ಬೆಂಗಳೂರು : ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ (Virat kohli) ಗುರುವಾರ ನಡೆದ ಏಷ್ಯಾ ಕಪ್‌ನ ಅಫಘಾನಿಸ್ತಾನ ತಂಡದ ವಿರುದ್ಧದ ಪಂದ್ಯದಲ್ಲಿ ೧೨೨ ರನ್ ಬಾರಿಸುವ ಮೂಲಕ ತಮ್ಮ ಎರಡೂವರೆ ವರ್ಷಗಳ ಶತಕದ ಬರ ನೀಗಿಸಿಕೊಂಡಿದ್ದಾರೆ. ಈ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ದೇಶಾದ್ಯಂತ ಇರುವ ಅವರ ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಏತನ್ಮಧ್ಯೆ, ಶಿವಮೊಗ್ಗದ ಚಿಕ್ಕ ಮರಡಿಯಲ್ಲಿ ಮಾರಿಕಾಂಬ ಯುವಕರ ಬಳಗದ ಆಯೋಜಿಸಿದ್ದ ಗಣೇಶೋತ್ಸವದ ಪೆಂಡಾಲ್ ಬಳಿಯೂ ವಿರಾಟ್ ಕೊಹ್ಲಿಯ ಬ್ಯಾನರ್ ಅಳವಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ವಿರಾಟ್ ಕೊಹ್ಲಿ ೭೧ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ತಕ್ಷಣ ಸ್ಥಳೀಯ ವಿರಾಟ್ ಕೊಹ್ಲಿಯ ಅಭಿಮಾನಿಗಳು ಸುಮಾರು ೨೦ ಅಡಿ ಎತ್ತರದ ಬ್ಯಾನರ್ ಸಿದ್ಧಪಡಿಸಿ ಗಣೇಶ ಪೆಂಡಾಲ್ ಬಳಿ ಅಳವಡಿಸಿದ್ದಾರೆ. ಚಿತ್ರದ ಮೇಲೆ ಕಿಂಗ್ ರಿಟರ್ನ್ಸ್ ಎಂದು ಬರೆದಿದ್ದರೆ. ಕೆಳಗಡೆ “ಕದನದೊಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ’ ಎಂದು ಬರೆದಿದ್ದಾರೆ. ಇದು ೧೯೭೭ರಲ್ಲಿ ತೆರೆಕಂಡ ಬಬ್ರುವಾಹನ ಸಿನಿಮಾಕ್ಕೆ ಹುಣಸೂರು ಕೃಷ್ಣಮೂರ್ತಿ ಅವರು ಬರೆದ ಹಾಡಿನ ಸಾಲು. ಡಾಕ್ಟರ್ ರಾಜ್‌ಕುಮಾರ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡು ಇಂದಿಗೂ ಜನಪ್ರಿಯ.
ಚಿಕ್ಕಮರಡಿಯ ಕೊಹ್ಲಿ ಅಭಿಮಾನಿಗಳ ಬ್ಯಾನರ್ ಅನ್ನು ಆರ್‌ಸಿಬಿ ೧೨ ಮ್ಯಾನ್ ಆರ್ಮಿ ಎಂಬ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಹಲವರು ಅಭಿಮಾನ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ | Virat Kohli | ಸ್ಥೈರ್ಯ ಕಳೆದುಕೊಂಡು ಒಂದು ತಿಂಗಳು ಬ್ಯಾಟೇ ಮುಟ್ಟಿರಲಿಲ್ಲ ಎಂದ ವಿರಾಟ್ ಕೊಹ್ಲಿ!