ಬೆಂಗಳೂರು: ಸಿದ್ದರಾಮಯ್ಯ ಅವರು ಮಂಡಿಸಿರುವ 14ನೇ ಬಜೆಟ್ ಅನ್ನೋದು ಬಿಟ್ಟರೆ ಬೇರೆ ವಿಶೇಷತೆ ಏನೂ ಇಲ್ಲ ಎಂದು ಬಿಜಿಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ಬಹಳ ನಿರೀಕ್ಷೆ ಇತ್ತು. 5 ಗ್ಯಾರಂಟಿಗಳನ್ನು ಸಂಪೂರ್ಣ ವಾಗಿ ಜಾರಿ ಮಾಡುತ್ತಾರೆ. ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಎಲ್ಲವೂ ಆದ್ರೇ ಈಗ ಜನರಿಗೆ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.
No clarity on Guarantees implementation,
— Vijayendra Yeddyurappa (@BYVijayendra) July 7, 2023
No clearcut info on mobilization of financial resources,
No stimulus for industrial & agricultural sector,
No commitment on reduction of unemployment,
Misleading the education sector, @CMofKarnataka has presented an "anti-people &…
ಬಜೆಟ್ನಿಂದ ಕೇವಲ ಜನರಿಗೆ ಮಾತ್ರವಲ್ಲ ಅವರ ಪಕ್ಷದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೂ ನಿರಾಸೆ ತಂದಿದೆ. ನೀರಾವರಿಗೆ ಸಂಪನ್ಮೂಲವನ್ನೇ ಮೀಸಲಿರಿಸಿಲ್ಲ. ಮೇಕೆದಾಟುಗೆ 9 ಸಾವಿರ ಕೋಟಿ ಮೀಸಲಿರುತ್ತೇವೆ ಎಂದು ಹೇಳಿದ್ದರು. ಮಹದಾಯಿ ಯೋಜನೆಗೆ 3 ಸಾವಿರ ಕೋಟಿ ಇಡುತ್ತೇವೆ ಅಂತ ಹೇಳಿದ್ದರು. ಆಧರೆ, ಈಗ ಅದಕ್ಕೆ ಅನುದಾನ ಮೀಸಲರಿಸಿಲ್ಲ ಎಂದು ಹೇಳಿದರು.
ನೀರಾವರಿಗೂ ದುಡ್ಡು ಮೀಸಲಿರಿಸದೇ ಡಿಕೆ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಡಿಕೆ ಮೇಲಿನ ಸೇಡಿನ ಬಜೆಟ್ ಇದಾಗಿದೆ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಆರ್ಥಿಕ ಶಿಸ್ತು ಕಾಪಾಡಾದೇ ಇದ್ದಿದ್ದರೆ ಜೆಎಸ್ಟಿ ಸಂಗ್ರಹ ಇಷ್ಟೊಂದು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ವೈಫಲ್ಯ ಮುಚ್ಚಿಕೊಳ್ಳುವ ಯತ್ನ: ಮಾಜಿ ಸಚಿವ ಡಾ.ಕೆ.ಸುಧಾಕರ್
ಆಯವ್ಯಯ ಭಾಷಣದಲ್ಲಿ ಬರೀ ರಾಜಕೀಯ ತುಂಬಿಕೊಂಡಿದೆ. ಕಾಂಗ್ರೆಸ್ ಇನ್ನು ಚುನಾವಣಾ ಗುಂಗಿನಲ್ಲೇ ಇದೆ. ಅಭಿವೃದ್ಧಿ ಮರೀಚಿಕೆಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಕೀಳು ರಾಜಕೀಯವಾಗಿದೆ. ಕರ್ನಾಟಕದಲ್ಲಿ ಕೋವಿಡ್ ಲಸಿಕೆಗಳಿಗೆ ಮೋದಿ ಸರ್ಕಾರ ಖರ್ಚು ಮಾಡಿದ್ದು 2,141 ಕೋಟಿ ರೂಪಾಯಿ ಎಂಬುದನ್ನು ಕಾಂಗ್ರೆಸ್ ಸರಕಾರ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್, ಬಯಲುಸೀಮೆಯ ಜಿಲ್ಲೆಗಳ ವಿಚಾರದಲ್ಲಿ ತೀವ್ರ ಅಸಡ್ಡೆ ಹೊಂದಿದ್ದು, ನಾನು ಕೂಡ ಸೇರಿದಂತೆ ಈ ಭಾಗದ ಜನರಿಗೆ ಬಹಳ ನಿರಾಶೆಯಾಗಿದೆ. ಬಯಲುಸೀಮೆಯ ಯಾವುದೇ ಅಭಿವೃದ್ಧಿಯ ಗ್ಯಾರಂಟಿಯನ್ನು ಸರ್ಕಾರ ನೀಡಿಲ್ಲ. ಅಲ್ಲದೆ ಜನರಿಗೆ ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಅಸಹಾಯಕರಾಗಿರುವ ಸಿಎಂ ಸಿದ್ದರಾಮಯ್ಯನವರು ತಮ್ಮ ವೈಫಲ್ಯವನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಧ್ಯಮ ವರ್ಗದವರನ್ನು ಶೋಷಿಸುವ ಬಜೆಟ್: ಸಿ.ಟಿ.ರವಿ
ಸುಂಕಗಳನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದವರನ್ನು ಶೋಷಿಸುವ ಬಜೆಟ್ ಇದೆಂಬಂತೆ ಕಾಣುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದರು. ನೀಡುವವರನ್ನು ಬೇಡುವಂತೆ ಮಾಡುವುದು ಇವರ ಉದ್ದೇಶ ಇದ್ದಂತಿದೆ. ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಟೀಕಿಸಿದರು.
ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬಂತೆ, ನಾಳೆ ಬಗ್ಗೆ, ಕರ್ನಾಟಕದ ಭವಿಷ್ಯದ ಬಗ್ಗೆ ಯಾವುದೇ ದೂರದೃಷ್ಟಿಯ ಚಿಂತನೆ ಇಲ್ಲದ, ಸಂಸತ್ ಚುನಾವಣೆಯನ್ನು ಏನಾದರೂ ಮಾಡಿ ಗೆಲ್ಲಬೇಕೆಂಬ ಯೋಚನೆಯ ಬಜೆಟ್ ಮಂಡಿಸಿದ್ದಾರೆ. ಸುಮಾರು 85 ಸಾವಿರ ಕೋಟಿಯಷ್ಟು ಹೊಸ ಸಾಲ ಮಾಡಿ ಹಂಚಿಕೆ ಮಾಡುವ ನೀತಿ ಇವರದು. ಕರ್ನಾಟಕವನ್ನು ಭವಿಷ್ಯದಲ್ಲಿ ಮುಳುಗಿಸುವ ಭೀತಿ ಕಾಡುತ್ತಿದೆ ಎಂದು ವಿಶ್ಲೇಷಿಸಿದರು.
ಮೂಲ ಸೌಕರ್ಯಕ್ಕೆ ಬಂಡವಾಳ ಹೂಡಿದಾಗ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ. ಈ ಸರಕಾರ ಮೂಲ ಸೌಕರ್ಯಕ್ಕೆ ಒತ್ತು ಕೊಟ್ಟಿಲ್ಲ. ಮೂಲಸೌಕರ್ಯದಲ್ಲಿ ಹೂಡಿಕೆಗೆ ಕ್ರಮ ತೆಗೆದುಕೊಂಡಿಲ್ಲ. ಮಾವನ ಜೋಬಿನಿಂದ ಕತ್ತರಿಸಿ ಅತ್ತೆ ಕೈಗೆ ಕೊಟ್ಟು ಹಮ್ಮೀರ ಎನಿಸಿಕೊಳ್ಳುವ ಚಿಂತನೆ ಇವರದು ಎಂದು ಆಕ್ಷೇಪಿಸಿದರು.
ಪ್ರತೀಕಾರದ, ಪ್ರಗತಿಹೀನ ಬಜೆಟ್: ನಳಿನ್‍ಕುಮಾರ್ ಕಟೀಲ್
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಒಂದು ರೀತಿ ಪ್ರತೀಕಾರದ ಬಜೆಟ್. ಈ ಬಜೆಟ್ ರಾಜ್ಯ ಸರಕಾರದ್ದೇ ಆದರೂ ಕೇಂದ್ರ ಬಿಜೆಪಿ ಸರಕಾರವನ್ನು ಗುರಿ ಮಾಡಿರುವುದು ಕಂಡುಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟೀಕಿಸಿದ್ದಾರೆ.
ಇದೊಂದು ನಿರಾಶಾದಾಯಕ, ಪ್ರಗತಿಹೀನ ಬಜೆಟ್ ಎಂದಿರುವ ಅವರು, ಬಜೆಟ್ ಮಂಡಿಸುವ ವೇಳೆ ಕೇಂದ್ರ ಸರಕಾರ, ಮೋದಿಜಿ ಅವರನ್ನು ಟೀಕಿಸುವುದಕ್ಕಾಗಿಯೇ ಈ ಅವಕಾಶವನ್ನು ಉಪಯೋಗ ಮಾಡಿಕೊಂಡಿದ್ದಾರೆ. ರಾಜ್ಯಗಳ ಒಕ್ಕೂಟದ ಒಳಗಡೆ ಕೇಂದ್ರದ ಜೊತೆ ಸಂಘರ್ಷ, ಮುಂದಿನ ಚುನಾವಣೆ ದೃಷ್ಟಿಯಿಂದ ರಾಜಕೀಯ ಸಂಘರ್ಷದ ವೇದಿಕೆಯಾಗಿ ಈ ಬಜೆಟನ್ನು ಬಳಸಿಕೊಂಡಿರುವುದು ಕಾಣಿಸಿದೆ. ರಾಜ್ಯದ ಪ್ರಗತಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ತಮ್ಮ ಚುನಾವಣಾ ಗೆಲುವಿಗೆ ಬೇಕಾದ ಗ್ಯಾರಂಟಿ ಮೂಲಕ ಏನೇನು ವಾಗ್ದಾನ ನೀಡಿದ್ದರೋ ಅದರ ಅನುಷ್ಠಾನಕ್ಕೆ ಕರ್ನಾಟಕದ ಗರಿಷ್ಠ ತೆರಿಗೆ ಹಣವನ್ನು ಮೀಸಲಿಡುವ ಥರ ಆಗಿದೆ ಎಂದು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ : Karnataka Budget 2023 : ನೀವು Miss ಮಾಡಲೇಬಾರದ ಸಿದ್ದರಾಮಯ್ಯ ಬಜೆಟ್‌ನ TOP 60 ಮುಖ್ಯಾಂಶಗಳು
ಮುಂದಿನ ಕರ್ನಾಟಕ ನಿರ್ಮಾಣದ, ಅಭಿವೃದ್ಧಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ಮುಂದಿನ ಕರ್ನಾಟಕ ನಿರ್ಮಾಣದ ದಾರಿಯೂ ಸುಗಮವಾಗಿ ಕಂಡುಬರುವುದಿಲ್ಲ. ಗೆಲುವಿಗೆ ಸೀಮಿತವಾಗಿರುವ ಗ್ಯಾರಂಟಿ ಆಗಿದೆಯೇ ಹೊರತು ಅದರಿಂದ ಮಾನವ ವಿಕಾಸ ಕಾಣುತ್ತಿಲ್ಲ. ಈಗಾಗಲೇ ಅವರು ಘೋಷಿಸಿದ ಅನೇಕ ಯೋಜನೆಗಳನ್ನು ಕೇಂದ್ರ ಸರಕಾರ ಮಾಡಿ ತೋರಿಸಿದೆ. ಕೆಲವು ಸಮುದಾಯಗಳು ತಮ್ಮ ವಾರಸುದಾರರು ಎಂಬ ರೀತಿಯಲ್ಲಿ ಬಜೆಟ್ ಒಳಗಡೆ ಎಲ್ಲ ಅಂಶಗಳನ್ನು ಸೇರಿಸಿದ್ದಾರೆ. ದೊಡ್ಡ ರೀತಿಯ ಸಾಲದ ಬಲೆಯ ಒಳಗೆ ರಾಜ್ಯ ಸಿಲುಕಲಿದೆ. ಮೊದಲ ವರ್ಷವೇ ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.