ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsav) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುವ ನಾಲ್ಕು ವಿಶೇಷ ಕಾರ್ಯಕ್ರಮಗಳು ಆ.15ರ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ. ಬೆಂಗಳೂರಿನ ಮಾಣೆಕ್ ಶಾ ಪರೇಡ್ ಮೈದಾನ, ಚಾಮರಾಜಪೇಟೆ ಮೈದಾನದಲ್ಲಿನ ಧ್ವಜಾರೋಹಣ, ಕಾಂಗ್ರೆಸ್‌ನ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಹಾಗೂ ವಿಜಯ ನಗರ ಜಿಲ್ಲೆ ಹೊಸಪೇಟೆಯಲ್ಲಿ 405 ಅಡಿ ಎತ್ತರದ ಧ್ವಜಸ್ಥಂಭದ ಮೇಲೆ ಹಾರಾಡಲಿರುವ ತಿರಂಗಾ ನಾಡಿನ ಜನರ ಗಮನ ಸೆಳೆಯಲಿವೆ.
2 ವರ್ಷಗಳ ಬಳಿಕ ಮಾಣೆಕ್ ಶಾ ಮೈದಾನದಲ್ಲಿ ಅದ್ಧೂರಿ ಸ್ವಾತಂತ್ರ್ಯದ ಹಬ್ಬ
ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸ್ವಾತಂತ್ರ್ಯೋತ್ಸವವನ್ನು ಎರಡು ವರ್ಷಗಳ ಬಳಿಕ ಬೆಂಗಳೂರಿನ ಮಾಣೆಕ್ ಶಾ ಮೈದಾನದಲ್ಲಿ ರಾಜ್ಯ ಸರ್ಕಾರದಿಂದ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗಸ್ಟ್ 15ರ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 8.45ಕ್ಕೆ ಮುಖ್ಯಮಂತ್ರಿ ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಭದ್ರತೆಗಾಗಿ ಸುಮಾರು 3 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ | Amrit Mahotsav | ಸೋಮವಾರ ಬೆಂಗಳೂರಿನಲ್ಲಿ ಬಿಎಂಟಿಸಿ ಫ್ರೀ ಸರ್ವಿಸ್, ಮೆಟ್ರೋದಲ್ಲಿ 30 ರೂ.ಗೆ ದಿನದ ಟೋಕನ್
ಪ್ರಥಮ ಬಾರಿ ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ
ಬೆಂಗಳೂರಿನ ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಆ.15ರಂದು ಬೆಳಗ್ಗೆ 8 ಗಂಟೆಗೆ ಉತ್ತರ ವಿಭಾಗದ ಎಸಿ ಡಾ.ಎಂ.ಜಿ. ಶಿವಣ್ಣ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಾರ್ವಜನಿಕ ಬಳಕೆಗೆ ಮೈದಾನ ಮುಕ್ತಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರಾಜ್ಯದ ಗಮನ ಸೆಳೆದಿದೆ. ಮೈದಾನವನ್ನು ಬಿಬಿಎಂಪಿ ಕಂದಾಯ ಇಲಾಖೆ ಆಸ್ತಿ ಎಂದು ಘೋಷಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳ ಬಳಿಕ ಪ್ರಥಮ ಬಾರಿ ಮೈದಾನದಲ್ಲಿ ಧ್ವಜಾರೋಹಣ ಮಾಡಲಾಗುತ್ತಿದೆ. ಹೀಗಾಗಿ ಶಾಂತಿ ಮತ್ತು ಸುವ್ಯವಸ್ಥೆಗಾಗಿ 1000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಡ್ರೋನ್ ಕ್ಯಾಮರಾಗಳ ಮೂಲಕ ನಿಗಾ ಇಡಲಾಗಿದೆ.
ಕಾಂಗ್ರೆಸ್ ಬೃಹತ್ ಸ್ವಾಂತಂತ್ರ್ಯ ನಡಿಗೆಯಲ್ಲಿ 2.5 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದಲ್ಲಿ ಆ.15ರಂದು ಸ್ವಾತಂತ್ರ್ಯ ನಡಿಗೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ 2.5 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಆ.15ರಂದು ಮಧ್ಯಾಹ್ನ 2 ಗಂಟೆಗೆ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಲಾಗುತ್ತದೆ. ಪಾದಯಾತ್ರೆ ಅಲ್ಲಿಂದ ಕೆ.ಆರ್.ಸರ್ಕಲ್, ಹಡ್ಸನ್ ಸರ್ಕಲ್, ಜೆಸಿ.ರೋಡ್, ವಿವಿಪುರಂ ಸರ್ಕಲ್ ಮೂಲಕ ಸಾಗಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತದೆ.
ಹೊಸಪೇಟೆಯಲ್ಲಿ ಅತಿ ಎತ್ತರದ ಧ್ವಜಸ್ಥಂಭದ ಮೇಲೆ ಹಾರಾಡಲಿದೆ ತಿರಂಗಾ
ದೇಶದಲ್ಲೆ ಅತಿ ಎತ್ತರದ ಧ್ವಜಸ್ಥಂಭದ ಮೇಲೆ ಧ್ವಜಾರೋಹಣ ಎಂಬ ಖ್ಯಾತಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ಸಾಕ್ಷಿಯಾಗಲಿದೆ. ಆಗಸ್ಟ್ 15ರಂದು 405 ಎತ್ತರದ ಸ್ಥಂಭದ ಮೇಲೆ ರಾಷ್ಟ್ರಧ್ವಜ ಹಾರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರವಾಸೋದ್ಯಮ ಸಚಿವ ಆನಂದಸಿಂಗ್ ನೇತೃತ್ವದಲ್ಲಿ ಈ ಧ್ವಜಸ್ಥಂಭವನ್ನು ನಿಲ್ಲಿಸುವ ಕಾಮಗಾರಿ ನಡೆದಿದ್ದು, ಸಚಿವ ಆನಂದ್ ಸಿಂಗ್ ಅವರೇ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಇದನ್ನೂ ಓದಿ | Amrit Mahotsav | ಬೆಂಗಳೂರಿನಲ್ಲಿ ಬಿಗಿ ಭದ್ರತೆ, ಚಾಮರಾಜಪೇಟೆ ಮೈದಾನಕ್ಕೆ ಡ್ರೋನ್ ಕಾವಲು