ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಪರಿಷ್ಕರಿಸಲು ರಚನೆ ಮಾಡಿದ್ದ ರಾಜ್ಯ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳನ್ನು ಆ.1ರಿಂದ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಇದೀಗ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು 25 ಪರಿಷ್ಕೃತ ಸ್ಥಾಯಿ ವೇತನ ಶ್ರೇಣಿಗಳನ್ನು, ವೇತನ ಸಂಬಂಧಿತ ಭತ್ಯೆಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಿ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ.ರೇಜು ಆದೇಶ ಹೊರಡಿಸಿದ್ದು, ಯಾರಿಗೆ ಎಷ್ಟು ವೇತನ ಹೆಚ್ಚಾಗಲಿದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
2022ರ ನ.19ರಂದು ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆ ಕುರಿತಂತೆ ತನ್ನ ವರದಿಯನ್ನು ಸಲ್ಲಿಸಿತ್ತು. 7ನೇ ರಾಜ್ಯ ವೇತನ ಆಯೋಗವು ಶಿಫಾರಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಜುಲೈ 1ರಿಂದ ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
1. ಪರಿಷ್ಕೃತ ವೇತನ ಶ್ರೇಣಿಗಳು
ಔದ್ಯಮಿಕ ಕೆಲಸಗಾರರ ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 361.704 (ಆಧಾರ ವರ್ಷ 2001=100) ಅಂಶಗಳ ಸೂಚ್ಯಂಕ ಸರಾಸರಿಯಿಂದ ನಿರೂಪಿಸಲಾದ 2022ರ ಜುಲೈ 1ರ ಜೀವನ ಪರಿಸ್ಥಿತಿ ವೆಚ್ಚಕ್ಕೆ ಪರಿಷ್ಕೃತ ವೇತನ ಶ್ರೇಣಿಗಳು ಹೊಂದಿಕೊಂಡಿರುತ್ತವೆ.
ಪರಿಷ್ಕೃತ ವೇತನ ಶ್ರೇಣಿಗಳು ಮುಖ್ಯ ವೇತನ ಶ್ರೇಣಿ ರೂ.27000-650-29600-725- 32500-800-35700-900-39300-1000-43300-1125-47800-1250-52800-1375-58300- 1500-64300-1650-74200-1900-85600-2300-99400-2700-115600-3100-134200- 3500-155200-4000-179200-4500-206200-5000-2412000 ನಿರ್ದಿಷ್ಟ ಭಾಗಗಳಾಗಿವೆ.
1ನೇ ಜುಲೈ 2012ಕ್ಕೆ ಅನ್ವಯಿಸುವಂತೆ ಹುದ್ದೆಗಳಿಗೆ ಅನ್ವಯವಾಗುವ ಪ್ರಸಕ್ತ ವೇತನ ಶ್ರೇಣಿ ಮತ್ತು ಅದಕ್ಕೆ ಸಂವಾದಿ ಸಮಾನಾಂತರ ಪರಿಷ್ಕೃತ ವೇತನ ಶ್ರೇಣಿಗಳು ಮೇಲಿನ ಕಂಡಿಕೆ 1.1 ರ (2) ಮತ್ತು (3)ನೇ ಅಂಕಣಗಳಲ್ಲಿ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು.
ಜಾರಿಗೆ ಬರುವ ದಿನಾಂಕ:
2024ರ ಪರಿಷ್ಕೃತ ವೇತನ ಶ್ರೇಣಿಗಳು 1ನೇ ಜುಲೈ 2022ರಿಂದ ಜಾರಿಗೆ ಬರುವಂತೆ ಅನ್ವಯವಾಗುತ್ತವೆ. ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನದ ಕಾರಣದಿಂದ ಉಂಟಾಗುವ ವೇತನ ಮತ್ತು ಪಿಂಚಣಿಯ ಆರ್ಥಿಕ ಲಾಭವು ಆಗಸ್ಟ್ 1ರಿಂದ ಲಭ್ಯವಾಗುತ್ತದೆ.
ವೇತನ ಶ್ರೇಣಿಗಳ ಮತ್ತು ಪಿಂಚಣಿಯ ಪರಿಷ್ಕರಣೆಯ ಕಾರಣದಿಂದ ಉಂಟಾಗುವ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿಯ ಮೊತ್ತದಲ್ಲಿನ ಹೆಚ್ಚಳವನ್ನು 1ನೇ ಆಗಸ್ಟ್ 2024 ರಿಂದ ನಗದಾಗಿ ಸಂದಾಯ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.