ಬೆಂಗಳೂರು: ಕೆಲವೊಬ್ಬರು ಪೊಲೀಸ್ ಎಂದು ಹೇಳಿಕೊಂಡು ದುಡ್ಡು ವಸೂಲಿ ಮಾಡುವುದು, ಇಲ್ಲದೇ ದುಬಾರಿ ಸೇವೆಗಳನ್ನು ಪಡೆಯುವುದು ಮಾಮೂಲಿ. ಆದರೆ, ಇಲ್ಲೊಬ್ಬ ಮಹಿಳೆ ತಾನು ಪೊಲೀಸ್ (Fake Police) ಎಂದು ಹೇಳಿಕೊಂಡು ಒಂದು ವರ್ಷ ಕಾಲ ಬಜ್ಜಿ, ಬೋಂಡಾ ಪುಗ್ಸಟ್ಟೆಯಾಗಿ ತಿಂದಿದ್ದಾರೆ! ಅಂದ ಹಾಗೆ, 50 ವರ್ಷದ ಈ ನಕಲಿ ಮಹಿಳಾ ಪೊಲೀಸ್ ಈಗ ಒರಿಜಿನಲ್ ಪೊಲೀಸರ ಅತಿಥಿಯಾಗಿದ್ದಾರೆ. ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಈ ಮಹಿಳೆಯನ್ನು ಬಂಧಿಸಿದ್ದಾರೆ.
ಬಂಧಿತ ನಕಲಿ ಮಹಿಳಾ ಪೊಲೀಸ್ ಹೆಸರು ಲೀಲಾವತಿ. ಈ ಮಹಿಳೆಯು ಒಂದು ವರ್ಷದಿಂದ ತಾನು ಪೊಲೀಸ್ ಎಂದು ಹೇಳಿಕೊಂಡು ಬೀದಿ ಬದಿಯ ವ್ಯಾಪಾರಿಗಳನ್ನು ಹೆದರಿಸಿ, ಬಜ್ಜಿ ಬೋಂಡಾ ತಿನ್ನುತ್ತಿದ್ದರು. ಮನೆಗೆ ಪಾರ್ಸೆಲ್ ಕೂಡ ತೆಗೆದುಕೊಂಡ ಹೋಗುತ್ತಿದ್ದರು. ಬಜ್ಜಿ ಬೋಂಡಾ ಮಾತ್ರವಲ್ಲದೇ, ತರಕಾರಿ, ಗೋಬಿ, ಬಿರಿಯಾನಿಯನ್ನು ವ್ಯಾಪಾರಿಗಳಿಂದ ಹೆದರಿಸಿ ಪಡೆದುಕೊಂಡು ತಿನ್ನುತ್ತಿದ್ದಳು ಎನ್ನಲಾಗಿದೆ.
ಶುಕ್ರವಾರವೂ ಎಂದಿನಂತೆ ವ್ಯಾಪ್ಯಾರಿಯೊಬ್ಬರನ್ನು ಹೆದರಿಸಿ ಬಜ್ಜಿ ಅಂಗಡಿಯಲ್ಲಿ ಪುಗ್ಸಟ್ಟೆಯಾಗಿ ಬಜ್ಜಿ ತಿಂದಿದ್ದಾರೆ. ಪಾರ್ಸೆಲ್ ಕೂಡ ಕೊಡುವಂತೆ ಕೇಳಿದ್ದಾರೆ. ಆಗ, ಅಂಗಾಡಿಯಾತ ಹಣ ನೀಡುವಂತೆ ಕೇಳಿದ್ದಾರೆ. ಪೊಲೀಸ್ ಹತ್ತಿರ ಹಣ ಕೇಳುವೆಯಾ ಎಂದು ಗಲಾಟೆ ಶುರು ಮಾಡಿದ್ದಾರೆ. ಕೊನೆಗೆ ಪೊಲೀಸರಿಗೆ ವಿಷಯ ತಿಳಿದಾಗ, ನಕಲಿ ಮಹಿಳಾ ಪೊಲೀಸ್ ಲೀಲಾವತಿಯ ಪೂರ್ಣ ಮಾಹಿತಿ ಹೊರ ಬಿದ್ದಿದೆ.
ಆರೋಪಿ ಮಹಿಳೆಯ ಪತಿ ಎಂಜಿನಿಯರ್. ಪುತ್ರಿ ಡಾಕ್ಟರ್ ಹಾಗೂ ಪುತ್ರ ಎಂಜಿನಿಯರ್ ಆಗಿದ್ದಾರೆ. ಈ ವಿವರವನ್ನು ನೋಡಿದರೆ, ಲೀಲಾವತಿಯ ಕುಟುಂಬವು ಆರ್ಥಿಕವಾಗಿ ಬಲಾಢ್ಯವಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹಾಗಿದ್ದೂ ಲೀಲಾವತಿ ಪೊಲೀಸ್ ಎಂದು ಸುಳ್ಳು ಹೇಳಿಕೊಂಡು ಪುಗ್ಸಟ್ಟೆ ಬಜ್ಜಿ ತಿನ್ನುತ್ತಿದ್ದರು ಏಕೆ ಎಂಬುದು ವಿಚಾರಣೆ ವೇಳೆ ಗೊತ್ತಾಗಬಹುದು.
ಇದನ್ನೂ ಓದಿ | Highway Robbery | ಹೈವೇ ರಾಬರಿಯಲ್ಲಿ ತೊಡಗಿದ್ದ ನಕಲಿ ಪೊಲೀಸ್ ಇನ್ಫಾರ್ಮರ್ ಬಂಧನ