಿ ಗುರಿಗೆ ಪೂರಕವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸಾಕ್ಷಿಯಾದರು.
ಇದೇ ವೇಳೆ ‘ಜನಜೀವನದಲ್ಲಿ ಪರಿವರ್ತನೆ: ಕರ್ನಾಟಕ, ಡಂಡೀ & ಬಿಯಾಂಡ್’ ಉಪಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಈ ಯೋಜನೆಯಡಿ ರಾಜ್ಯದ ಗುಲ್ಬರ್ಗ, ಯುವಿಸಿಇ ಮತ್ತು ಬೆಂಗಳೂರು ಕೃಷಿ ವಿ.ವಿ.ಗಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಯಾವುದೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿಯುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಬೇಕು. ಗುಲ್ಬರ್ಗ ವಿವಿ ತಂಡವು ಕಲಬುರಗಿ ಭಾಗದ ಬುಡಕಟ್ಟು ಜನರಲ್ಲಿ ಇರುವ ಆಂಟಿಮೈಕ್ರೋಬಯಲ್ ನಿರೋಧಕ ಶಕ್ತಿ ಕುರಿತು, ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಡೀಸೆಲ್ ಬದಲು ಪ್ಲಾಸ್ಟಿಕ್ ತೈಲ ಮತ್ತು ಬಳಸಲ್ಪಟ್ಟಿರುವ ಖಾದ್ಯ ತೈಲವನ್ನು ಪರ್ಯಾಯ ಇಂಧನವಾಗಿ ಬಳಸುವ ಸಾಧ್ಯತೆ ಮತ್ತು ಬೆಂಗಳೂರು ಕೃಷಿ ವಿ.ವಿ.ಯು ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸೋಲಾರ್ ಸೆನ್ಸಾರ್ ಆಧಾರಿತ ನೀರಾವರಿ ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವೃದ್ಧಿ ಕುರಿತು ಸಂಶೋಧನೆ ನಡೆಸಲಿವೆ.
ಇದರ ಪ್ರಕಾರ, ಈ ಮೂರೂ ವಿ.ವಿ.ಗಳ ತಂಡಗಳು ಡಂಡೀ ವಿ.ವಿ. ನಡೆಸಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಇದು ನಮ್ಮ ವಿದ್ಯಾರ್ಥಿಗಳ ಜಾಣ್ಮೆ, ನಾವೀನ್ಯತೆಯ ಕೌಶಲ್ಯಗಳ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಮಾರ್ಚ್‌ನಿಂದ ಜೂನ್‌ವರೆಗೆ ನಾಲ್ಕು ತಿಂಗಳು ಈ ಯೋಜನೆಗಳು ಚಾಲ್ತಿಯಲ್ಲಿ ಇರಲಿದ್ದು, ನಂತರ ಈ ತಂಡಗಳು ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಲಿವೆ. ಇದಕ್ಕೆ ಆಗುವ ವೆಚ್ಚವನ್ನು ಬ್ರಿಟಿಷ್ ಕೌನ್ಸಿಲ್, ಡಂಡೀ ವಿವಿ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತುಗಳು ಭಾಗಶಃ ಭರಿಸಲಿವೆ ಎಂದು ಸಚಿವರು ತಿಳಿಸಿದರು.
ವಿಜೇತರಿಗೆ 6 ಸಾವಿರ ಪೌಂಡ್ ಸ್ಕಾಲರ್ ಶಿಪ್
ಸ್ಪರ್ಧೆಯಲ್ಲಿ ವಿಜೇತವಾಗುವ ತಂಡಕ್ಕೆ ಗರಿಷ್ಠ 6 ಸಾವಿರ ಪೌಂಡ್ ಶಿಷ್ಯವೇತನ (Scholarship)ಸಿಗಲಿದ್ದು, ಒಂದು ವರ್ಷದ ಅವಧಿಯ ಸ್ನಾತಕೋತ್ತರ ಕೋರ್ಸಿಗೆ ಅಲ್ಲೇ ಪ್ರವೇಶಾತಿ ಪಡೆಯಬಹುದು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತರುತ್ತಿರುವ ಗುಣಾತ್ಮಕ ಬದಲಾವಣೆಗೆ ಇದು ನಿದರ್ಶನವಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ರಾಜ್ಯದ ಶೈಕ್ಷಣಿಕ ಸುಧಾರಣೆಗೆ ಬ್ರಿಟಿಷ್ ಕೌನ್ಸಿಲ್ ಕಳೆದ ಒಂದು ದಶಕದಿಂದಲೂ ಕೈ ಜೋಡಿಸಿದೆ. ರಾಜ್ಯ ಸರಕಾರವು ಕೂಡ ಈ ಕ್ಷೇತ್ರದಲ್ಲಿ ದೀರ್ಘಾವಧಿ ಪರಿಣಾಮ ಉಂಟುಮಾಡುವಂತಹ ಉಪಕ್ರಮಗಳನ್ನು ಕೈಗೊಂಡಿದೆ. ನಮ್ಮ ಯುವಜನರು ಜಾಗತಿಕ ಮಟ್ಟದ ಸ್ಪರ್ಧೆಯನ್ನು ಎದುರಿಸುವಂತೆ ಈ ಮೂಲಕ ಸಜ್ಜುಗೊಳಿಸಲಾಗುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಬ್ರಿಟಿಷ್ ಕೌನ್ಸಿಲ್‌ನ ದಕ್ಷಿಣ ಭಾರತ ನಿರ್ದೇಶಕ ಜನಕ ಪುಷ್ಪನಾಥನ್ ಮಾತನಾಡಿ, ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಬೋಧಕರಿಗೆ ಹೊಸ ಹೊಸ ಕೌಶಲ್ಯಗಳು, ಸಂಪನ್ಮೂಲಗಳು ಮತ್ತು ವೈಧಾನಿಕತೆಗಳನ್ನು ಕಲಿಸುವುದು ಈ ಒಡಂಬಡಿಕೆಯ ಗುರಿಯಾಗಿದೆ. ಇದು ರಾಜ್ಯದ ಶೈಕ್ಷಣಿಕ ಮಹತ್ತ್ವಾಕಾಂಕ್ಷೆ ಮತ್ತು ಆರ್ಥಿಕ ಬೆಳವಣಿಗೆಗೆ ಇಂಬು ಕೊಡಲಿದೆ. ಇದರಿಂದ ಯುವಜನರಿಗೆ ಲಾಭವಾಗಲಿದೆ ಎಂದರು.
ಇದನ್ನೂ ಓದಿ: B. Sriramulu: ಸಂಡೂರಿನಲ್ಲಿಯೂ ಸ್ಪರ್ಧೆ ಕುರಿತು ಗೊಂದಲದ ಹೇಳಿಕೆ ನೀಡಿದ ಸಚಿವ ಬಿ. ಶ್ರೀರಾಮುಲು
ಕಾರ್ಯಕ್ರಮದಲ್ಲಿ ಡಂಡೀ ವಿ.ವಿ.ದ ಉನ್ನತಾಧಿಕಾರಿಗಳಾದ ಪ್ರೊ.ಹರಿ ಹುಂಡಾಲ್, ಪ್ರಿ.ಡೈಸ್ ಡೇವಿಡ್‌ಸನ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ, ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ್, ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ, ಯುವಿಸಿಇ ಪ್ರಭಾರಿ ಪ್ರಿನ್ಸಿಪಾಲ್ ಪ್ರೊ.ದೀಪಾ ಶೆಣೈ ಉಪಸ್ಥಿತರಿದ್ದರು.
ವೆಬ್ ಸ್ಟೋರಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ