Site icon Vistara News

ಮಹಿಳೆಯರಿಗೆ ಆಪರೇಶನ್​ ಮಾಡಲು ಬಂದು, ಬೆಡ್​ ಮೇಲೆ ಮಲಗಿದ ವೈದ್ಯ; ಸ್ಥಳೀಯರ ಆಕ್ರೋಶ

ಚಿಕ್ಕಮಗಳೂರು: ಆಪರೇಶನ್​ ಮಾಡಲು ಬಂದ ವೈದ್ಯನೇ ಅಸ್ವಸ್ಥನಾಗಿ ಬಿದ್ದ ಪರಿಣಾಮ, ಅನಸ್ತೇಶಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರು ಪರದಾಡಿದ ಘಟನೆ ಚಿಕ್ಕಮಗಳೂರಿನ (Chikkamagaluru Doctor) ಕಳಸ ತಾಲೂಕು ಆಸ್ಪತ್ರೆಯಿಂದ ವರದಿಯಾಗಿದೆ. ಮಹಿಳೆಯರಿಗೆ ಸಂತಾನಶಕ್ತಿ ಹರಣ ಆಪರೇಶನ್​ ಮತ್ತು ಇತರ ಕೆಲವು ಸಮಸ್ಯೆಗಳಿರುವವರಿಗೆ ಶಸ್ತ್ರಚಿಕಿತ್ಸೆ ಮಾಡುವುದಕ್ಕೋಸ್ಕರ ಕೊಪ್ಪದಿಂದ ವೈದ್ಯ ಬಾಲಕೃಷ್ಣ ಬಂದಿದ್ದರು. ಆದರೆ ಅವರು ಮದ್ಯಸೇವನೆ ಮಾಡಿ ಬಂದಿದ್ದರು. ಆಪರೇಶನ್ ಮಾಡಲಾಗದೆ, ಶುಗರ್ ಹೆಚ್ಚಾದಂತೆ ನಾಟಕವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಸ್ವಸ್ಥನಾಗಿ ಬಿದ್ದ ವೈದ್ಯನಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟು, ಆಂಬ್ಯುಲೆನ್ಸ್ ಮೂಲಕ ಕಳಿಸಲಾಗಿದೆ.

ಇದನ್ನೂ ಓದಿ: ತಾಯಿ ಗರ್ಭದಲ್ಲೇ ಭ್ರೂಣದ ದ್ರಾಕ್ಷಿ ಗಾತ್ರದ ಹೃದಯಕ್ಕೆ 90 ಸೆಕೆಂಡ್‌ನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ!

ಆಪರೇಶನ್​ಗೆ ಒಳಗಾಗಬೇಕಾಗಿದ್ದ ಮಹಿಳೆಯರಿಗೆ ಅನಸ್ತೇಶಿಯಾ ಕೊಟ್ಟು ಮಲಗಿಸಲಾಗಿತ್ತು. ಎಷ್ಟೊತ್ತಾದರೂ ವೈದ್ಯರು ಆಪರೇಶನ್​ಗೆ ಕರೆಯುತ್ತಿರಲಿಲ್ಲ. ತಾಸುಗಳೇ ಕಳೆದು ಹೋದ ಮೇಲೆ ಮಹಿಳೆಯರ ಜತೆಗೆ ಬಂದಿದ್ದವರ ತಾಳ್ಮೆ ಕೆಟ್ಟು ಗರಂ ಆಗಿದ್ದಾರೆ. ಅವರೆಲ್ಲ ಕೂಗಾಡುತ್ತಿದ್ದಂತೆ ಆಪರೇಶನ್ ಮಾಡಬೇಕಿದ್ದ ವೈದ್ಯ ಹೈಡ್ರಾಮಾ ಶುರು ಮಾಡಿಕೊಂಡಿದ್ದಾನೆ. ತನಗೆ ಶುಗರ್ ಹೆಚ್ಚಿತು ಎಂಬಂತೆ ಆಪರೇಶನ್​ ಥಿಯೇಟರ್​ನ ಬೆಡ್​ಮೇಲೆ ಮಲಗಿದ್ದಾನೆ. ಅನಸ್ತೇಶಿಯಾ ತೆಗೆದುಕೊಂಡಿದ್ದ ಮಹಿಳೆಯರಿಗೆ ಆಸ್ಪತ್ರೆ ಸಿಬ್ಬಂದಿ ಗ್ಲುಕೋಸ್ ಹಾಕಿದ್ದಾರೆ. ಬೇರೆ ವೈದ್ಯರನ್ನು ಕರೆಸಿ ಶಸ್ತ್ರಚಿಕಿತ್ಸೆ ಮಾಡಿಸಲು ನಿರ್ಧರಿಸಿದ್ದಾರೆ.

ಕಳಸ ತಾಲೂಕು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಕಿಡಿಕಾರಿದೆ. ಇಲ್ಲಿಗೆ ಅಂತ ಒಬ್ಬ ಖಾಯಂ ಸರ್ಜನ್​ ಇಲ್ಲ. ನುರಿತ ವೈದ್ಯರು ಇಲ್ಲ. ಒಂದು ವಾರ ಒಬ್ಬರು ಬಂದರೆ, ಇನ್ನೊಂದು ಬಾರಿ ಮತ್ತೊಬ್ಬ ವೈದ್ಯ ಬರುತ್ತಾರೆ. ಅದೇನು ಮಾತ್ರೆ ಕೊಡುತ್ತಾರೋ ಗೊತ್ತಿಲ್ಲ. ಕೊಪ್ಪದಿಂದ ಬಂದಿದ್ದ ಈ ಡಾ. ಬಾಲಕೃಷ್ಣ ಮದ್ಯ ಸೇವನೆ ಮಾಡಿದ್ದರು. ಹೀಗೆ ಆದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಇನ್ನು ಈ ವೈದ್ಯ ಬಾಲಕೃಷ್ಣ ಬಹುಕಾಲದಿಂದಲೂ ಹೀಗೆ ಮಾಡುತ್ತಿದ್ದರು. ಹಿಂದೆಯೂ ಎಷ್ಟೊ ಬಾರಿ ಕುಡಿದು ಬಂದು ಆಪರೇಶನ್ ಮಾಡಿದ್ದಾರೆ. ವಾರ್ಡ್​​ನಲ್ಲೇ ಸಿಗರೇಟ್ ಸೇದುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅನಸ್ತೇಶಿಯಾ ತೆಗೆದುಕೊಂಡ ಮಹಿಳೆಯರು
ಅಸ್ವಸ್ಥನಾದ ವೈದ್ಯ

Exit mobile version