Site icon Vistara News

Actor Darshan: ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ದರ್ಶನ್‌

Darshan

ಬೆಂಗಳೂರು: ಹಿರಿಯ ನಟಿ ಲೀಲಾವತಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಸೋಲದೇವನಹಳ್ಳಿಯ ನಿವಾಸಕ್ಕೆ ನಟ ದರ್ಶನ್‌ ಅವರು ಭಾನುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಲೀಲಾವತಿ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ನಟ ಅರ್ಜುನ್ ಸರ್ಜಾ ಅವರು ಇತ್ತೀಚೆಗೆ ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ದರ್ಶನ್‌ (Actor Darshan) ಅವರು ಹಿರಿಯ ನಟಿ ಮನೆಗೆ ಭೇಟಿ ನೀಡಿರುವುದು ಕಂಡುಬಂದಿದೆ.

ನಟ ದರ್ಶನ್ ಅವರು ಭೇಟಿ ನೀಡಿದ ವೇಳೆ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ‌ ವಿಚಾರಿಸಿ, ಆಶೀರ್ವಾದ ಪಡೆದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಲೀಲಾವತಿ ಅವರ ಮನೆಗೆ ನಟ, ನಟಿಯರು ಸೇರಿ ಚಿತ್ರರಂಗದ ಗಣ್ಯರು ಭೇಟಿ ನೀಡಿ ಅರೋಗ್ಯ ವಿಚಾರಿಸುತ್ತಿದ್ದಾರೆ.

ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ | Kochi Stampede: ಹೃದಯ ಛಿದ್ರಗೊಂಡಿದೆ; ಕೊಚ್ಚಿ ಕಾಲ್ತುಳಿತಕ್ಕೆ ಗಾಯಕಿ ನಿಖಿತಾ ಗಾಂಧಿ ಕಂಬನಿ

ಹಿರಿಯ ನಟಿ ಲೀಲಾವತಿ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂನ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಪೈಕಿ 400ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಎನ್ನುವುದು ವಿಶೇಷ. ಇವರಿಗೆ 1999-2000 ಸಾಲಿನಲ್ಲಿ ಕರ್ನಾಟಕ ಚಲನಚಿತ್ರರಂಗದ ಜೀವಮಾನದ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಡಾ.ರಾಜ್‌ಕುಮಾರ್‌ ಪ್ರಶಸ್ತಿ ನೀಡಲಾಗಿತ್ತು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗಿತ್ತು.

ಇದನ್ನೂ ಓದಿ | Bangalore Kambala: ಬೆಂಗಳೂರು ಕಂಬಳಕ್ಕೆ ರಕ್ಷಿತ್ ಶೆಟ್ಟಿ ಸಪೋರ್ಟ್‌; ತಾರೆಯರ ಸಮಾಗಮ!

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಲೀಲಾವತಿ ನಾಟಕ ಮತ್ತು ರಂಗಭೂಮಿಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. 1949ರಲ್ಲಿ ಶಂಕರ್‌ಸಿಂಗ್‌ ಅವರ ʻನಾಗಕನ್ನಿಕೆʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ʻಮಾಂಗಲ್ಯ ಯೋಗʼ ಡಾ. ರಾಜ್‌ಕುಮಾರ್‌ ಅವರೊಂದಿಗೆ ನಟಿಸಿದ ಮೊದಲ ಚಿತ್ರವಾಗಿತ್ತು. ಈ ಚಿತ್ರದ ಮೂಲಕ ಮೊದಲಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು. 70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿ ತಮ್ಮನ್ನು ತೊಡಗಿಸಿಕೊಂಡರು.

Exit mobile version