ತುಮಕೂರು/ ಚಿಕ್ಕಮಗಳೂರು: ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ (road Accident) ಜೀವ ಬಿಟ್ಟಿದ್ದಾನೆ. ತುಮಕೂರಿನ ತಿಪಟೂರು ತಾಲೂಕಿನ ಹತ್ಯಾಳು ಬೆಟ್ಟದ ಬಳಿ ಘಟನೆ (Accident Case) ನಡೆದಿದೆ. ಬೈಕ್ ಸವಾರ ಪ್ರಕಾಶ್ (40) ಮೃತ ದುರ್ದೈವಿ.
ಡಿಎಸ್‌ಎಸ್ ಮುಖಂಡರಾಗಿದ್ದ ಪ್ರಕಾಶ್ ಹತ್ಯಾಳು ಬೆಟ್ಟದಿಂದ ಬೆನಾಯ್ಕನಹಳ್ಳಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಕೆ.ಬಿ.ಕ್ರಾಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಹೊತ್ತಿ ಉರಿದ ಕಾರು; ಪ್ರಯಾಣಿಕರು ಅಪಾಯದಿಂದ ಪಾರು
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ರಸ್ತೆ ಮಧ್ಯೆಯೇ ಕಾರೊಂದು ಹೊತ್ತಿ ಉರಿದಿದೆ. ಚಲಿಸುತ್ತಿದ್ದಾಗಲೇ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಮೂವರು ಇಳಿದು ಓಡಿ ಹೋಗಿದ್ದಾರೆ.
ಸಣ್ಣದಾಗಿ ಕಾಣಿಸಿಕೊಂಡ ಕಿಡಿ ಒಮ್ಮೆಲೆ ಪೂರ್ತಿ ಆವರಿಸಿ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರು. ಬೆಂಕಿಯ ತೀವ್ರತೆಯಿಂದ ಕಾರು ಸಂಪೂರ್ಣ ಹಾನಿಯಾಗಿದೆ.
ಅಗ್ನಿಗೆ ಆಹುತಿಯಾದ ಎರಡು ಅಂಗಡಿಗಳು
ಕೊಪ್ಪಳ ನಗರದ ಗಂಜ್ ಸರ್ಕಲ್ ಬಳಿ ತಡರಾತ್ರಿ ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮವಾಗಿವೆ. ಶಫಿಕ್ ಸಿದ್ದಿಕಿ ಎಂಬುವವರಿಗೆ ಸೇರಿದ ಆಟೋ ಮೊಬೈಲ್ ಹಾಗೂ ಹನುಮಂತಪ್ಪ ಎಂಬುವವರ ಹೋಟೆಲ್ ಸುಟ್ಟು ಹೋಗಿವೆ. ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ಸವಾರ ಸತ್ತರೂ ನೋಡದೆ ಹೋದ ಕಾರು ಚಾಲಕ!
ಬೆಂಗಳೂರು: ಬೆಂಗಳೂರಿನ ಕೆಂಗೇರಿ ಸಮೀಪದ ಗಾಣಕಲ್ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ಗೆ (Hit And Run case) ಬೈಕ್ ಸವಾರ (Road Accident) ಬಲಿಯಾಗಿದ್ದಾನೆ. ಅಜಯ್ ಕುಮಾರ್ ಮೃತ ದುರ್ದೈವಿ.
ಚಿಕ್ಕೇಗೌಡನಪಾಳ್ಯ ಕಡೆಯಿಂದ ಉತ್ತರಹಳ್ಳಿ ರಸ್ತೆ ಕಡೆಗೆ ವೇಗವಾಗಿ ಬಂದ ಕಾರು, ಮುಂದೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಅಪಘಾತದ ಬಳಿಕ ಸ್ಥಳದಿಂದ ಕಾರು ಸಮೇತ ಚಾಲಕ ಪರಾರಿ ಆಗಿದ್ದಾನೆ. ಘಟನೆ ಸಂಬಂಧ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕಾರು ಚಾಲಕನಿಗಾಗಿ ಹುಡುಕಾಟ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ