Site icon Vistara News

Loose Mada Yogi: ತಮಿಳು ಮಾತುಗಳಿಗೆ ಕ್ಷಮೆ ಕೇಳಿದ ನಟ ಲೂಸ್‌ ಮಾದ ಯೋಗಿ

loose mada yogi

ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ತಮಿಳಿನಲ್ಲಿ ಮಾತನಾಡಿದ್ದಕ್ಕೆ ಸ್ಯಾಂಡಲ್‌ವುಡ್‌ ನಟ ಲೂಸ್‌ ಮಾದ ಯೋಗಿ (Loose Maada Yogi) ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಿನಿಮಾ ಪ್ರಚಾರದ ವೇಳೆ ಆಡಿದ್ದ ತಮ್ಮ ಮಾತುಗಳು ವಿವಾದಕ್ಕೆ ಆಸ್ಪದ ನೀಡಿದ್ದರಿಂದ ಇದೀಗ, ನಟ ಲೂಸ್‌ ಮಾದ ಯೋಗಿ ಅವರು ಕ್ಷಮೆಯಾಚಿಸಿದ್ದಾರೆ.

ಇತ್ತೀಚೆಗೆ ವಿವೇಕ್ ನಗರದಲ್ಲಿ ಲೂಸ್ ಮಾದ ಯೋಗಿ ನಟನೆಯ ‘ರೋಜಿ‘ (Rosy) ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಲೂಸ್ ಮಾದ ಯೋಗಿ ಅವರು ತಮಿಳಿನಲ್ಲಿ ಮಾತನಾಡಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಆರಂಭವನ್ನು ಕನ್ನಡದಲ್ಲಿಯೇ ಮಾತನಾಡಿದ್ದ ಯೋಗಿ, ನಂತರ ತಮಿಳು ಭಾಷೆಯಲ್ಲಿ ಮಾತು ಮುಂದುವರಿಸಿದ್ದರು. ‘ರೋಜಿ’ ಸಿನಿಮಾದಲ್ಲಿ ತಮಿಳಿನ ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ ಸಹ ನಟಿಸಿದ್ದು, ಅವರು ವೇದಿಕೆ ಮೇಲಿದ್ದರಿಂದ ಹಾಗೂ ಆ ಭಾಗದಲ್ಲಿ ಹೆಚ್ಚಿನ ಜನ ತಮಿಳು ಭಾಷಿಕರು ಇದ್ದ ಕಾರಣಕ್ಕೆ ಯೋಗಿ ತಮಿಳು ಭಾಷೆಯಲ್ಲಿ ಮಾತನಾಡಿದ್ದರು. ರೋಜಿ ಸಿನಿಮಾ ಮುಂದಿನ ವರ್ಷ ರಿಲೀಸ್‌ ಆಗುತ್ತದೆ. ಸಿನಿಮಾ ಸಖತ್‌ ಆಗಿರಲಿದೆ. ಎಲ್ಲರಿಗೂ ಇದೊಂದು ರೀತಿಯ ವಿಶ್ಯುವಲ್‌ ಟ್ರೀಟ್‌, ಸ್ಯಾಂಡಿ ಮಾಸ್ಟರ್‌ ಅವರ ಡಾನ್ಸ್‌ ಟ್ರೀಟ್.‌ ನಾನು ಅವರ ಬಿಗ್‌ ಫ್ಯಾನ್‌ ಎಂದು ತಮಿಳಿನಲ್ಲಿಯೇ ಭಾಷಣ ಮಾಡಿದ್ದರು.

ಇದನ್ನೂ ಓದಿ | Kannada Serials TRP: ಟಿಆರ್‌ಪಿ ರೇಸ್‌ನಲ್ಲಿ ‘ಕೆಂಡ ಸಂಪಿಗೆ’, ‘ರಾಮಾಚಾರಿ’; ಐದನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’!

ಇದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಬೆಳೆಯಲು ಕನ್ನಡ ಸಿನಿಮಾ ಬೇಕು. ಸ್ಥಳೀಯ ಕನ್ನಡಿಗರು ಕನ್ನಡ ಮಾತನಾಡಿ ಎಂದರೂ ತಮಿಳರು ಜಾಸ್ತಿ ಇದ್ದಾರೆ ಎಂದು ತಮಿಳು ಮಾತನಾಡಿದ್ದಾರಂತೆ. ಈ ಮೂಲಕ ಇಲ್ಲಿನ ತಮಿಳರಿಗೆ ನೀವು ಕನ್ನಡ ಕಲಿಬೇಡಿ ನಾವೇ ತಮಿಳು ಕಲಿಯುತ್ತೇವೆ ಎಂಬ ಸಂದೇಶ ನೀಡಲು ಹೊರಟಿದ್ದೀರಾ ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ಹೀಗಾಗಿ ನಟ ಕ್ಷಮೆ ಕೇಳಿದ್ದಾರೆ.

ಇದೀಗ ವಿಡಿಯೊ ಒಂದನ್ನು ಬಿಡುಗಡೆ ಮಾಡಿರುವ ಲೂಸ್ ಮಾದ ಯೋಗಿ ಅವರು, ʼರೋಜಿ’ ಸಿನಿಮಾದ ಪೋಸ್ಟರ್ ಲಾಂಚ್ ಕಾರ್ಯಕ್ರಮದಲ್ಲಿ ತಮಿಳು ಮಾತನಾಡಿದ್ದೀನಿ ಎಂಬುದು ತುಂಬಾ ಜನಕ್ಕೆ ಬೇಜಾರಾಗಿದೆ. ನಿಜ ಏನೆಂದರೆ ನಾನು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿ ಬಳಿಕ ತಮಿಳಿನಲ್ಲಿ ಮಾತನಾಡಿ ಅಂತಿಮವಾಗಿ ಕನ್ನಡದಲ್ಲಿಯೇ ಭಾಷಣ ಮುಗಿಸಿದ್ದೀನಿ. ಆದರೂ ನಾನು ತಮಿಳು ಮಾತನಾಡಿದ್ದು ಕೆಲವರಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ.

ಯಾರಿಗೂ ಬೇಸರ ಮಾಡಲೆಂದು, ನೋವು ಕೊಡಲೆಂದು ನಾನು ತಮಿಳು ಮಾತನಾಡಲಿಲ್ಲ, ಬದಲಿಗೆ ಅಲ್ಲಿ ಸಾಕಷ್ಟು ಜನ ತಮಿಳರು ಇದ್ದರು ಅಲ್ಲದೆ, ನಮ್ಮ ‘ರೋಸಿ’ ಸಿನಿಮಾವನ್ನು ಸಹ ನಾವು ಕನ್ನಡದ ಜತೆಗೆ ತೆಲುಗು, ತಮಿಳು ಭಾಷೆಗಳಲ್ಲಿಯೂ ಬಿಡುಗಡೆ ಮಾಡುತ್ತಿದ್ದೇವೆ. ಹೀಗಾಗಿ ನಾನು ತಮಿಳಿನಲ್ಲಿ ಮಾತನಾಡಿದೆ. ನಾನು ತಮಿಳಿನಲ್ಲಿ ಮಾತನಾಡಿದ್ದು ತಪ್ಪು ಅನಿಸಿದರೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | Tiger 3 box office collection: ಆರು ದಿನಗಳಲ್ಲಿ ವಿಶ್ವಾದ್ಯಂತ 300 ಕೋಟಿ ರೂ. ಕಲೆಕ್ಷನ್‌ ಮಾಡಿದ ಟೈಗರ್‌ 3

ಇತ್ತೀಚೆಗೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ನೀರಿನ ವಿವಾದ ಭುಗಿಲೆದ್ದಿತ್ತು. ಬಂದ್‌ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರಕ್ಕೆ ಆಗಮಿಸಿದ್ದ ನಟ ಸಿದ್ಧಾರ್ಥ್ ಕಾರ್ಯಕ್ರಮಕ್ಕೆ ಕನ್ನಡಪರ ಹೋರಾಟಗಾರರು ಅಡ್ಡಿ ಪಡಿಸಿ, ಆಕ್ರೋಶ ಹೊರಹಾಕಿದ್ದರು. ನಂತರ ಚಿತ್ರರಂಗದಿಂದ ಕಾವೇರಿ ನೀರಿಗಾಗಿ ಹೋರಾಟವೂ ನಡೆಯಿತು. ಇದರ ಬೆನ್ನಲ್ಲೇ ನಟ ಯೋಗಿ ಸಿನಿಮಾ ಪ್ರಚಾರಕ್ಕಾಗಿ ತಮಿಳು ಮಾತನಾಡಿದ್ದು ಕನ್ನಡಿಗರ ಬೇಸರಕ್ಕೆ ಕಾರಣವಾಗಿತ್ತು. ಹೀಗಾಗಿ ನಟ ಕ್ಷಮೆಯಾಚಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version