Site icon Vistara News

7th Pay Commission: ಸರ್ಕಾರಕ್ಕೆ ಶೀಘ್ರ 7ನೇ ವೇತನ ಆಯೋಗದ ವರದಿ ಸಲ್ಲಿಸಿ: ಷಡಾಕ್ಷರಿ ನಿಯೋಗ ಒತ್ತಾಯ

Sudhakar Rao C. S. Shadakshari 7th Pay Commission

ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಸಂಘದ ಪದಾಧಿಕಾರಿಗಳ ನಿಯೋಗವು 7ನೇ ವೇತನ ಆಯೋಗದ (7th Pay Commission) ಅಧ್ಯಕ್ಷ ಸುಧಾಕರ್ ರಾವ್ ಮತ್ತು ಸದಸ್ಯರನ್ನು ಶನಿವಾರ (ಜ.೨೧) ಭೇಟಿ ಮಾಡಿದ್ದು, ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಿದರು.

ಆಯೋಗದ ಅಧ್ಯಕ್ಷ ಸುಧಾಕರ್‌ ರಾವ್‌ ಮಾತನಾಡಿ, ಆಯೋಗವು ಶೀಘ್ರವಾಗಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ಈಗಾಗಲೇ ಪ್ರಶ್ನಾವಳಿ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅದರ ಪ್ರತಿಯನ್ನು ರಾಜ್ಯಾಧ್ಯಕ್ಷರಿಗೆ ನೀಡಿ ತಮ್ಮ ಸಂಘ ಹಾಗೂ ಸರ್ಕಾರಿ ನೌಕರರ ಸಹಕಾರ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕರು ಆಯೋಗದ ಎಲ್ಲ ಸದಸ್ಯರನ್ನು ಅಭಿನಂದಿಸಿ ಮಾತನಾಡಿ, 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ನಮ್ಮ ಸಂಘವು ರಾಜ್ಯದ ಏಕೈಕ ಬೃಹತ್ ಸಂಘಟನೆಯಾಗಿದ್ದು, ಮುಂದಿನ ದಿನಗಳಲ್ಲಿ ನೀತಿ ಸಂಹಿತೆ ಜಾರಿಗೊಳ್ಳುವುದರಿಂದ ಹಾಗೂ 2023 ಮಾರ್ಚ್ 31ಕ್ಕೆ 5 ವರ್ಷ ಪೂರ್ಣಗೊಳ್ಳುವ ಮುಂಚಿತವಾಗಿ ಸರ್ಕಾರಕ್ಕೆ ವೇತನ ಆಯೋಗದ ವರದಿಯನ್ನು ಸಲ್ಲಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ | IND VS NZ: ರಾಯ್‌ಪುರದಲ್ಲಿ ಟೀಮ್​ ಇಂಡಿಯಾದ ರಾಯಭಾರ; ಕಿವೀಸ್​ ವಿರುದ್ಧ 8 ವಿಕೆಟ್​ ಗೆಲುವು

ವೇತನ ಹಾಗೂ ಭತ್ಯೆಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ವೇತನ ಆಯೋಗಗಳು 2 ಹಂತಗಳಲ್ಲಿ ವರದಿಗಳನ್ನು ನೀಡುವ ಸಂಪ್ರದಾಯವಿದ್ದು, ಅದರಂತೆ ಫೆಬ್ರವರಿ 2023 ಅಂತ್ಯದೊಳಗೆ ಪ್ರಥಮ ಹಂತದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ರಾಜ್ಯ ಸರ್ಕಾರಿ ನೌಕರರು ಹಾಲಿ ಪಡೆಯುತ್ತಿರುವ ವೇತನ ಭತ್ಯೆಗಳಿಗೆ ಗರಿಷ್ಠ ಪ್ರಮಾಣದ ಸೌಲಭ್ಯವನ್ನು ಕಲ್ಪಿಸಲು ಶಿಫಾರಸು ಮಾಡುವಂತೆ ಮನವಿ ಮಾಡಲಾಯಿತು.

ರಾಜ್ಯ ಸಂಘ ಈಗಾಗಲೇ ವೃಂದ ಸಂಘಗಳ ಸಭೆಯನ್ನು ಕರೆದು ವೇತನ ಭತ್ಯೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಕ್ರೋಢೀಕೃತ ವಿವಿಧ ಇಲಾಖೆಗಳ ಸಮಗ್ರ ಮಾಹಿತಿಯ ವರದಿಯನ್ನು ಆಯೋಗದ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳಾದ ಆರ್. ಶ್ರೀನಿವಾಸ್‌, ಮಲ್ಲಿಕಾರ್ಜುನ ಬಳ್ಳಾರಿ ಎಂ.ವಿ.ರುದ್ರಪ್ಪ, ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನ ಗೌಡ ಪಾಟೀಲ್, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ ಬಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Midday Meal: ಸರ್ಕಾರಿ ಶಾಲೆಯಲ್ಲಿ ಟೀಚರ್ ಮಾಡಿದ್ದೇ ಪಾಠ, ಮಕ್ಕಳು ಆಡಿದ್ದೇ ಆಟ; ಪಾಠವೂ ಇಲ್ಲ ಬಿಸಿಯೂಟವೂ ಇಲ್ಲ

Exit mobile version