Site icon Vistara News

ಬರೋಬ್ಬರಿ ₹19 ಲಕ್ಷಕ್ಕೆ ಮಾರಾಟವಾದ ಹೋರಿ; ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಬ್ರಹ್ಮನಿಗಿಲ್ಲ ಸಾಟಿ!

ಹೋರಿ

ಹಾವೇರಿ: ಸಾಮಾನ್ಯವಾಗಿ ಒಂದರಿಂದ ಎರಡು ಲಕ್ಷ ರೂ.ಗಳಿಗೆ ಹೋರಿಗಳು ಮಾರಾಟವಾಗುವುದನ್ನು ಕೇಳಿದ್ದೇವೆ. ಅಲ್ಲೊಂದು ಇಲ್ಲೊಂದು ಎನ್ನುವಂತೆ ದಾಖಲೆ ಬೆಲೆಗೆ ಹೋರಿ ಮಾರಾಟವಾಗಿದ್ದು ಇದೆ. ಆದರೆ ಜಿಲ್ಲೆಯಲ್ಲಿ ಹೋರಿಯೊಂದು ಬರೋಬ್ಬರಿ 19,00,108 ರೂಪಾಯಿಗೆ ಮಾರಾಟವಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವಾಸನ ಗ್ರಾಮದ ಮಲ್ಲೇಶಪ್ಪ ಎಂಬುವವರ ಹೋರಿ ಈಗ ದಾಖಲೆ ಬೆಲೆಗೆ ವ್ಯಾಪಾರವಾಗಿದೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಾಟಪಾಡಿಯ ನವೀನ್ ಹೋರಿ ಖರೀದಿಸಿದ್ದು, 6 ಲಕ್ಷ ರೂ. ಮುಂಗಡ ಹಣವನ್ನು ನೀಡಿದ್ದಾರೆ. ಬ್ರಹ್ಮ ಹೆಸರಿನ ಈ ಹೋರಿ “ಕೊಬ್ಬರಿ ಹೋರಿ ಸ್ಪರ್ಧೆ”ಯಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿತ್ತು. ಕೊಬ್ಬರಿ ಹೋರಿ ಸ್ಪರ್ಧೆಯ ಅಖಾಡಕ್ಕೆ ಇಳಿದರೆ ಸಾಕು ಅಭಿಮಾನಿಗಳು ಹೋರಿಯನ್ನು ನೋಡಲು ಮುಗಿಬೀಳುತ್ತಿದ್ದರು. ಸಿಳ್ಳೆ, ಕೆಕೆಯ ಹರ್ಷೊದ್ಗಾರದ ನಡುವೆ ಹೋರಿ ಓಡುವುದನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು.‌

ಇದನ್ನೂ ಓದಿ | ಎಲೆಕ್ಷನ್‌ ಹವಾ | ಧಾರವಾಡ ಗ್ರಾಮೀಣ | ದೇಸಾಯಿ ವಿರುದ್ಧ ಸ್ಪರ್ಧಿಸಲು ಕುಲಕರ್ಣಿಗೆ `ಹತ್ಯೆ ಕೇಸ್‌’ ಅಡ್ಡಿ

ನಾಲ್ಕು ವರ್ಷದ ಮರಿಯಿದ್ದಾಗ 1.25 ಲಕ್ಷ ರೂಪಾಯಿಗೆ ತಮಿಳುನಾಡಿನಿಂದ ಈ ಹೋರಿಯನ್ನು ಮಲ್ಲೇಶಪ್ಪ ಖರೀದಿ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಈ ಕುಟುಂಬದವರು ಹೋರಿಯನ್ನು ಸಾಕಿದ್ದು, ಈಗ ಹೋರಿ ಮಾರಾಟವಾದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಹೋರಿಯನ್ನು ಮಾರಾಟ ಮಾಡದಂತೆ ಮಾಲೀಕರ ಮೇಲೆ ಒತ್ತಡ ಹಾಕಿದ್ದಾರೆ.

ಅಭಿಮಾನಿಗಳ ಒತ್ತಡದಿಂದಾಗಿ ಹೋರಿ ಮಾಲೀಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಬ್ರಹ್ಮ‌ ಹೆಸರಿನ ಈ ಹೋರಿ ಸಾವಿರಾರು ಅಭಿಮಾನಿಗಳ ಹೃದಯ ಗೆದ್ದು, ಅಭಿಮಾನಿ ಬಳಗವನ್ನೇ ಕಟ್ಟಿಕೊಂಡಿದೆ. ಜಿಲ್ಲೆ ಹೊರ ಜಿಲ್ಲೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಹೋರಿ ಭಾಗವಹಿಸಿದರೂ ಅಲ್ಲಿಗೆ ತೆರಳಿ ಅಭಿಮಾನಿಗಳು ಹೋರಿಯನ್ನು ಹುರಿದುಂಬಿಸುವ ಕೆಲಸವನ್ನು ಮಾಡುತ್ತಿದ್ದರು. ಈಗ ಅಭಿಮಾನಿಗಳ ಒತ್ತಡಕ್ಕೆ ಮಣಿದು ಹೋರಿಯನ್ನು ಮರಳಿ ಉಳಿಸಿಕೊಳ್ಳುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ | ಎಲೆಕ್ಷನ್‌ ಹವಾ | ಕಲಘಟಗಿ‌ | ಸಂತೋಷ್ ಲಾಡ್ ಯಾವ ಪಾರ್ಟಿ ಟಿಕೆಟ್ ತರುತ್ತಾರೆ ಎನ್ನುವುದೇ ಚರ್ಚೆ

Exit mobile version