Site icon Vistara News

7th Pay Commission: ವೇತನ ಹೆಚ್ಚಿಸಿದ್ದಕ್ಕೆ ನೌಕರರಿಂದ ಅಭಿನಂದನೆ; ಸರ್ಕಾರದ ನಿಲುವುಗಳಿಗೆ ತಕ್ಕಂತೆ ಕೆಲಸ ಮಾಡಿ ಎಂದ ಸಿಎಂ

7th Pay Commission

ಬೆಂಗಳೂರು: 7ನೇ ವೇತನ ಆಯೋಗದ ವರದಿ (7th Pay Commission) ಜಾರಿ ಮಾಡಲು ಒಪ್ಪಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ನೇತೃತ್ವದಲ್ಲಿ ನೌಕರರು ಅಭಿನಂದನೆ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಅವರನ್ನು ನೌಕರರ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು, ಸರ್ಕಾರದ ನಿಲುವುಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. 7ನೇ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ಪೂರ್ಣವಾಗಿ ಒಪ್ಪಿಕೊoಡಿದೆ. ಇದರಿoದ ಸರ್ಕಾರಕ್ಕೆ 20 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ನೌಕರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ | 7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿದ್ದರಾಮಯ್ಯ

ಇತರ ಬೇಡಿಕೆಗಳ ಈಡೇರಿಸಲು ಮನವಿ

ಇನ್ನು ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಇತರ ಬೇಡಿಕೆಗಳ ಈಡೇರಿಕೆಗಾಗಿ ನೌಕರರ ಸಂಘವು ಜುಲೈ 23ರಂದು ಪ್ರಮುಖ ಸಭೆ ನಡೆಸಲು ತೀರ್ಮಾನಿಸಿದೆ. “ಹಳೇ ಪಿಂಚಣಿ ಯೋಜನೆ, ನೌಕರರಿಗೆ ಆರೋಗ್ಯ ಯೋಜನೆ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಬಾಕಿ ಇದೆ. ಇಷ್ಟೆಲ್ಲ ವಿಚಾರಗಳ ಕುರಿತು ಚರ್ಚಿಸಲು ರಾಜ್ಯದ ಸರ್ಕಾರಿ ನೌಕರರ ಸಂಘಗಳ ಎಲ್ಲ ವೃಂದಗಳು, ರಾಜ್ಯ ಕೇಡರ್‌ ಅಸೋಸಿಯೇಷನ್‌ ಹಾಗೂ ಎಕ್ಸಿಕ್ಯೂಟಿವ್‌ ಸಭೆಯನ್ನು ಜುಲೈ 23ರಂದು ಕರೆಯಲಾಗಿದೆ. ಸಭೆಯಲ್ಲಿ ಎಲ್ಲ ವಿಷಯಗಳ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಸಿ.ಎಸ್.ಷಡಾಕ್ಷರಿ ಮಾಹಿತಿ ನೀಡಿದ್ದಾರೆ.

ವೇತನ ಆಯೋಗದ ಪ್ರಮುಖ ಶಿಫಾರಸುಗಳು

1. 7ನೇ ರಾಜ್ಯ ವೇತನ ಆಯೋಗವು ಶೇ.31 ತುಟ್ಟಿ ಭತ್ಯೆಯನ್ನು ವಿಲೀನಗೊಳಿಸುವ ಮೂಲಕ ಮತ್ತು ಶೇ.27.50ರಷ್ಟು ಫಿಟ್‌ಮೆಂಟ್ ಪ್ರಯೋಜನವನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ತಿಂಗಳಿಗೆ ಅಸ್ತಿತ್ವದಲ್ಲಿರುವ ರೂ.17,000 ರಿಂದ ರೂ.27,000ಕ್ಕೆ ಪರಿಷ್ಕರಿಸುವುದು.

2. ವೇತನ ರಚನೆಯಲ್ಲಿ ಕನಿಷ್ಠ ಮತ್ತು ಗರಿಷ್ಠ ವೇತನದ ನಡುವೆ ಅಸ್ತಿತ್ವದಲ್ಲಿರುವ 1:8.86 ರ ಅನುಪಾತವನ್ನು ಹೆಚ್ಚು ಕಡಿಮೆ ಹಾಗೇ ಉಳಿಸಿಕೊಳ್ಳುವುದು ಮತ್ತು ಗರಿಷ್ಠ ವೇತನವನ್ನು 2,41,200 ರೂ.ಗೆ ನಿಗದಿಪಡಿಸುವುದು.

3. ಹೊಸ ವೇತನ ಶ್ರೇಣಿಗಳನ್ನು ದಿನಾಂಕ: 01.07.2022 ರಿಂದ ಕಾಲ್ಪನಿಕವಾಗಿ ಅನ್ವಯಿಸುತ್ತದೆ. ಅನುಷ್ಠಾನಗೊಳಿಸುವ ನೈಜ್ಯ ದಿನಾಂಕವನ್ನು ರಾಜ್ಯ ಸರ್ಕಾರವು ನಿರ್ಧರಿಸುವುದು.

4. ನೌಕರರ ಕುಟುಂಬದ ಕನಿಷ್ಠ ಬಳಕೆ ವೆಚ್ಚದ ಲೆಕ್ಕಾಚಾರಕ್ಕಾಗಿ ಬಳಸಲಾಗುವ ಅಕ್ರೋಯ್ತಾ
ಸೂತ್ರವನ್ನು ಚಾಲ್ತಿಯಲ್ಲಿರುವ ‘1’ ಮತ್ತು ‘0.8’, ರ ಪ್ರಮಾಣದ ಬದಲಿಗೆ ಪ್ರಾತಿನಿಧಿಕ ಕುಟುಂಬದ
ವಯಸ್ಕ ಪುರುಷ ಮತ್ತು ಮಹಿಳಾ ಸದಸ್ಯರಿಗೆ ‘1’ ಸಮಾನ ಪ್ರಮಾಣವನ್ನು ನೀಡುವ ಮೂಲಕ, ಎರಡೂ ಲಿಂಗಗಳನ್ನು ಸಮಾನವಾಗಿ ಪರಿಗಣಿಸಿ, ಸ್ವಲ್ಪ ಮಟ್ಟಿಗೆ ಮಾರ್ಪಡಿಸಲಾಗಿದೆ.

5. ಪರಿಷ್ಕೃತ ಪ್ರತ್ಯೇಕ (Individual) ವೇತನ ಶ್ರೇಣಿಗಳೊಂದಿಗೆ, ಪರಿಷ್ಕೃತ ಮುಖ್ಯ ಶ್ರೇಣಿಯನ್ನು ರೂಪಿಸಲಾಗಿದೆ. ಚಾಲ್ತಿಯಲ್ಲಿರುವ ರೂ.400ರಿಂದ ರೂ.3,100ರ ಬದಲಿಗೆ ವಾರ್ಷಿಕ ಬಡ್ತಿ ದರಗಳು ಮುಖ್ಯ ಶ್ರೇಣಿಯಾದ್ಯಂತ ರೂ.650 ರಿಂದ ರೂ.5,000 ವರೆಗೆ ಆಗಿರುತ್ತದೆ.

6. ಪ್ರಸ್ತುತ ಜಾರಿಯಲ್ಲಿರುವಂತೆ, ಒಂದು ಕ್ಯಾಲೆಂಡರ್ ವರ್ಷದಲ್ಲಿ 1ನೇ ಜನವರಿ ಅಥವಾ 1ನೇ ಜುಲೈನಲ್ಲಿ ವಾರ್ಷಿಕ ಬಡ್ತಿ ದರಗಳನ್ನು ಮಂಜೂರು ಮಾಡುವುದನ್ನು ಮುಂದುವರುಸಲು ಆಯೋಗವು ಶಿಫಾರಸು ಮಾಡುತ್ತದೆ.

7. ಕೇಂದ್ರದ ತುಟ್ಟಿ ಭತ್ಯೆ ಸೂತ್ರ ಮತ್ತು ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಮುಂದುವರಿಸಲಾಗುತ್ತದೆ. ದಿನಾಂಕ: 01.07.2022 ರಂತೆ 361.704 ಸೂಚ್ಯಂಕ ಮಟ್ಟದಲ್ಲಿ ಸಂಪೂರ್ಣವಾಗಿ ತಟಸ್ಥಗೊಂಡಿರುವ ತುಟ್ಟಿ ಭತ್ಯೆಯೊಂದಿಗೆ, ದಿನಾಂಕ: 01.07.2022 ರಿಂದ, ಭಾರತ ಸರ್ಕಾರವು ಮಂಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ, ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಬೇಕಾದ ತುಟ್ಟಿಭತ್ಯೆಯು ಪರಿಷ್ಕೃತ ಮೂಲ ವೇತನದ ಶೇ.0.722 ರಷ್ಟು ಆಗಿರುತ್ತದೆ.

8. ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಯ ವೇತನ ಶ್ರೇಣಿಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕರಿಸಿದ ರೀತಿಯಲ್ಲಿಯೇ ಪರಿಷ್ಕರಿಸಬೇಕು.

9. ರಾಜ್ಯ ಸರ್ಕಾರವು, ಕೇಂದ್ರದ ವೇತನ ರಚನೆಯನ್ನು ಅಳವಡಿಸಿಕೊಳ್ಳಲು ಒಂದು ವಿಧಾನವನ್ನು ಆಯೋಗವು ರೂಪಿಸಿದೆ. ಆದಾಗ್ಯೂ ಪ್ರಸ್ತುತ, ರಾಜ್ಯ ಸರ್ಕಾರವು ಮುಖ್ಯ ಶ್ರೇಣಿ ಮತ್ತು ವಿಭಜಿತ ಪ್ರತ್ಯೇಕ ವೇತನ ಶ್ರೇಣಿಗಳನ್ನು ಒಳಗೊಂಡಿರುವ ಅಸ್ತಿತ್ವದಲ್ಲಿರುವ ವೇತನದ ಮಾದರಿಯನ್ನು ರಾಜ್ಯ ಸರ್ಕಾರವು ಉಳಿಸಿಕೊಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದಿನ ವೇತನವನ್ನು ಪರಿಷ್ಕರಿಸಿದಾಗ ರಾಜ್ಯ ಸರ್ಕಾರವು ಕೇಂದ್ರೀಯ ವೇತನ ರಚನೆಯ ಆಧಾರದ ಮೇಲೆ ಪರ್ಯಾಯ ರಚನೆಯನ್ನು ಅಳವಡಿಸಿಕೊಳ್ಳಲು ಸೂಕ್ತ ಸಮಯವಾಗಿರುತ್ತದೆ.

10. ಮಾಸಿಕ ಪಿಂಚಣಿ ಪ್ರಮಾಣವು ಅಂತಿಮವಾಗಿ ಪಡೆದ ಮೂಲ ವೇತನದ ಶೇ.50ರಷ್ಟರಲ್ಲಿಯೇ ಮುಂದುವರಿಯುತ್ತದೆ ಮತ್ತು ಕುಟುಂಬ ಪಿಂಚಣಿಯು ಅಂತಿಮವಾಗಿ ಪಡೆದ ಮೂಲ ವೇತನದ ಶೇ.30ರಷ್ಟು ಮುಂದುವರಿಯುತ್ತದೆ. ಅದರಂತೆ, ಕನಿಷ್ಠ ಪಿಂಚಣಿಯನ್ನು ರೂ.13,500 (ಕನಿಷ್ಠ ವೇತನ ರೂ. 27,000ರ ಶೇ.50 ರಷ್ಟು) ಮತ್ತು ಗರಿಷ್ಠ ಪಿಂಚಣಿಯನ್ನು ರೂ.1,20,600 (ಗರಿಷ್ಠ ರೂ.2,41,200 ವೇತನದ ಶೇ.50 ರಷ್ಟು) ಪರಿಷ್ಕರಿಸುವುದು.

11. 70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ.10 ರಷ್ಟನ್ನು ಆಯೋಗವು ಶಿಫಾರಸು ಮಾಡುತ್ತದೆ.

12. ಆಯೋಗವು ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರನ್ನು ಒಳಗೊಳ್ಳುವ ಉದ್ದೇಶಿತ “ಸಂಧ್ಯಾಕಿರಣ” ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಒತ್ತಾಯಿಸುತ್ತದೆ ಮತ್ತು ಈ ಮಧ್ಯೆ, ರಾಜ್ಯ ಸರ್ಕಾರವು ಈ ಯೋಜನೆಯ ಅನುಷ್ಠಾನವನ್ನು ಪ್ರಾರಂಭಿಸುವವರೆಗೆ ಎಲ್ಲಾ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ವೈದ್ಯಕೀಯ ಭತ್ಯೆಯಾಗಿ ತಿಂಗಳಿಗೆ ರೂ.500 ಪಾವತಿಸುವುದು.

13. ಪಿಂಚಣಿದಾರರು ಆತ ಅಥವಾ ಆಕೆಯು ಮರಣದ ಹೊಂದಿದಲ್ಲಿ, ಅವರ ಅಂತ್ಯಕ್ರಿಯೆ ವೆಚ್ಚಗಳನ್ನು ಭರಿಸಲು ರೂ.10,000 ಗಳ ಮೊತ್ತವನ್ನು ಪಿಂಚಣಿದಾರರ ನಾಮ ನಿರ್ದೇಶಿತನಿಗೆ ಪಾವತಿಸುವುದು.

14. ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು, 2002ರಲ್ಲಿ ಮಹಿಳಾ ಸರ್ಕಾರಿ ನೌಕರರು / ಪಿಂಚಣಿದಾರರು ತಮ್ಮ ಮಗು / ಮಕ್ಕಳನ್ನು ಕೆಲವು ಸಂದರ್ಭಗಳಲ್ಲಿ ಸಂಗಾತಿಯ ಬದಲಿಗೆ ಕುಟುಂಬ ಪಿಂಚಣಿಗೆ ನಾಮ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಬಹುದು ಎಂದು ಆಯೋಗವು ಪ್ರಸ್ತಾಪಿಸಿದೆ.

15. ಎ, ಬಿ ಮತ್ತು ಸಿ ಸ್ಥಳಗಳ ಮೂರು ವರ್ಗಗಳಿಗೆ ಅಸ್ತಿತ್ವದಲ್ಲಿರುವ ಶೇ.24, ಶೇ.16 ಮತ್ತು ಶೇ.8 ರಿಂದ ಪರಿಷ್ಕೃತ ಮೂಲ ವೇತನದ ಕನಿಷ್ಠ ಶೇ.20, ಶೇ.15 ಮತ್ತು ಶೇ. 7.5 ಕ್ಕೆ ಅನುಕ್ರಮವಾಗಿ ಮನೆ ಬಾಡಿಗೆ ದರಗಳನ್ನು ಪರಿಷ್ಕರಿಸಲಾಗಿದೆ. ಶಿಫಾರಸು ಮಾಡಲಾದ ಪರಿಷ್ಕೃತ ವೇತನ ಶ್ರೇಣಿಗಳ ಆಧಾರದ ಮೇಲೆ, ಇದು 3 ವರ್ಗಗಳಿಗೆ ತಿಂಗಳಿಗೆ ರೂ.1,320, ರೂ.1,330 ಮತ್ತು ರೂ.690 ಅನುಕ್ರಮವಾಗಿ ಹೆಚ್ಚಳವಾಗಿರುವುದರಿಂದ ನಿಶ್ಚಳವಾಗಿ ಮನೆ ಬಾಡಿಗೆ ಭತ್ಯೆಯಲ್ಲಿ ಸುಮಾರು ಶೇ.40 ರಷ್ಟು ಹೆಚ್ಚಳವಾಗಿದೆ.

16. ಸೋಲಾರ್ ವಾಟರ್ ಹೀಟರ್, ಸೋಲಾರ್ ಕುಕ್ಕರ್. ಮೊಪೆಡ್ ಮತ್ತು ಮೋಟಾರು ವಾಹನಗಳ ದುರಸ್ತಿ ಮತ್ತು ಉಪಕರಣಗಳಿಗೆ ಮುಂಗಡಗಳನ್ನು ಸ್ಥಗಿತಗೊಳಿಸುವುದು.

17. ವೃಂದ ಎ ನೌಕರರಿಗೆ ಗರಿಷ್ಠ ರೂ.65 ಲಕ್ಷ ಮತ್ತು ಇತರ ನೌಕರರಿಗೆ ರೂ.40 ಲಕ್ಷಗಳ ಗೃಹ ನಿರ್ಮಾಣ ಭತ್ಯೆಯನ್ನು ಪರಿಷ್ಕರಿಸಿದೆ. ನೌಕರರ ಸೇವಾವಧಿಯಲ್ಲಿ ರಜೆ ಪ್ರಯಾಣ ಭತ್ಯೆಯ ಪ್ರಯೋಜನವನ್ನು ಎರಡು ಬಾರಿಯಿಂದ ಮೂರು ಬಾರಿಗೆ ಹೆಚ್ಚಿಸುವುದು.

18. ಸರ್ಕಾರಿ ನೌಕರರ ತರಬೇತಿಯ ಗುಣಮಟ್ಟವನ್ನು ಸುಧಾರಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಗುರುತಿಸಿ, ತರಬೇತಿ ಸಂಸ್ಥೆಗಳಲ್ಲಿನ ಅಧ್ಯಾಪಕರ ಗುಣಮಟ್ಟವನ್ನು ಹೆಚ್ಚಿಸಲು, ಎಲ್ಲ ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ನಿಯೋಜಿತ ಅಥವಾ ಅಧ್ಯಾಪಕರಾಗಿ ನೇಮಕಗೊಂಡ ನೌಕರರಿಗೆ ಅಸ್ತಿತ್ವದಲ್ಲಿರುವ ವಿಶೇಷ ಭತ್ಯೆಯನ್ನು ಶೇ.25ಕ್ಕೆ ಹೆಚ್ಚಿಸುವುದು.

19. ಪೋಷಕರು ಅಥವಾ ಅತ್ತೆ/ಮಾವಂದಿರು ಅಥವಾ ಕುಟುಂಬದ ಹಿರಿಯರು ಅಥವಾ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಸಣ್ಣ ಮಕ್ಕಳನ್ನು ಆರೈಕೆ ಮಾಡಲು ನೌಕರರಿಗೆ ಆರೈಕೆ ರಜೆ ಎಂಬ ಹೊಸ ಪ್ರಯೋಜನವನ್ನು ಒದಗಿಸಬೇಕೆಂದು ಹಾಗೂ ರಜೆಯ ಅವಧಿಯಲ್ಲಿ ಶೇ.50 ರಷ್ಟು ವೇತನದೊಂದಿಗೆ ಈ ರಜೆಯ ಗರಿಷ್ಠ ಅವಧಿಯು 180 ದಿನಗಳಿಗೆ (6 ತಿಂಗಳು) ನಿಗದಿಪಡಿಸಲು ಆಯೋಗವು ಶಿಫಾರಸು ಮಾಡಿದೆ.

ಇದನ್ನೂ ಓದಿ: 7th Pay Commission: 7ನೇ ವೇತನ ಆಯೋಗ ಜಾರಿ; ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಪಟ್ಟಿ

20. ಸೇವೆಗೆ ಸೇರುವ 60 ದಿನಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ಸೇವೆಗೆ ಸೇರುವ ಸಮಯದಲ್ಲಿ ನವಜಾತ ಶಿಶುವಿನ ಆರೈಕೆಯ ಅವಧಿಯಲ್ಲಿ ಇರುವವರಿಗೆ 18 ವಾರಗಳ ಹೆರಿಗೆ ರಜೆಯನ್ನು ಶಿಫಾರಸು ಮಾಡಿದೆ.

Exit mobile version