ಹೊಸನಗರ: ದಾನ ಮಾಡುವ ಮನಸ್ಸುಳ್ಳವರಿಗೆ ಇಂತದ್ದನ್ನೇ ದಾನ ಮಾಡಬೇಕು ಎಂಬ ನಿಯಮವೇನೂ ಇಲ್ಲ. ಗೋದಾನ, ಅನ್ನದಾನ, ನೇತ್ರದಾನ, ದೇಹದಾನ, ವಿದ್ಯಾದಾನ ಸೇರಿದಂತೆ ಹತ್ತು ಹಲವು ರೂಪದಲ್ಲಿ ದಾನ – ಧರ್ಮ ಮಾಡುವವರನ್ನು ನಾವು ಕಾಣುತ್ತೇವೆ. ಒಟ್ಟಿನಲ್ಲಿ ದಾನ ಮಾಡುವ ಮನಸ್ಸು ಇದ್ದರೆ ಏನು ಬೇಕಾದರೂ ಕೊಡಬಹುದು ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆಯ ಶಬರೀಶ್ ನಗರದ ಚಂದನ ಜಿ. ನಾಯಕ್ ಕೇಶ ದಾನ ಮಾಡಿ ಮಾದರಿಯಾಗಿದ್ದಾಳೆ.
ಹೆಣ್ಣಿನ ಸೌಂದರ್ಯಕ್ಕೆ ಚೆಂದದ, ಲಕ್ಷಣವುಳ್ಳ ಮೊಗವು ಹೇಗೆ ಬೇಕೋ, ಹಾಗೇ ಆಕೆಗೆ ಅವಳ ಕೇಶ ರಾಶಿ ಸಹ ಇನ್ನಷ್ಟು ಮೆರಗನ್ನು ತರುತ್ತದೆ. ಇಂತಹ ಕೇಶ ರಾಶಿಯನ್ನು ತಮ್ಮಂತೆಯೇ ಇತರರೂ ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಬಾಲಕಿಯೊಬ್ಬಳು ತನ್ನ ನೀಳವಾದ ಕೇಶವನ್ನು ಕ್ಯಾನ್ಸರ್ ರೋಗಿಗಳಿಗಾಗಿ ವಿಗ್ ತಯಾರಿಸುವ ಸಂಬಂಧ ದಾನವಾಗಿ ನೀಡಿದ್ದಾಳೆ. ಈಕೆ ಸಹ್ಯಾದ್ರಿ ಕಾಲೇಜ್‌ನ ಅಂತಿಮ ವರ್ಷದ ಕಲಾ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದು, ಈಗ ಕಾಲೇಜಿನಲ್ಲೂ ಸಹ ಮಾದರಿಯಾಗಿದ್ದಾಳೆ.
ಹೊಸನಗರ ತಾಲೂಕಿನ ತಮ್ಮಡಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯಾಧ್ಯಾಪಕ ಗಂಗಾನಾಯಕ್ ಮತ್ತು ಅಂಗನವಾಡಿ ಕಾರ್ಯಕರ್ತೆ ಶೀಲಾ ದಂಪತಿ ಪುತ್ರಿಯೇ ಈ ಚಂದನ. ತಂದೆ-ತಾಯಿಯ ಪ್ರೇರಣೆ ಪ್ರೋತ್ಸಾಹದಿಂದಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಚಂದನ ಹೇಳಿಕೊಂಡಿದ್ದಾಳೆ.
ಈ ಬಗ್ಗೆ ವಿಸ್ತಾರದ ಜತೆ ಮಾತನಾಡಿದ ಚಂದನ, “ಕೂದಲು ದಾನ ಮಾಡಿದರೆ ರೋಗಿಗಳಿಗೆ ಧೈರ್ಯ ಮತ್ತು ರೋಗದ ವಿರುದ್ಧ ಹೋರಾಡಲು ಶಕ್ತಿ ನೀಡಿದಂತಾಗುತ್ತದೆ. ಅಲ್ಲದೆ, ಕೂದಲು ಹೋದರೆ ಪುನಃ ಬೆಳೆಯತ್ತದೆ. ಹಾಗೇ ನಾವು ನೀಡುವ ದೈರ್ಯ ಅವರಿಗೆ ಬದುಕಲು ಸ್ಫೂರ್ತಿಯಾಗಲಿದೆ. ಈ ಉದ್ದೇಶದಿಂದ ನಾನು ಕೇಶ ದಾನ ಮಾಡುತ್ತಿದ್ದೇನೆ” ಎಂದು ಹೇಳಿದ್ದಾಳೆ.
ಇದನ್ನೂ ಓದಿ| Hair Style: ಕೂದಲಿನ ಆರೋಗ್ಯಕ್ಕೆ ಉಲ್ಟಾ ಬಾಚಿ ನೋಡಿ!