ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿಯು ಕುಸಿದು ಬೀಳುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಯೇ ಕಾರಣವೆಂದು ಆಮ್ ಆದ್ಮಿ ಪಾರ್ಟಿ ಆಪಾದಿಸಿದೆ. ಕ್ರೀಡಾಂಗಣದ ಕಳಪೆ ಕಾಮಗಾರಿಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ಮಂಗಳವಾರ ಪ್ರತಿಭಟನೆ ನಡೆಸಿತು.
ವಾಜಪೇಯಿ ಕ್ರೀಡಾಂಗಣವನ್ನು ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಗ್ಯಾಲರಿ ಚಾವಣಿಗೇ ನಾಲ್ಕು ಕೋಟಿ ರೂ. ಖರ್ಚಾಗಿತ್ತು. ಮಾರ್ಚ್ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಉದ್ಘಾಟಿಸಿದ್ದರು. ಆದರೆ ಎರಡು ತಿಂಗಳಲ್ಲಿ ಚಾವಣಿ ಮುರಿದು ಬಿದ್ದಿದೆ. ಗಾಳಿಯ ರಭಸಕ್ಕೆ ಕಬ್ಬಿಣದ ಕಂಬಗಳು ಮುರಿದಿವೆ, ಅಲ್ಲಲ್ಲಿ ಸಿಮೆಂಟ್ ಕೂಡ ಕಿತ್ತುಹೋಗಿದೆ, ಚಾವಣಿ ಕುಸಿತದಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ರೀತಿ ಗ್ಯಾಲರಿ ಕುಸಿದು ಬೀಳಲು ಕಳಪೆ ಕಾಮಗಾರಿ ಕಾರಣ ಎಂದು ಆಮ್ ಆದ್ಮಿ ಪಾರ್ಟಿ ಆಪಾದಿಸಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಎಪಿ ಅಧ್ಯಕ್ಷ ಮೋಹನ್ ದಾಸರಿ ಅವರು ಬಿಜೆಪಿ ಸರಕಾರವು ಗುತ್ತಿಗೆದಾರರಿಂದ 40% ಕಮಿಷನ್ ಕಡ್ಡಾಯ ಮಾಡಿದ್ದರಿಂದ ಈ ಸಮಸ್ಯೆ ಆಗಿದೆ ಎಂದರು.
ಬಿಜೆಪಿ ಸರ್ಕಾರ ಹಾಗೂ ಸ್ಥಳೀಯ ಶಾಸಕ ಸತೀಶ್ ರೆಡ್ಡಿಯವರ 40% ಕಮಿಷನ್ ದಂಧೆಗೆ ಇದೊಂದು ನಿದರ್ಶನ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜನರ ಹಣವು ಭ್ರಷ್ಟರ ಪಾಲಾಗಿ, ಸಾರ್ವಜನಿಕ ಆಸ್ತಿಗಳು ಕಳಪೆಯಾಗುವುದನ್ನು ನೋಡಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ” ಎಂದು ಮೋಹನ್ ದಾಸರಿ ಹೇಳಿದರು.
ಇದನ್ನು ಓದಿ | ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್?: ಬಿಹಾರದಲ್ಲಿ ಇಫ್ತಾರ್ʼ ರಾಜಕೀಯ
ಕಳಪೆ ಕಾಮಗಾರಿಯನ್ನು ಜನರಿಗೆ ತೋರಿಸಲು ಸ್ಥಳಕ್ಕೆ ಆಗಮಿಸಿದ ಎಎಪಿ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿರುವುದು ಖಂಡನೀಯ. ಭ್ರಷ್ಟ ಹಾಗೂ ಗೂಂಡಾ ಪಕ್ಷವಾದ ಬಿಜೆಪಿಯನ್ನು ನಾವು ಅಧಿಕಾರದಿಂದ ಕಿತ್ತೊಗೆಯುತ್ತೇವೆ ಅಂತ ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ, ಜಗದೀಶ್ ಚಂದ್ರ ಯೋಗಿತಾ ರೆಡ್ಡಿ, ಪಲ್ಲವಿ ಚಿದಂಬರಂ, ನಾಗಭೂಷಣ ರೆಡ್ಡಿ, ಮಂಜುನಾಥಸ್ವಾಮಿ, ಕಲೈ, ಫಿರೋಜ್ ಖಾನ್, ವೀಣಾ ರಾವ್, ಸತೀಶ್ ಗೌಡ ಮತ್ತಿತರ ಮುಖಂಡರು, ಕಾರ್ಯಕರ್ತರು ಭಾಗಿಯಾದರು.
ಇದನ್ನು ಓದಿ | ರಾಜ್ಯದಲ್ಲೀಗ 150+ ಜಪ: BJP, CONGRESS ನಡುವೆ JDS ನಡೆ ವಿಭಿನ್ನ