Site icon Vistara News

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ; ಮಂಗಳೂರಿನ ಬಳ್ಕುಂಜೆಯಲ್ಲಿ ರೈತರ ಬೃಹತ್‌ ಪ್ರತಿಭಟನೆ

ಪ್ರತಿಭಟನೆ

ಮಂಗಳೂರು: ಕೈಗಾರಿಕೆ ವಲಯಕ್ಕೆ ಭೂ ಸ್ವಾಧೀನ ವಿರೋಧಿಸಿ ತಾಲೂಕಿನ ಬಳ್ಕುಂಜೆ ಗ್ರಾಮದಲ್ಲಿ ಸಾವಿರಾರು ಕೃಷಿಕರು ಹಾಗೂ ಸಮಾನಮನಸ್ಕರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಮಂಗಳೂರು ತಾಲೂಕಿನ ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಗ್ರಾಮಗಳಲ್ಲಿ 1,091 ಎಕರೆ ಭೂಮಿ ಭೂ ಸ್ವಾಧೀನಕ್ಕೆ ಸರ್ಕಾರದ ಸಿದ್ಧತೆ ನಡೆಸಿದೆ. ಕೈಗಾರಿಕಾ ವಲಯಕ್ಕಾಗಿ 2022ರ ಮಾ.21ರಂದು 1,091 ಎಕರೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಾಲೀಕರ ಒಪ್ಪಿಗೆ ಪಡೆಯುವ ಪ್ರಕ್ರಿಯೆ ನಡೆಸಿದ್ದು, ಒಪ್ಪಿಗೆ ಮತ್ತು ಆಕ್ಷೇಪಕ್ಕೆ ಜೂ.27ರವರೆಗೆ ಸಮಯ ನೀಡಿದೆ. ಆದರೆ 60% ಮಾಲೀಕರು ಭೂಮಿ ಕೊಡಲು ಒಪ್ಪಿದ್ದರೂ ಉಳಿದ ಕೃಷಿಕರಿಂದ ವಿರೋಧ ವ್ಯಕ್ತವಾಗಿದೆ.

ಯೋಜನೆ ವಿರೋಧಿಸಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕಿನ್ನಿಗೋಳಿ-ಬಳ್ಕುಂಜೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ ನೂರಾರು ಪ್ರತಿಭಟನಾಕಾರರು, ರಸ್ತೆ ‌ಮೇಲೆ ಕುಳಿತು, ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

ನೈಸರ್ಗಿಕವಾಗಿ ಸಂಪದ್ಭರಿತವಾಗಿರುವ ಈ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡುವುದು ಸರ್ಕಾರದ ತಪ್ಪು ನಿರ್ಧಾರ. ಇದರಿಂದ ಜನರು ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಕೃಷಿ ಭೂಮಿ, ಪರಿಸರ, ಶಾಂಭವಿ ನದಿ ಜತೆ ಜಲಚರಗಳು, ವಾತಾವರಣ ಹಾಗೂ ಜನರ ಬದುಕು ಸರ್ವನಾಶವಾಗಲಿದೆ. ಹೀಗಾಗಿ ಕೈಗಾರಿಕಾ ವಲಯಕ್ಕಾಗಿ ನಡೆಸುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಸರ್ಕಾರ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಮೀನಿ, ದೈವಸ್ಥಾನ ನಾಶ

ಈ ಭಾಗದಲ್ಲಿ ವಾಸವಾಗಿರುವ ಕರಾವಳಿಯಲ್ಲಿ ಅತೀ ಹಿಂದುಳಿದ ಸಮೂದಾಯವಾಗಿರುವ ಕೊರಗರಿಗೆ ಸೇರಿದ 11 ಎಕರೆ ಕೃಷಿ ಭೂಮಿ ನಾಶವಾಗಲಿದೆ. ಇನ್ನು 42 ದೈವಸ್ಥಾನ, ಚರ್ಚ್‌, ಮಸೀದಿ ಸೇರಿದಂತೆ ಎಲ್ಲವನ್ನೂ ಎಸ್‌ಇಝಡ್‌ಗೆ ಬಿಟ್ಟುಕೊಡಬೇಕಾಗಿದೆ. ಈ ಭಾಗದ ಬಹುತೇಕ ಜನರಿಗೆ ಹೈನುಗಾರಿಕೆ ಮತ್ತು ಕೃಷಿ ಬಿಟ್ಟರೆ ಬೇರೆನೂ ಗೊತ್ತಿಲ್ಲ. ಕೊರೊನಾ ಸಮಯದಲ್ಲಿ ದೂರದ ಊರಲ್ಲಿ ಕೆಲಸ ಮಾಡುತ್ತಾ ಇದ್ದವರೂ ಈಗ ಊರು ಸೇರಿ ಇಲ್ಲೇ ಕೃಷಿ ಮಾಡಿಕೊಂಡಿದ್ದಾರೆ. ಇದೀಗ ಭೂ ಸ್ವಾಧೀನ ಮಾಡಿದರೆ ಪರ್ಯಾಯ ಸ್ಥಳವನ್ನು ಸರ್ಕಾರ ನೀಡಬಹುದು ಆದರೆ ಉದ್ಯೋಗಕ್ಕೆ ಏನು ಮಾಡುವುದು ಎಂದು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಹಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹೊಸ ಕೈಗಾರಿಕಾ ವಲಯ ನಿರ್ಮಾಣವಾಗಿ ಸರ್ಕಾರ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಕೈಗಾರಿಕೆಗಳಿಂದ ಹಾರುವ ಕರಿಧೂಳು ಜನರ ಬದುಕನ್ನೆ ಕಸಿದುಕೊಂಡಿದೆ. ಹೀಗಿರುವಾಗ ಸರ್ಕಾರ ಮತ್ತೊಂದು ಕೈಗಾರಿಕಾ ವಲಯಕ್ಕೆ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಜನರ ಆಕ್ರೋಶವನ್ನ ಹೆಚ್ಚಿಸಿದೆ. ಈಗ ಆರಂಭ ಮಾತ್ರ. ಮುಂದಿನ ದಿನದಲ್ಲಿ ಭೂಸ್ವಾಧಿನ ಕೈಬಿಡದಿದ್ರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇದನ್ನೂ ಓದಿ | ಶಿವಸೇನೆ ಶಾಸಕರು ತಂಗಿರುವ ಹೋಟೆಲ್‌ ಎದುರು ಟಿಎಂಸಿ ಸದಸ್ಯರಿಂದ ಬಿಜೆಪಿ ವಿರೋಧಿ ಪ್ರತಿಭಟನೆ

Exit mobile version