Site icon Vistara News

KUWJ Conference: ಕಲ್ಪತರು ನಾಡು ತುಮಕೂರಲ್ಲಿ ಮುಂದಿನ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ

KUWJ

ದಾವಣಗೆರೆ: ಕಲ್ಪತರು ನಾಡು ತುಮಕೂರಿಗೆ 39ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಆತಿಥ್ಯದ ಅವಕಾಶ ದೊರೆತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ) ಪ್ರತಿನಿಧಿಗಳ ಸಭೆಯಲ್ಲಿ ಮುಂದಿನ ಸಮ್ಮೇಳನವನ್ನು ತುಮಕೂರಿನಲ್ಲಿ ಆಯೋಜಿಸಲು ನಿರ್ಣಯ ಕೈಗೊಳ್ಳಲಾಗಿದೆ.

ದಾವಣಗೆರೆ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ 38ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಸಭೆಯಲ್ಲಿ ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಅವರು ನಿರ್ಣಯ ಘೋಷಿಸಿದ್ದಾರೆ. ಸಮ್ಮೇಳನ ನಡೆಸಲು ತುಮಕೂರು, ಶಿವಮೊಗ್ಗ, ರಾಯಚೂರಿನಲ್ಲಿ ಬೇಡಿಕೆ ಬೇಡಿಕೆ ಬಂದಿತ್ತು. ಆದರೆ, ಅಂತಿಮವಾಗಿ ಕಲ್ಪತರು ನಾಡು ತುಮಕೂರಿನಲ್ಲಿ ಮುಂದಿನ ಸಮ್ಮೇಳನ ನಡೆಸಲು ನಿರ್ಣಯ ಮಾಡಲಾಗಿದೆ.

ಪತ್ರಿಕಾ ವೃತ್ತಿಯ ಸ್ವರೂಪ ಬದಲಾದರೂ ಮೂಲ ಆಶಯ, ವೃತ್ತಿ ಬದ್ಧತೆ ಬದಲಾಗದಿರಲಿ: ಕೆ.ವಿ.ಪ್ರಭಾಕರ್

ಅಚ್ಚುಮೊಳೆಯಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ವರೆಗೂ ಪತ್ರಿಕಾ ವೃತ್ತಿ ತಾಂತ್ರಿಕವಾಗಿ ಬಹಳ ಬದಲಾವಣೆ ಕಂಡಿದೆ. ಆದರೆ ಮೂಲ ಆಶಯ ಮತ್ತು ಬದ್ಧತೆ ಮಾತ್ರ ಬದಲಾಗಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

KUWJ ಆಯೋಜಿಸಿದ್ದ 38 ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ‘ಸರ್ಕಾರ ಮತ್ತು ಮಾಧ್ಯಮ’ ಕುರಿತ ಸಂವಾದ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಮೊದಲು ಪತ್ರಕರ್ತ. ಬಳಿಕ ಸರ್ಕಾರದ ಪ್ರತಿನಿಧಿ. ರಾಜ್ಯದ ಎಲ್ಲಾ ಪತ್ರಕರ್ತ ಸಮುದಾಯದ ಪ್ರತಿನಿಧಿಯಾಗಿ ನಾನು ಸರ್ಕಾರದ ಪ್ರತಿನಿಧಿಯಾಗಿದ್ದೀನಿ ಎಂದು ನುಡಿದರು.

ಈಗ ಅಧಿಕಾರಸ್ಥರ ಮತ್ತು ಪತ್ರಕರ್ತರ ನಡುವೆ ಸಂಪರ್ಕ ಅನಿವಾರ್ಯ ಅನ್ನುವ ಸ್ಥಿತಿ ಬಂದಿದೆ. ಮೊದಲೆಲ್ಲಾ ಪತ್ರಕರ್ತರು ಅಧಿಕಾರಸ್ಥರ ಜತೆ ನಿಕಟ ಸಂಪರ್ಕ ಹೊಂದುವುದಕ್ಕೆ ಬಹಳ ಮುಜುಗರ ಅನುಭವಿಸುತ್ತಿದ್ದರು ಎಂದು ವಿವರಿಸಿದರು.

ಈಗ ಜಾಹಿರಾತು ತರುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿ ಆಗಿಬಿಟ್ಟಿದೆ. ತನಿಖಾ ಪತ್ರಿಕೋದ್ಯಮ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದ ಹೊಣೆ ಹಿಂದಕ್ಕೆ ಸರಿದಿದೆ. ಸ್ವಾತಂತ್ರ್ಯ ನಂತರದ ಭಾರತೀಯ ಪತ್ರಿಕೋದ್ಯಮ ಅಭಿವೃದ್ಧಿ ಮತ್ತು ಜನಮುಖಿ ಪತ್ರಿಕೋದ್ಯಮವನ್ನು ಪ್ರಥಮ ಆಧ್ಯತೆಯನ್ನಾಗಿಸಿಕೊಂಡಿತ್ತು. ಈಗ ಬದಲಾದ ಸನ್ನಿವೇಶದಲ್ಲಿ, ಜವಾಬ್ದಾರಿ ಮತ್ತು ಹೊಣೆಗಾರಿಕೆಗಳೂ ಬದಲಾಗುತ್ತಿವೆ ಎಂದರು.

ಪತ್ರಕರ್ತರು ಮೊದಲು ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯ, ಯೋಗಕ್ಷೇಮದ ಕಡೆಗೂ ಗಮನ ಹರಿಸಬೇಕು. ಕೆಲಸದ ಒತ್ತಡದ ನಡುವೆಯೂ ಈ ದಿಕ್ಕಿನಲ್ಲೂ ಗಮನ ಹರಿಸಿ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಮತ್ತು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪತ್ರಕರ್ತ ಸಮುದಾಯದ ವೃತ್ತಿಪರತೆ ಮತ್ತು ಪ್ರಗತಿಗೆ ನೀಡಿದ ನೆರವುಗಳನ್ನು ಪಟ್ಟಿ ಮಾಡಿದ ಕೆ.ವಿ.ಪ್ರಭಾಕರ್ ಅವರು, ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಒದಗಿಸುವ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಪತ್ರಿಕಾ ವಿತರಕರನ್ನು ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದರು.

ಪೂನಂಪಾಂಡೆ ಪ್ರಕರಣ ಊಹಾ ಪತ್ರಿಕೋದ್ಯಮಕ್ಕೆ ಉದಾಹರಣೆ

ಪತ್ರಕರ್ತರು ವಿಶ್ವಾಸಾರ್ಹತೆ ಬೆಳೆಸಿಕೊಳ್ಳದಿದ್ದರೆ ವೃತ್ತಿಯ ವಿಶ್ವಾಸಾರ್ಹತೆ ಉಳಿಯುವುದಿಲ್ಲ. ಬಾಲಿವುಡ್ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿ ಸಾವಿನ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿಬಿಟ್ಟವು. ಆದರೆ, ಪೂನಂ ಪಾಂಡೆ ಬದುಕೇ ಇದ್ದಾರೆ. ಸಾವಿನ ಸುದ್ದಿಯನ್ನಾದರೂ ಪ್ರಕಟಿಸುವ ಮೊದಲು ಪರಿಶೀಲಿಸಿಕೊಳ್ಳದಿದ್ದರೆ ಹೇಗೆ? ಇಂತಹ ಪ್ರಕರಣಗಳಿಂದ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಉಳಿಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕಳವಳ ವ್ಯಕ್ತಪಡಿಸಿದರು.

ಅಭಿವೃದ್ಧಿ ಪತ್ರಿಕೋದ್ಯಮ ಹಿಂದೆ ಸರಿದು ಊಹಾ-ಫೋಹ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡಿದ್ದರಿಂದಲೇ ಪೂನಂಪಾಂಡೆ ಥರದ ಘಟನೆಗಳು ಘಟಿಸಿ ಬಿಡುತ್ತವೆ. ಪ್ರತೀ ಪತ್ರಕರ್ತರ ಸಮ್ಮೇಳನಗಳಲ್ಲೂ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಆ ನಿರ್ಣಯಗಳಲ್ಲಿ ಎಲ್ಲವೂ ಜಾರಿ ಆಗುವುದೇ ಇಲ್ಲ. 38ನೇ ರಾಜ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಸರ್ಕಾರದ ಎಲ್ಲಾ ನೆರವನ್ನು ಒದಗಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದರಾದ ಸಿದ್ದೇಶ್ವರ್, ಶಾಸಕರಾದ ಮಾಯ್ಕೊಂಡ ಬಸಂತಪ್ಪ , ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಸೇರಿ ಸಂಘದ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version