ಶಿವಮೊಗ್ಗ: ರಾಜ್ಯ ಸರ್ಕಾರದಿಂದ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿ ಅಧಿಕೃತ ಆದೇಶ ಹೊರಡಿಸಿರುವುದಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹರ್ಷ ವ್ಯಕ್ತಪಡಿಸಿದ್ದು, ವೇತನ ಆಯೋಗ ರಚನೆಗೆ ಕ್ರಮ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಐದೂವರೆ ವರ್ಷಗಳ ನಂತರ ಆಯೋಗ ರಚಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ 4 ವರ್ಷ 7 ತಿಂಗಳಲ್ಲಿ ಆಯೋಗ ರಚನೆ ಮಾಡಲಾಗಿದೆ. ಇದರಿಂದ ಸರ್ಕಾರಿ ನೌಕರರ ಬೇಡಿಕೆ ಪರಿಶೀಲನೆ ಶೀಘ್ರ ಮುಗಿಯುವ ಸಾಧ್ಯತೆ ಇದೆ. ಆಯೋಗ ಶಿಫಾರಸುಗಳ ಜಾರಿಯಿಂದ ಬಜೆಟ್‌ನಲ್ಲಿ 12 ಸಾವಿರ ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಇದರಿಂದ 11 ಲಕ್ಷ ನೌಕರರ ಕುಟುಂಬಕ್ಕೆ ಲಾಭವಾಗಲಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಹೇಳಿದ್ದಾರೆ.
ಇದನ್ನೂ ಓದಿ | 7th Pay Commission | 7ನೇ ವೇತನ ಆಯೋಗ ರಚಿಸಿ ಆದೇಶ; ಶಿಫಾರಸು ನೀಡಲು 6 ತಿಂಗಳು ಕಾಲಾವಕಾಶ
ಆದಷ್ಟು ಬೇಗ ಆಯೋಗದ ವರದಿ ಸಲ್ಲಿಕೆಯಾಗಲಿ. ಮಾರ್ಚ್ ಒಳಗಾಗಿ ಶಿಫಾರಸುಗಳ ಅನುಷ್ಠಾನದ ಬಗ್ಗೆ ಘೋಷಣೆಯಾಗಬೇಕು. ಮುಂಬರುವ ಚುನಾವಣೆ ಒಳಗಾಗಿ ಎಲ್ಲ ಪ್ರಕ್ರಿಯೆ ಮುಗಿಯುವ ಆಶಯ ಇದೆ. ಈ ಹಿಂದೆ ವೇತನ ಆಯೋಗ ರಚನೆಗೆ ಹೋರಾಟ ಮಾಡಬೇಕಿತ್ತು, ಇದೇ ಮೊದಲ ಬಾರಿಗೆ ಯಾವುದೇ ಹೋರಾಟ ಇಲ್ಲದೆ, ಅವಧಿಗೂ ಮುನ್ನ ಆಯೋಗ ರಚನೆಯಾಗಿದೆ ಎಂದು ಹೇಳಿದ್ದಾರೆ.
ಕೆ. ಸುಧಾಕರ್ ರಾವ್ 7ನೇ ರಾಜ್ಯ ವೇತನ ಆಯೋಗದ ಅಧ್ಯಕ್ಷ
ಏಳನೇ ವೇತನ ಆಯೋಗವನ್ನು (7th Pay Commission) ರಚಿಸುವುದಾಗಿ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಕೊನೆಗೂ ಈ ಸಂಬಂಧ ಶುಕ್ರವಾರ ಅಧಿಕೃತವಾಗಿ ಆದೇಶ ಹೊರಡಿಸಿತ್ತು. ಈಗಾಗಲೇ ಪ್ರಕಟಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಆಯೋಗದ ಅಧ್ಯಕ್ಷರಾಗಿರಲಿದ್ದು, ಮೂವರು ಸದಸ್ಯರನ್ನು ನೇಮಕ ಮಾಡಲಾಗಿದೆ.
ಮೂಲ ಸೌಕರ್ಯ ಇಲಾಖೆಯ ಜಂಟಿ ಕಾರ್ಯರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ.ರಾಮಮೂರ್ತಿ ಮತ್ತು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ.ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸರ್ಕಾರದ ಸಂಪನ್ಮೂಲಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಮತ್ತು ವಿತ್ತೀಯ ಹೊಣೆಗಾರಿಕೆ ಅಧಿನಿಯಮ-2002ರ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ವೇತನ ಆಯೋಗವು ಕಾರ್ಯನಿರ್ವಹಿಸಬೇಕೆಂದು ಸರ್ಕಾರದ ಆದೇಶಲ್ಲಿ ಸೂಚಿಸಲಾಗಿದೆ.
ನಿರೀಕ್ಷೆಯಂತೆ ಆಯೋಗಕ್ಕೆ ಶಿಫಾರಸು ನೀಡಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಆದರೆ ಫೆಬ್ರವರಿಯಲ್ಲಿಯೇ ಮಧ್ಯಂತರ ಶಿಫಾರಸು ಮಾಡುವಂತೆ ಸ್ಪಷ್ಟವಾಗಿ ಸೂಚನೆಯನ್ನೇನೂ ನೀಡಲಾಗಿಲ್ಲ. ಆಯೋಗ ರಚನೆ ಕುರಿತು ಮುಖ್ಯಮಂತ್ರಿಗಳೇ ಪ್ರಕಟಿಸಿದ್ದರೂ ಆದೇಶ ಹೊರ ಬೀಳದೇ ಇರುವುದಕ್ಕೆ ನೌಕರರಲ್ಲಿ ಅಸಮಧಾನ ಉಂಟಾಗಿತ್ತು. ಪ್ರತಿಭಟನೆಗೆ ಕೆಲವರು ಮುಂದಾಗಿದ್ದರು.
ಈ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ | Bharatiya Janata Party | ಬೃಹತ್ ನವಶಕ್ತಿ ಸಮಾವೇಶಕ್ಕೆ ಫುಲ್ ರೆಡಿ, ವೇದಿಕೆಯಲ್ಲೇ ವಾಲ್ಮೀಕಿ ಪುತ್ಥಳಿ