Site icon Vistara News

Suicide Cases: ಆನ್​ಲೈನ್ ಆಟದ ಗೀಳು; ನಷ್ಟಕ್ಕೆ ಸಿಲುಕಿದ ಶಿರಸಿ ಯುವಕ ಆತ್ಮಹತ್ಯೆ

Vijet Hegde

ಶಿರಸಿ: ಆನ್​ಲೈನ್​ ಆಟಗಳ (Online Game) ಗೀಳಿಗೆ ಅದೆಷ್ಟೋ ಪ್ರಾಣಗಳು ಈಗಾಗಲೇ ಬಲಿಯಾಗಿವೆ. ಇದೀಗ ಉತ್ತರ ಕನ್ನಡದ ಶಿರಸಿಯಲ್ಲಿ ಯುವಕನೊಬ್ಬ ಆನ್​ಲೈನ್​ ಆಟಕ್ಕಾಗಿ 65 ಲಕ್ಷ ರೂಪಾಯಿಗೂ ಅಧಿಕ ಹಣ ಸುರಿದು, ನಷ್ಟಕ್ಕೆ ಒಳಗಾಗಿ ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾನೆ. ಶಿರಸಿಯ ಕುಳವೆ ಗ್ರಾಮದ ವಿಜೇತ್​ ಶಾಂತಾರಾಮ ಹೆಗಡೆ (37) ಮೃತ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಗಂತೂ ಮೊಬೈಲ್​ನಲ್ಲಿ ಬಗೆಬಗೆಯ ಆನ್​ಲೈನ್ ಆಟಗಳು ಸಿಗುತ್ತಿವೆ. ಒಂದು ಭಾರಿ ಅದರ ಲೋಕ ಪ್ರವೇಶ ಮಾಡಿದರೆ ಅಲ್ಲಿಂದ ಹೊರಬರಲು ಹರಸಾಹಸವನ್ನೇ ಪಡಬೇಕು. ಈಗ ಲಾಭ ಬರಬಹುದೇನೋ, ಮುಂದಿನ ಆಟದಲ್ಲಿ ನಾನೇ ಗೆದ್ದು ದುಡ್ಡು ಸಿಗಬಹುದೇನೋ ಎಂಬ ಆಸೆಯಿಂದ ಒಂದಾದ ಮೇಲೊಂದು ಆಟವನ್ನು ಆಡುತ್ತಲೇ ಕುಳಿತುಕೊಳ್ಳುವವರು ಅನೇಕರು. ಹೀಗೆ ವಿಜೇತ್​ ಕೂಡ ಆನ್​ಲೈನ್​ ಗೇಮ್​ಗಳ ಹುಚ್ಚು ಹಿಡಿಸಿಕೊಂಡಿದ್ದ. ಆದರೆ ಈ ಆಟದಲ್ಲಿ ಅವನು 65 ಲಕ್ಷ ರೂ.ಗೂ ಅಧಿಕ ಹಣ ಕಳೆದುಕೊಂಡಿದ್ದಾನೆ. ಬಳಿಕ ಬೇಸರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೇಟೆಗೆ ಹೋಗಿಬರುತ್ತೇನೆ ಎಂದು ಮನೆಯಲ್ಲಿ ಹೇಳಿಹೋದವನು ನೇಣಿಗೆ ಕೊರಳೊಡ್ಡಿದ್ದಾನೆ.

ಇದನ್ನೂ ಓದಿ: Family Suicide: ಪತ್ನಿ, ಮಗನನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಈಗೀಗ ಹಳ್ಳಿ ಭಾಗದಲ್ಲೂ ಆನ್​ಲೈನ್ ಗೇಮ್​ ಆಡುವವರ ಸಂಖ್ಯೆ ಹೆಚ್ಚಿದೆ. ಈಗೆರಡು ತಿಂಗಳ ಹಿಂದೆ ತುಮಕೂರಿನ ತುರುವೇಕೆರೆ ತಾಲೂಕಿನ ಮಾದಾಪಟ್ಟಣದ ಮಂಜುನಾಥ್​ (34) ಎಂಬಾತ ಹೀಗೆ ಆನ್​ಲೈನ್​ ರಮ್ಮಿ ಸರ್ಕಲ್​​ ಜೂಜಾಟದ ಚಟಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಮೈತುಂಬ ಸಾಲ ಮಾಡಿಕೊಂಡು, ಅದನ್ನು ತೀರಿಸಲಾಗದೆ ಪ್ರಾಣವನ್ನೇ ಬಿಟ್ಟಿದ್ದ. ಮೊದಲು ಸೀಮೆ‌ ಹಸುಗಳನ್ನು ಸಾಕಿಕೊಂಡು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ ಮಂಜುನಾಥ್ ಅದ್ಯಾವಾಗಲೋ ಆನ್​ಲೈನ್​ ಆಟದ ಹುಚ್ಚು ಹಿಡಿಸಿಕೊಂಡು, ಜೀವನ ಹಾಳು ಮಾಡಿಕೊಂಡಿದ್ದ. ಅದರಿಂದಲೇ ಜೀವವನ್ನೂ ಬಿಟ್ಟಿದ್ದ.

Exit mobile version