ಕಾರವಾರ: ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ವಿನಾಯಕ್ ನಗರದ ಅಲೈಡ್ ಬಳಿ ಕಾಳಿ ನದಿಯಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿದ್ದು, ಅವರಿಗಾಗಿ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ.
ಸುರೇಶ್ ವಸಂತ್ ತೇಲಿ(44) ಮೊಸಳೆ ದಾಳಿಗೆ ಒಳಗಾದ ವ್ಯಕ್ತಿ. ಸುರೇಶ್ ಶನಿವಾರ ಕಾಳಿ ನದಿ ದಂಡೆಯಲ್ಲಿ ಒಂದು ಕಡೆ ಕೈ ಚೀಲವನ್ನು ಇಟ್ಟು ನದಿಯ ಹತ್ತಿರ ತನ್ನ ಪಾದರಕ್ಷೆಯನ್ನಿಟ್ಟು ಮೀನು ಹಿಡಿಯಲು ಹೋಗಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಜನರು ತಂಡೋಪತಂಡವಾಗಿ ನದಿ ದಡದಲ್ಲಿ ಜಮಾಯಿಸಿದ್ದಾರೆ.
ಮೊಸಳೆ ವ್ಯಕ್ತಿಯನ್ನು ಎಳೆದೊಯ್ದುಕೊಂಡು ಹೋದದ್ದು ದೂರದಿಂದ ಕಾಣಿಸಿದ್ದು, ಈ ಕುರಿತು ಪೊಲೀಸ್, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಮಾಹಿತಿ ತಿಳಿದ ತಕ್ಷಣ ಡಿವೈಎಸ್ಪಿ ಕೆ.ಎಲ್. ಗಣೇಶ್ ಸಿಬ್ಬಂದಿ, ಅರಣ್ಯ ಅಧಿಕಾರಿಗಳು, ಭೇಟಿ ನೀಡಿ ನಾಪತ್ತೆಯಾದವನ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಹಿಂದೆಯೂ ನಡೆದಿತ್ತು
2021ರ ಅಕ್ಟೋಬರ್ 21ರಂದು ವಿನಾಯಕನಗರದಲ್ಲಿ ಮೊಹಿನ್ ಮೆಹಮೂದ್ ಅಲಿ ಮಿಯಾ ಗುಲ್ಬರ್ಗ ಎಂಬ ಬಾಲಕನನ್ನು ಎಳೆದೊಯ್ದಿದ್ದ ಮೊಸಳೆ, ನಂತರ ಪಟೇಲ್ ನಗರದಲ್ಲಿ ಯುವಕನನ್ನು ಬಲಿ ಪಡೆದುಕೊಂಡಿತ್ತು. ಇದೀಗ ವಿವಾಹಿತ ವ್ಯಕ್ತಿಯೊಬ್ಬನನ್ನು ಮೊಸಳೆ ಎಳೆದುಕೊಂಡು ಹೋಗಿದೆ. ಮೊಸಳೆ ಎಳೆದೊಯ್ದಿದಿರುವ ಸುರೇಶ ತೇಲಿ ಕಟ್ಟಡ ಕಾರ್ಮಿಕನಾಗಿದ್ದು, ಆತನ ಕುಟುಂಬಸ್ಥರು ನದಿ ದಡಕ್ಕೆ ಆಗಮಿಸಿ ಆತಂಕದಲ್ಲಿ ಕಾದು ಕುಳಿತಿದ್ದಾರೆ. ನಗರ ವ್ಯಾಪ್ತಿಯ ಕಾಳಿ ನದಿ ಭಾಗದಲ್ಲಿ ಮೇಲಿಂದ ಮೇಲೆ ಮೊಸಳೆ ದಾಳಿಗಳು ನಡೆಯುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ | ಚಿನ್ನಾಭರಣಕ್ಕಾಗಿ ಉಸಿರುಗಟ್ಟಿಸಿ ವೃದ್ಧೆ ಹತ್ಯೆ: ಕೊಲೆ ಮಾಡುತ್ತಾರೆಂದು ಮೊದಲೇ ಹೇಳಿದ್ದರೂ ನಿರ್ಲಕ್ಷ್ಯ?