Site icon Vistara News

ಸೂರು ಕಳೆದುಕೊಂಡಿದ್ದಕ್ಕೆ ಮಾನಸಿಕ ಸ್ಥಿಮಿತ ತಪ್ಪಿದ; ತನ್ನ ಬೈಕ್‌ಗೆ ತಾನೇ ಬೆಂಕಿ ಹಚ್ಚಿದ!

ಬೆಂಕಿ

ಶಿವಮೊಗ್ಗ: ಇಲ್ಲಿನ ಡಿಸಿ ಕಚೇರಿ ಮುಂಭಾಗ ನ್ಯಾಯಕ್ಕಾಗಿ ಆಗ್ರಹಿಸಿ ಯುವಕನೊಬ್ಬ ತನ್ನ ಬೈಕಿಗೆ ತಾನೇ ಬೆಂಕಿ ಹಚ್ಚಿದ ಘಟನೆ ನಡೆದಿದೆ. ನಗರದ ಅಂಬೇಡ್ಕರ್ ನಗರ ನಿವಾಸಿ ರಾಜು ಎಂಬಾತ ಬೈಕ್‌ ಬೆಂಕಿ ಹಚ್ಚಿದವನು.

ಸೂರು ಕಳೆದುಕೊಂಡಿದ್ದಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ರಾಜು, ಸಂಘಟನೆಯೊಂದು ತನಗೆ ಮೋಸ ಮಾಡಿದೆ ಎಂದು ಆರೋಪಿಸಿದ್ದಾನೆ. ಜಿಲ್ಲಾಧಿಕಾರಿಯಿಂದಲೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾನೆ. ಹಕ್ಕಿಪಿಕ್ಕಿ ಜನಾಂಗದ ಯುವಕನಾಗಿರುವ ರಾಜು, ಪ್ಲಾಸ್ಟಿಕ್ ಹೂವು ಮಾರಾಟ ಮಾಡಿ ಜೀವನ ಸಾಗುತ್ತಿದ್ದ.

ಕಳೆದ ಅಕ್ಟೋಬರ್‌ 17ರಂದು ಅಂಬೇಡ್ಕರ್ ನಗರ ನಿವಾಸಿಗಳ ಮನೆಗಳನ್ನು ತೆರವು ಮಾಡಲಾಗಿತ್ತು. ಮನೆ ತೆರವುಗೊಳಿಸುವ ವೇಳೆ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಜತೆಗೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೂ ಪ್ರಯತ್ನಪಟ್ಟಿದ್ದರು. ಆದರೆ, ಈಗ ಈ ವಿಷಯದಲ್ಲಿ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ರಾಜು ಮಂಗಳವಾರ (ನ.೮) ಜಿಲ್ಲಾಧಿಕಾರಿ ಕಚೇರಿ ಎದುರಿಗೆ ತನ್ನ ಬೈಕ್‌ಗೆ ತಾವೇ ಬೆಂಕಿ ಹಚ್ಚಿಕೊಂಡು ಆಕ್ರೋಶ ಹೊರಹಾಕಿದ್ದಾನೆ.

ಏನಿದು ಮನೆ ತೆರವು ಪ್ರಕರಣ?
ಇಲ್ಲಿನ ಮಲ್ಲಿಗೆನಹಳ್ಳಿ ಸಮೀಪದಲ್ಲಿರುವ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ್ದ ಜಾಗದಲ್ಲಿ ಸುಮಾರು ೮ ವರ್ಷಗಳಿಂದ ಹಕ್ಕಿಪಿಕ್ಕಿ ಜನಾಂಗದವರು ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಇದು ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಆಗಿನಿಂದಲೇ ಅವರನ್ನು ಸ್ಥಳದಿಂದ ಎಬ್ಬಿಸುವ ಸಂಬಂಧ ಸಾಕಷ್ಟು ಪ್ರಯತ್ನಗಳು ಆಗಿದ್ದವು. ಇದೇ ವೇಳೆ ಇವರಿಗೆ ಪರ್ಯಾಯ ಸ್ಥಳ ನೀಡಬೇಕೆಂಬ ಆಗ್ರಹಗಳೂ ಕೇಳಿಬಂದಿದ್ದವು. ಆದರೆ, ಸ್ಥಳಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು ಅವರಿಗೆ ಭರವಸೆಗಳನ್ನು ನೀಡುತ್ತಿದ್ದರೇ ವಿನಃ ಯಾವುದೇ ಪರ್ಯಾಯ ವಸತಿ ಸೌಕರ್ಯವನ್ನು ಮಾಡಿಕೊಟ್ಟಿರಲಿಲ್ಲ. ಆದರೆ, ಅಕ್ಟೋಬರ್‌ 17ರಂದು ಈ ಮನೆಗಳನ್ನು ತೆರವುಗೊಳಿಸಿ ಜಾಗವನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿತ್ತು.

ನ್ಯಾಯಾಲಯದ ಆದೇಶದಂತೆ ಕ್ರಮ
ಸರ್ವೇ ನಂಬರ್ 18, 19ರ ಸರ್ಕಾರಿ ಜಮೀನು ಇದಾಗಿದ್ದು, ಹಕ್ಕಿಪಿಕ್ಕಿ ಜನಾಂಗದವರು ಅನಧಿಕೃತವಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಇವರನ್ನು ಕೂಡಲೇ ತೆರವುಗೊಳಿಸಬೇಕೆಂದು ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿತ್ತು. ಸುಮಾರು 8.29 ಎಕರೆ ವಿಸ್ತೀರ್ಣವುಳ್ಳ ಈ ಜಾಗವು ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ್ದಾಗಿದೆ. ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್‌ ಬಳಿಕ ಗುಡಿಸಲುಗಳ ತೆರವಿಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ನೀರಾವರಿ ನಿಗಮಗಳ ಅಧಿಕಾರಿಗಳು ತೆರವುಗೊಳಿಸಿದ್ದರು. ಈ ಜಾಗದಲ್ಲಿ ಸುಮಾರು ೧೨೮ ಮನೆಗಳಲ್ಲಿ 250ಕ್ಕೂ ಹೆಚ್ಚು ಕುಟುಂಬ ವಾಸವಿತ್ತು.

ಇದನ್ನೂ ಓದಿ | Murder Case | ಶಿವಮೊಗ್ಗದಲ್ಲಿ ಮಹಿಳೆ ಕೊಲೆ: ಅಮ್ಮನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದ ಮಗಳು

Exit mobile version