ಕಾರವಾರ: ಕಳೆದ 8ಕ್ಕೂ ಹೆಚ್ಚು ವರ್ಷಗಳಿಂದ ಸ್ವಚ್ಛತಾ ಕಾರ್ಯ (Cleaning work) ಮುಂದುವರಿಸಿರುವ ಪಹರೆ ವೇದಿಕೆ ಇದೇ ಆಗಸ್ಟ್ 5 ರಂದು 450ನೇ ಸ್ವಚ್ಛತಾ ವಾರಕ್ಕೆ ಹೆಜ್ಜೆಯಿಡಲಿದೆ.
ಪಹರೆಯ ಸ್ವಚ್ಛತಾ ಪಯಣದಲ್ಲಿ ಸ್ವಚ್ಛತೆ ಜತೆ ಪರಿಸರಕ್ಕೂ ಆದ್ಯತೆ ನೀಡಿ ಈಗಾಗಲೇ ಕಾರವಾರ ನಗರದಿಂದ ಕೋಡಿಭಾಗದವರೆಗೂ 580 ಗಿಡ ನೆಡುವ ಮೂಲಕ ಪರಿಸರ ಕಾಳಜಿ ಮೂಡಿಸುವ ಪ್ರಯತ್ನ ನಡೆಸಲಾಗಿದೆ. ಕಾರವಾರ- ಅಂಕೋಲಾ ಮತ್ತು ಕಾರವಾರ-ಗೋವಾ ಗಡಿಯವರೆಗೆ ಸ್ವಚ್ಛತಾ ನಡಿಗೆಯ (ಪಾದಯಾತ್ರೆ) ಮೂಲಕ ಸ್ವಚ್ಛತೆಗೆ ಜಾಗೃತಿ ಮೂಡಿಸುವ ಕೈಂಕರ್ಯವನ್ನೂ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: Koppala News: ಗಂಗಾವತಿಯಲ್ಲಿ ಜಯಲಕ್ಷ್ಮಿ, ಶ್ರೀರಂಗನಾಥ ಸ್ವಾಮಿ ದೇಗುಲಗಳ ಹುಂಡಿ ಎಣಿಕೆ; 3.92 ಲಕ್ಷ ರೂ. ಸಂಗ್ರಹ
450ನೇ ವಾರವನ್ನು ಮತ್ತಷ್ಟು ನೆನಪಾಗಿಸುವ ನಿಟ್ಟಿನಲ್ಲಿ ಕಾರವಾರ ನಗರದಿಂದ ಕೋಡಿಭಾಗದ (ಕಾಳಿ ರಿವರ್ ಗಾರ್ಡನ್) ವರೆಗೆ ಹಸಿರು ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದೇ ಶನಿವಾರ ಅಂದರೆ ಆಗಸ್ಟ್ 5 ರಂದು ಬೆಳಿಗ್ಗೆ 9 ಗಂಟೆಯಿಂದ ಕಾರವಾರ ನಗರದ ಸುಭಾಷ್‌ಚಂದ್ರ ಸರ್ಕಲ್ ಬಳಿ ಗಣ್ಯರ ಉಪಸ್ಥಿತಿಯಲ್ಲಿ
ಪಹರೆಯ ಹಸಿರು ನಡಿಗೆ ಶುರುವಾಗಲಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಈ ವೇಳೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಕಾಳಿ ರಿವರ್ ಗಾರ್ಡನ್ ಬಳಿ ಪಹರೆಯ ಹಸಿರು ನಡಿಗೆ ಸಮಾಪನಗೊಳ್ಳಲಿದ್ದು, ಇಬ್ಬರು ಪರಿಸರ ಪ್ರೇಮಿಗಳನ್ನು ಸನ್ಮಾನಿಸಲಾಗುತ್ತದೆ.
ಇದನ್ನೂ ಓದಿ: Weather Report : ವಾರಾಂತ್ಯದಲ್ಲಿ ಇಲ್ಲೆಲ್ಲ ವ್ಯಾಪಕ ಮಳೆ; ನಿಮ್ಮ ಊರು ಇದೆಯಾ ನೋಡಿ
ಹಸಿರು ನಡಿಗೆಯ ನಡುವೆ ರಸ್ತೆಯ ಇಕ್ಕೆಲಗಳಲ್ಲಿ ಸ್ಥಳೀಯರಿಗೆ ಹಣ್ಣಿನ ಗಿಡ ನೀಡುವುದರ ಮೂಲಕ ಹಸಿರು ಪರಿಸರದ ಕಾಳಜಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಲಾಗಿದೆ. 450 ವಾರದ ಅಂಗವಾಗಿ ಜನರ ಸಹಭಾಗಿತ್ವ ಮತ್ತು ಸಂಘಟನೆಗಳ ಜತೆ ಸೇರಿ 450 ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ ಎಂದು ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ತಿಳಿಸಿದ್ದಾರೆ.