ಶಿವಮೊಗ್ಗ : ಉಡುಪಿಯ ಕೊಲ್ಲೂರು ಬಳಿಯ ಅರಿಶಿನಗುಂಡಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಭದ್ರಾವತಿ ಮೂಲದ ಶರತ್‌ಗೆ ಸೋಮವಾರ ಹೃದಯಸ್ಪರ್ಶಿ ಅಂತಿಮ ವಿದಾಯ ಹೇಳಲಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್.ನಗರದಲ್ಲಿರುವ ಶರತ್ ಮನೆಯಿಂದ ರುದ್ರಭೂಮಿಗೆ ಹೊರಟ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು ಭಾಗಿಯಾಗಿ ಅಂತಿಮ ವಿದಾಯ ಹೇಳಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎದೆ ಎತ್ತರಕ್ಕೆ ಬೆಳೆದಿದ್ದ ಮಗನನ್ನು ಕಳೆದುಕೊಂಡ ಪಾಲಕರ ನೋವು ಯಾರಿಗೂ ಹೇಳತೀರದು.
ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆದಿದ್ದು, ಶರತ್ ತಂದೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದಕ್ಕೂ ಮೊದಲು ತಮಿಳ್ ಗೌಂಡರ್ ಸಂಪ್ರದಾಯದಂತೆ ಶರತ್ ಅವಿವಾಹಿತನಾಗಿದ್ದರಿಂದ ಬಾಳೆಗಿಡಕ್ಕೆ ತಾಳಿ ಕಟ್ಟಿ ಮದುವೆ ಸಂಪ್ರದಾಯ ನೆರವೇರಿಸಲಾಯಿತು.
ತಂದೆಯಿಂದಲೇ ನಡೀತು ಶರತ್ ಚಿತೆಗೆ ಅಗ್ನಿಸ್ಪರ್ಶ
ರೀಲ್ಸ್‌ನಿಂದಲೇ ಹಾರಿ ಹೋಯ್ತು ಪ್ರಾಣ?
ಭದ್ರಾವತಿ ಮೂಲದ ಶರತ್ ಕುಮಾರ್ (23) ಸ್ನೇಹಿತರ ಜತೆ ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದರು. ಇಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಆತ ಭೋರ್ಗರೆಯುತ್ತಿದ್ದ ಜಲಪಾತದ ಎದುರು ಕಲ್ಲಿನ ಅಂಚಿನಲ್ಲಿ ನಿಂತಿದ್ದ. ಈ ವೇಳೆ ರೀಲ್ಸ್ ಮಾಡುತ್ತಲೇ ಸಣ್ಣಗೆ ಕಾಲು ಜಾರಿದ್ದು ಯುವಕ ಅಲ್ಲಿಂದಲೇ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದ.
ಶರತ್ ಮೃತದೇಹವು ಅರಶಿನಗುಂಡಿ ಜಲಪಾತದಿಂದ 200 ಮೀಟರ್ ಕೆಳಗಡೆ ಪತ್ತೆ ಆಗಿತ್ತು. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು ಸತತ 7 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದರು. ಬಂಡೆ ಕಲ್ಲಿನ ಒಳಗಡೆ ಶರತ್ ಮೃತದೇಹವು ಸಿಲುಕಿತ್ತು. ಜುಲೈ 23ರಂದು ಕಾಲು ಜಾರಿ ನಾಪತ್ತೆಯಾಗಿದ್ದ ಶರತ್ ಜು.30ರಂದು ಶವವಾಗಿ ಪತ್ತೆ ಆಗಿದ್ದ.
ಅತ್ಯಂತ ದುರ್ಗಮ ಜಲಪಾತವಾಗಿದ್ದು, ಮಳೆಯಿಂದಾಗಿ ಧುಮ್ಮಿಕ್ಕಿ ಹರಿಯುತ್ತಿತ್ತು. ಮೇಲಿನಿಂದ ಬೀಳುವ ನೀರು ಅತ್ಯಂತ ಕಿರಿದಾದ ಕಲ್ಲುಗಳ ಬಂಡೆಗಳ ನಡುವೆ ಇಳಿದುಹೋಗುತ್ತದೆ. ಕಲ್ಲುಗಳ ನಡುವೆ ವೇಗವಾಗಿ ತೆವಳಿಕೊಂಡು ಜಿಗಿದುಕೊಂಡು ನೀರು ಹಾರುತ್ತದೆ. ಇದರಿಂದಾಗಿ ಶರತ್ ಕುಮಾರ್ ಅವರ ಶವವನ್ನು ಎಲ್ಲಿ ಹುಡುಕುವುದು ಎಂದು ತಿಳಿಯದೆ ಅಗ್ನಿ ಶಾಮಕ ದಳ ಕೂಡಾ ಕೈಚೆಲ್ಲುವ ಹಂತಕ್ಕೆ ಬಂದಿತ್ತು. ಬಳಿಕ 7 ನೇ ದಿನಕ್ಕೆ ಶರತ್ ಕುಮಾರ್ ಮೃತದೇಹವು ಪತ್ತೆಯಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ