ಬೆಂಗಳೂರು: ಬಸವನಗುಡಿಯ ಅಬಲಾಶ್ರಮದಲ್ಲಿ ಭಾನುವಾರ ಅದ್ಧೂರಿಯಾಗಿ ʼಸಮರ್ಪಣಾ ದಿನʼ ಆಚರಿಸಿಲಾಯಿತು. ಮಹಿಳೆಯರಿಗೆ ಆಶ್ರಯದ ಜತೆ ಜತೆಗೆ ಬದುಕಿನ ಮಾರ್ಗ ತೋರುತ್ತಿರುವ ಅಬಲಾಶ್ರಮವನ್ನು ಕಟ್ಟಿದ ಚಕ್ರವರ್ತಿ ವೆಂಕಟವರದ ಅಯ್ಯಂಗಾರ್ ಹಾಗೂ ಕೃಷ್ಣಮ್ಮನವರ ನೆನಪಿಗಾಗಿ ಸಮರ್ಪಣಾ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆಶ್ರಮದ ವಿದ್ಯಾರ್ಥಿನಿಯರು ಭರತನಾಟ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಮರ್ಪಣಾ ದಿನದ ಅಂಗವಾಗಿ ವಿಧವಾ ಪುನರ್ ವಿವಾಹ ಕುರಿತು ಬರೆಯಲಾಗಿರುವ ʼಸವಿಸ್ಮೃತಿʼ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ವಂದನೀಯ ಪ್ರಮುಖ ಸಂಚಾಲಿಕಾ ಮಾನನೀಯ ಶಾಂತಕುಮಾರಿ ಅವರು, ಅನಾಥ ಶವಸಂಸ್ಕಾರಗಳ ಮೂಲಕ ಸಮಾಜಸೇವೆ ಮಾಡುತ್ತಿರುವ ಆಶಾ ಹಾಗೂ ಅಬಲಾಶ್ರಮದ ಪಂಕಜಾ ರಾಮಚಂದ್ರರವರಿಗೆ ಗೌರವ ಸಮರ್ಪಣೆ ಮಾಡಿದರು.
ಇದನ್ನೂ ಓದಿ | Suttur Jatre: ನಡೆ-ನುಡಿಯಿಂದ ಮಾತ್ರ ಮನುಷ್ಯ ದೊಡ್ಡವನಾಗಲು ಸಾಧ್ಯ: ಸಿಎಂ ಬಸವರಾಜ ಬೊಮ್ಮಾಯಿ
ಇದೇ ವೇಳೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಅಬಲಾಶ್ರಮದ ಸಮಾಜ ಸೇವೆ, ಸಂಸ್ಥೆಯೊಂದಿಗೆ ಒಡನಾಟದ ಕುರಿತು ಹಲವು ಮಹನೀಯರು ಬರೆದಿರುವ ಲೇಖನಗಳ ಸಂಗ್ರಹವಾದ ʼಸ್ಮರಣಿಕಾ ಸಂಚಿಕೆʼ ಪುಸ್ತಕವನ್ನು ಬಿಡುಗಡೆಮಾಡಿದರು. ನಂತರ ಮಾತನಾಡಿದ ಅವರು, ಈ ಸಂಸ್ಥೆ 100 ವರ್ಷಗಳಿಂದ ಮಹಿಳೆಯರ ಸಬಲೀಕರಣಕ್ಕೆ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಗಳು ಇನ್ನು ಹೆಚ್ಚಾಗಿ ಸಮಾಜಕ್ಕಾಗಿ ಕೆಲಸ ಮಾಡಬೇಕಿದೆ ಎಂದರು.
ಮಹಾರಾಜ ಜಯಚಾಮರಾಜ ಒಡೆಯರ್ ಅವರು 1964ರಲ್ಲಿ ಅಬಲಾಶ್ರಮದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಅವರ ಜತೆ ರಾಜಕುಮಾರಿ ಗಾಯತ್ರಿದೇವಿ ಅವರು ಕೂಡ ಪುತ್ರಿ ಜತೆ ಭಾಗವಹಿಸಿದ್ದರು. ನೂರು ವರ್ಷಗಳಿಂಗಿಂತ ಹೆಚ್ಚು ಕಾಲ ಒಂದು ಸಂಸ್ಥೆಯನ್ನು ನಡೆಸಿಕೊಂಡು ಬಂದಿರುವುದು ಚಿಕ್ಕ ವಿಷಯವಲ್ಲ. ಈ ನಿಟ್ಟಿನಲ್ಲಿ ಅಬಲಾಶ್ರಮಕ್ಕಾಗಿ ಶ್ರಮಿಸಿರುವ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ನೆರವು ನೀಡಿರುವವರಿಗೆ ಕೃತಜ್ಞತೆ ಸಲ್ಲಿಸಲು ಇಚ್ಛಿಸುತ್ತೇನೆ ಎಂದು ಹೇಳಿದರು.
ಅಬಲಾಶ್ರಮದ ಆಡಳಿತ ಮಂಡಳಿ ಅಧ್ಯಕ್ಷೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು ಮಾತನಾಡಿ, ಅಬಲಾಶ್ರಮದಿಂದ ಸುರಕ್ಷಾ ಯೋಜನೆಯನ್ನು ಹಮ್ಮಿಕೊಂಡಿಕೊಂಡಿದ್ದೇವೆ. ಈ ಯೋಜನೆಯಲ್ಲಿ ಮನೆಯಿಂದ ಹೊರಹಾಕಿರುವ ನಿರಾಶ್ರಿತ ತಾಯಿ, ಮಕ್ಕಳಿಗೆ ಆಶ್ರಯ ನೀಡಲಾಗುತ್ತಿದೆ. ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಅಬಲಾಶ್ರಮ ಒಂದು ಪುಣ್ಯಭೂಮಿ, ಪವಿತ್ರಭೂಮಿಯಾಗಿದೆ. ದಾನಿಗಳಿಂದಲೇ ಆಶ್ರಮ ನಡೆಯುತ್ತಿದ್ದು, ಅಬಲಾಶ್ರಮಕ್ಕೆ ನೆರವು ನೀಡುತ್ತಿರುವ ದಾನಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.
ಅಬಲಾಶ್ರಮ ಆಡಳಿತ ಮಂಡಳಿ ಉಪಾಧ್ಯಕ್ಷೆ ಡಾ.ಗೀತಾ ಕೃಷ್ಣಮೂರ್ತಿ, ಗೌರವ ಕಾರ್ಯದರ್ಶಿ ಬಾ.ವೆಂ.ಶೇಷ, ಅತಿಥಿಗಳಾದ ಅಖಿಲ ಭಾರತೀಯ ಕುಟುಂಬ ಪ್ರಬೋಧನ ಪ್ರಮುಖ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪಲ್ಲವಿ ಅಗರ್ವಾಲ್ ಮತ್ತಿತರರು ಉಪಸ್ಥಿತರಿದ್ದರು.