ಕೊರಟಗೆರೆ: ಕಳೆದ 10 ವರ್ಷಗಳ ಹಿಂದೆ ಕ್ಷುಲ್ಲಕ ಕಾರಣವೊಂದಕ್ಕೆ ಕುಟುಂಬವನ್ನು (Family) ತೊರೆದು ವಿವಿಧೆಡೆ ಭಿಕ್ಷೆ (Begging) ಬೇಡುತ್ತಾ ಓಡಾಡುತ್ತಿದ್ದ ವ್ಯಕ್ತಿಯನ್ನು ಕುಟುಂಬಸ್ಥರೊಂದಿಗೆ ಒಂದುಗೂಡಿಸಿ, ಕೊರಟಗೆರೆ ಠಾಣಾ ಪೊಲೀಸರು ಮಾನವೀಯತೆ (Humanity) ಮೆರೆದಿದ್ದಾರೆ.
ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಗ್ರಾಮದ ತಂಗುದಾಣದಲ್ಲಿ ಬಿಳಿಗಡ್ಡ , ಹರಿದ ಬಟ್ಟೆ , ಕೆದರಿದ ಕೂದಲು ಬಿಟ್ಟುಕೊಂಡು ಕೈಯ್ಯಲ್ಲೊಂದು ಚೀಲ ಹಿಡಿದುಕೊಂಡು ಓಡಾಡುತ್ತಿದ್ದ ಈ ವ್ಯಕ್ತಿಯನ್ನು ಕಂಡ ಜನರು, ಅನುಮಾನಗೊಂಡು ಕೂಡಲೇ ಪೊಲೀಸ್ ಸಹಾಯವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕ್ಷುಲ್ಲಕ ಕಾರಣಕ್ಕೆ ಕುಟುಂಬವನ್ನು ತೊರೆದಿದ್ದ ಗುರುಸಿದ್ದಪ್ಪನ 10 ವರ್ಷದ ಅಲೆದಾಟದ ಕಥೆ ಹೊರಬಂದಿದೆ.
64 ವರ್ಷದ ಗುರುಸಿದ್ದಪ್ಪನನ್ನು 10 ವರ್ಷದ ಬಳಿಕ ಪತ್ನಿ ಮತ್ತು ಪುತ್ರನನ್ನು ಕರೆಸಿ ಒಂದುಗೂಡಿಸಿದ ಕೊರಟಗೆರೆ ಪೊಲೀಸರ ಕಾರ್ಯ ಮಾದರಿಯಾಗಿದೆ.
ಇದನ್ನೂ ಓದಿ: Leaf Spot Disease: ಎಲೆ ಚುಕ್ಕೆ ರೋಗ ಉಲ್ಬಣ; ಕಂಗಾಲಾದ ಅಡಕೆ ಬೆಳೆಗಾರರು
ಕೊರಟಗೆರೆ ಪೊಲೀಸ್ ಠಾಣೆಯ ಎಎಸ್ಐ ಹನುಮಂತರಾಯಪ್ಪ ಎಚ್‌ಪಿಸಿ ರಾಮಕೃಷ್ಣಯ್ಯ ಮತ್ತು ಪೋಲೀಸರು ಗುರುಸಿದ್ದಪ್ಪನನ್ನು ವಿಚಾರಿಸಿ ಚೀಲ ತೆಗೆದಾಗ ಅದರಲ್ಲಿ ನಾಣ್ಯ ಹಾಗೂ ನೋಟುಗಳ ಸಹಿತ ಸುಮಾರು 50 ಸಾವಿರ ರೂ ಇತ್ತು. ಈ ಹಣವನ್ನು ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಹಣವೆಂದು ಗುರುಸಿದ್ದಪ್ಪ ತಿಳಿಸಿದ್ದಾರೆ.
ಗುಬ್ಬಿ ತಾಲೂಕು ಚೇಳೂರು ಹೋಬಳಿ ಎಂ.ಎಚ್ ಪಟ್ಟಣ ಗ್ರಾ.ಪಂ ವ್ಯಾಪ್ತಿಯ ಮಾದಪುರ ಗ್ರಾಮದ ಗುರುಸಿದ್ದಪ್ಪ ಪತ್ನಿ ಜತೆ ಜಗಳವಾಡಿ ಮನೆ ಬಿಟ್ಟು ಬಂದಿದ್ದರು. ತುಮಕೂರು , ದೇವರಾಯನದುರ್ಗ , ಮಧುಗಿರಿ , ಪಾವಗಡ , ಕೊರಟಗೆರೆ , ಸಿದ್ದರಬೆಟ್ಟ ಸೇರಿದಂತೆ ನಾನಾ ಕಡೆಗಳಲ್ಲಿ ಭಿಕ್ಷೆ ಬೇಡುತ್ತಾ ಬಸ್ ತಂಗುದಾಣ ಸೇರಿದಂತೆ ಸೂರುಗಳಲ್ಲಿ ಗುರುಸಿದ್ದಪ್ಪ ತಂಗುತ್ತಿದ್ದರು.
ಇದನ್ನೂ ಓದಿ: ತೂಕ ಮಿತಿ ಮೀರಿತು! ಲಗೇಜಿನಿಂದ 100 ಗ್ರಾಂ ಕಡಿಮೆ ಮಾಡಿ ಅಂದ್ರು ವಿಮಾನಯಾನ ಸಂಸ್ಥೆ ಸಿಬ್ಬಂದಿ!
ಮನೆ ಸೇರಿಸಿದ ಪೊಲೀಸರು
ಗುರುಸಿದ್ದಪ್ಪನ ಕಥೆ ಕೇಳಿದ ಬಳಿಕ ಪೊಲೀಸರು ಆತನ ವಿಳಾಸ ಪತ್ತೆ ಮಾಡಿ, ಬಳಿಕ ಸ್ಥಳಕ್ಕೆ ಗುರುಸಿದ್ದಪ್ಪನ ಪತ್ನಿ ಮಂಗಳಮ್ಮ ಹಾಗೂ ಪುತ್ರ ಪ್ರವೀಣ್ ನನ್ನು ಕರೆಸಿಕೊಂಡು ಗುರುಸಿದ್ದಪ್ಪನ ಚೀಲದಲ್ಲಿದ್ದ 50 ಸಾವಿರ ಹಣ ಸಹಿತ ಆತನನ್ನು ಮನೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.