ಮಡಿಕೇರಿ: ಕೊಡಗು ಜಿಲ್ಲೆ (Kodagu News) ಮಡಿಕೇರಿ ತಾಲೂಕಿನ ಕರಡ ಕೀಮಲೆ ಕಾಡ್ ಸಮೀಪದಲ್ಲಿ ಕಾಡಾನೆಯು ಮರಿಗೆ ಜನ್ಮ ನೀಡಿದ್ದು, ಮುದ್ದಾದ ಆನೆ ಮರಿ ನೋಡಲು ಸ್ಥಳಕ್ಕೆ ತಂಡೋಪ ತಂಡವಾಗಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಮೊಣ್ಣಕುಟ್ಟಂಡ ಮಂಜು ಎಂಬುವವರ ಮನೆಯ ಬಳಿ ಸೋಮವಾರ ರಾತ್ರಿ ಹೆಣ್ಣುಮರಿಗೆ ಕಾಡಾನೆ ಜನ್ಮ ನೀಡಿದೆ.
ಮರಿಗಾಗಿ ತಾಯಿ ಆನೆ ತೋಟದಲ್ಲಿ ಕಾದು ನಿಂತಿದ್ದು, ಸ್ಥಳಕ್ಕೆ ವಿರಾಜಪೇಟೆ ಅರಣ್ಯ ವಲಯಾದಿಕಾರಿಗಳಾದ ಕಳ್ಳಿರ ದೇವಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಮರಿಯನ್ನ ತಾಯಿಯೊಂದಿಗೆ ಸೇರಿಸಲು ಅರಣ್ಯ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.
ಹೊನ್ನಾಳಿಯಲ್ಲಿ ವೃದ್ಧನನ್ನು ಬಲಿ ಪಡೆದಿದ್ದ ಕಿಲ್ಲರ್ ಕೋತಿ ಅರೆಸ್ಟ್
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ವೃದ್ಧನ ಮೇಲೆ ದಾಳಿ ನಡೆಸಿ ಕೊಂದಿದ್ದ ಕಿಲ್ಲರ್ ಕೋತಿಯನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಕಳೆದ ಎರಡು ದಿನಗಳ ಹಿಂದೆ ರಾತ್ರಿ ಮೂತ್ರ ವಿಸರ್ಜನೆ ತೆರಳಿದ್ದಾಗ ಕೋತಿ ಏಕಾಏಕಿ ದಾಳಿ ನಡೆಸಿದ್ದರಿಂದ ಗುತ್ಯಪ್ಪ (70) ಎಂಬುವವರು ಗಂಭೀರವಾಗಿ ಗಾಯಗೊಂಡು, ಮೃತಪಟ್ಟಿದ್ದರು. ಇದೀಗ ಆ ಕೋತಿಯನ್ನು ಸೆರೆಹಿಡಿಯಲಾಗಿದೆ.
ಸೋಮವಾರದಿಂದ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು. ಮಂಗಳವಾರ ಅರಣ್ಯ ಸಿಬ್ಬಂದಿ ಕೈಗೆ ಕಿಲ್ಲರ್ ಕೋತಿ ಸಿಕ್ಕಿಬಿದ್ದಿದೆ. ಕೋತಿಯನ್ನು ಹಿಡಿದು ಬೋನಿನಲ್ಲಿ ಇಡಲಾಗಿದೆ. ಕಾಡಿನ ಪಕ್ಕದಲ್ಲೇ ಇರುವ ಹಿನ್ನೆಲೆಯಲ್ಲಿ ವನ್ಯಜೀವಿಗಳಿಂದ ರಕ್ಷಣೆ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಜತೆಗೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Assault Case : ಜಗಳ ಬಿಡಿಸಲು ಹೋದ ಕಾನ್ಸ್‌ಟೇಬಲ್‌ಗೆ ಬೈದು ಕೆನ್ನೆಗೆ ಬಾರಿಸಿದ!
ಚಿರತೆ ದಾಳಿ, ಆನೆ ದಾಳಿ, ಹುಲಿ-ಕರಡಿ ದಾಳಿ ಆಯಿತು. ಈಗ ಮಂಗಗಳು ಕೂಡ ಮನುಷ್ಯರನ್ನು ಬೆನ್ನಟ್ಟಿ ಕೊಲ್ಲುವ ಪರಿಸ್ಥಿತಿ ಬಂದಿದೆ. ದಾವಣಗೆರೆ ಜಿಲ್ಲೆಯ (Davanagere News) ಹೊನ್ನಾಳಿ ತಾಲೂಕಿನ ಅರಕೆರೆ ಎ.ಕೆ. ಕಾಲೊನಿಯಲ್ಲಿ ಮಂಗನ ದಾಳಿಗೆ (Monkey Attack) ವ್ಯಕ್ತಿಯೊಬ್ಬರು ಬಲಿಯಾಗಿದ್ದರು.
70 ವರ್ಷದ ಗುತ್ಯಪ್ಪ ಮನೆ ಪರಿಸರದಲ್ಲಿ ಮಂಗಗಳ ಉಪಟಳ ಭಾರಿ ಜಾಸ್ತಿಯಾಗಿತ್ತು. ಭಾನುವಾರ ರಾತ್ರಿ ಗುತ್ಯಪ್ಪ ಅವರು ಮೂತ್ರ ವಿಸರ್ಜನೆಗೆಂದು ಎದ್ದು ಹೊರಬಂದಾಗ ಅವರ ಮನೆಯ ಅಂಗಳದಲ್ಲೇ ಇದ್ದ ಕೋತಿ ಅವರ ಮೇಲೆ ದಾಳಿ ಮಾಡಿ, ಅವರ ಮುಖ ಮತ್ತು ಕೈಗಳಿಗೆ ಕಚ್ಚಿ, ಪರಚಿ ಗಾಯ ಮಾಡಿತ್ತು. ಗುತ್ಯಪ್ಪ ಅವರ ಚೀರಾಟ ಕೇಳಿ ಮನೆಯವರು ಹೊರಗೋಡಿ ಬಂದಾಗ ಕೋತಿ ಅವರನ್ನು ಬಿಟ್ಟು ಪರಾರಿಯಾಗಿತ್ತು.
ಇದನ್ನೂ ಓದಿ | Physical Abuse : ಕಾಮುಕನಾದ ಉಪನ್ಯಾಸಕ; ವಿಡಿಯೊ ಮಾಡಿ ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್!
ಆದರೆ, ಅಷ್ಟು ಹೊತ್ತಿಗೆ ಗುತ್ಯಪ್ಪ ಅವರು ನೆಲಕ್ಕೆ ಉರುಳಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅವರು ಮಂಗದ ದಾಳಿಗೆ ಒಳಗಾದ ಹೊತ್ತಿನಲ್ಲಿ ಭಯದಿಂದ ಹೃದಯಾಘಾತವಾಗಿ ಪ್ರಾಣ ಕಳೆದುಕೊಂಡಿರಬಹುದು ಎಂದು ಹೇಳಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ