Site icon Vistara News

ಹೊಲ ಉಳುಮೆ ಮಾಡಲು ಟಗರು ಬಳಸಿ ಸೈ ಎನಿಸಿಕೊಂಡ ರೈತ

ಹಾವೇರಿ: ಸಾಮಾನ್ಯವಾಗಿ ರೈತರು ಎತ್ತುಗಳನ್ನು ಬಳಸಿಕೊಂಡು ಹೊಲ ಉಳುಮೆ ಮಾಡಿ ಬೇಸಾಯ ಮಾಡುವುದನ್ನು ನೋಡಿರುತ್ತೇವೆ. ಇನ್ನೂ ಕೆಲವು ರೈತರು ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣಗಳನ್ನು ಬಳಸಿ ಉಳುಮೆ ಮಾಡುತ್ತಾರೆ. ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದ ರೈತರೊಬ್ಬರು ಕೃಷಿ ಕಾರ್ಯಕ್ಕೆ ಟಗರುಗಳನ್ನು ಬಳಸಿ ಸುದ್ದಿಯಲ್ಲಿದ್ದಾರೆ.

ರೈತನ ಟಗರು

ಶೇಖಪ್ಪ ಎಂಬುವರು ತಮ್ಮ ಒಂದೂವರೆ ಎಕರೆ ಹೊಲದಲ್ಲಿ ಸೊಯಾಬಿನ್ ಬೆಳೆದಿರುವ ಈ ರೈತನಿಗೆ ಉಳುಮೆ ಮಾಡಲು ಎತ್ತುಗಳು ಸಿಕ್ಕಿಲ್ಲ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಎತ್ತುಗಳನ್ನು ಖರೀದಿಸಲು ಇವರ ಬಳಿ ಹಣ ಇರಲಿಲ್ಲ. ಬಾಡಿಗೆಗೆ ಪಡೆಯಲು ಸಿದ್ಧರಿದ್ದರೂ ಯಾರೂ ಸಹ ಎತ್ತುಗಳನ್ನು ಉಳುಮೆಗೆ ಕೊಟ್ಟಿಲ್ಲ. ಇದರಿಂದ ಶೇಖಪ್ಪ ಅವರಿಗೆ ದಿಕ್ಕು ತೋಚದಂತಾಗಿತ್ತು. ಉಳುಮೆ ಮಾಡಲೇಬೇಕಿದ್ದು, ಏನು ಮಾಡಬಹುದು ಎಂದು ಯೋಚಿಸುತ್ತಿರುವಾಗ ಮನೆಯಲ್ಲಿ ಸಾಕಿದ್ದ ಟಗರುಗಳು ಕಂಡಿವೆ. 13 ಸಾವಿರ ರೂಪಾಯಿಯನ್ನು ಕೊಟ್ಟು ಈ ಟಗರುಗಳನ್ನು ಖರೀದಿಸಿದ್ದರು. ಇದನ್ನೇ ಯಾಕೆ ಬಳಸಬಾರದು ಎಂದು ಅವರು ಉಳುಮೆಗೆ ಬಳಸಿದ್ದಾರೆ.

ಶೇಖಪ್ಪ

ಟಗರುಗಳಿಗೆ ಟ್ರೈನಿಂಗ್

ಕಳೆದ 9 ತಿಂಗಳ ಹಿಂದೆ ಕುರುಬರ ದೊಡ್ಡಿಯಲ್ಲಿ ಈ ಟಗರುಗಳನ್ನು ಶೇಖಪ್ಪ ಖರೀದಿ ಮಾಡಿದ್ದರು. ಈ ಟಗರುಗಳನ್ನು ಶೇಖಪ್ಪ ಅವರು ತಮ್ಮ ಮಕ್ಕಳಂತೆ ಸಾಕಿದ್ದು, ಅವುಗಳಿಗೆ ಬೇಕಾದ ಹಿಂಡಿ, ಬೂಸಾ ಸೇರಿದಂತೆ ಮೊದಲಾದ ಪೌಷ್ಟಿಕ ಆಹಾರಗಳನ್ನು ನೀಡಿದ್ದಾರೆ. ಆರಂಭದಲ್ಲಿ ಚಿಕ್ಕ ಬಂಡಿಗೆ ಟಗರುಗಳನ್ನು ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ. ಆಮೇಲೆ ನೀರು ತರುವ ಬಂಡಿಯನ್ನು ಕುರಿಗಳಿಗೆ ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ. ಈ ನಡುವೆ ತನ್ನ ಒಂದೂವರೆ ಎಕರೆ ಜಮೀನು ಎಡೆಕುಂಡಿ ಹೊಡೆಯಲು ಬೇರೆಯವರಲ್ಲಿ ಎತ್ತುಗಳನ್ನು ಕೇಳಿದ್ದಾರೆ. ಆದರೆ‌, ಕಡಿಮೆ ಜಮೀನು ಇರುವುದಕ್ಕೆ ಯಾರೂ ಶೇಖಪ್ಪರಿಗೆ ಎತ್ತುಗಳನ್ನು ನೀಡಿಲ್ಲ ಎಂದು ಬೇಸರವನ್ನು ಹೊರಹಾಕಿದ್ದಾರೆ.

ಪಿಎಸ್ ರಾಮನಗೌಡ

ಉಳುಮೆ ಸಾಹಸ

“ಒಂದೇ ಬಾರಿಗೆ ಟಗರುಗಳಿಗೆ ಭಾರ ಹಾಕಬಾರದು ಎಂಬ ಉದ್ದೇಶದಿಂದ ಸಣ್ಣ ಪುಟ್ಟ ಭಾರ ಇರುವ ವಸ್ತುಗಳನ್ನು ಹೊರಿಸಿ ಅಭ್ಯಾಸ ಮಾಡಲಾಯಿತು. ಬಳಿಕ ಟಗರುಗಳಿಗೆ ಸರಿಹೊಂದುವ, ಅವುಗಳಿಗೆ ಪೂರಕವಾದ ನೊಗವನ್ನು ಸಿದ್ಧಪಡಿಸಿ ಹೊಲದಲ್ಲಿ ಉಳುಮೆ ಮಾಡಿದ್ದಾರೆ. ಮೊದ ಮೊದಲು ಸ್ವಲ್ಪ ಕಷ್ಟವಾದರೂ ಬಳಿಕ ಈ ಟಗರುಗಳು ಇವರಿಗೆ ಸಾಥ್ ನೀಡಿವೆ. ಕನಕ ಹಾಗೂ ರಾಯಣ್ಣ ಎಂದು ಟಗರುಗಳಿಗೆ ನಾಮಕರಣ ಮಾಡಿರುವ ರೈತ ಈಗ ಟಗರುಗಳಿಂದಲೇ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾನೆ. ಅಕ್ಕಪಕ್ಕದ ರೈತರು ಸಹ ಶೇಖಪ್ಪ ಅವರ ವಿನೂತನ ಪ್ರಯೋಗ ಕಂಡು ಆಶ್ಚರ್ಯಗೊಂಡಿದ್ದಾರೆ. ನಿಜಕ್ಕೂ ಇವರದ್ದು ಸಾಧನೆಯೇ ಸರಿ ಎಂದು ಗ್ರಾಮದ ಪಿ.ಎಸ್. ರಾಮನಗೌಡ ಅವರು ಪ್ರತಿಕ್ರಿಯಿಸಿದ್ದಾರೆ.

ಎತ್ತುಗಳ ಬೆಲೆ ಈಗ ದುಬಾರಿಯಾಗಿದ್ದು, ಲಕ್ಷಾಂತರ ರೂಪಾಯಿ ಕೊಟ್ಟು ಸಾಕಷ್ಟು ರೈತರಿಗೆ ಎತ್ತುಗಳನ್ನ ಖರೀದಿಸಲು ಸಾಧ್ಯವಾಗದಿದ್ದಾಗ ಇಂತಹ ಹೊಸ ಪ್ರಯೋಗಗಳನ್ನ ಮಾಡುವ ಮೂಲಕ ಕೃಷಿಯಲ್ಲಿ ಯಶಸ್ಸು ಸಾಧಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.

ಇದನ್ನೂ ಓದಿ| ಪಂಜಾಬ್‌ ಆಮ್‌ ಆದ್ಮಿ ಸರ್ಕಾರದ ಮೊದಲ ಬಜೆಟ್‌ ಮಂಡನೆ; ರೈತರು, ವಿದ್ಯಾರ್ಥಿಗಳಿಗೆ ಬಂಪರ್‌

Exit mobile version