ಬೆಂಗಳೂರು: ನಟ ನಾಗಭೂಷಣ್ (Actor Nagabhushana) ಕಾರು ಅಪಘಾತ ಪ್ರಕರಣಕ್ಕೆ (car Accident) ಸಂಬಂಧಿಸಿದ್ದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಕುಡಿದು ವಾಹನ ಚಲಾಯಿಸಿರುವ ಶಂಕೆ ಇದ್ದ ಕಾರಣಕ್ಕೆ ನಿನ್ನೆ ಭಾನುವಾರ ಪರೀಕ್ಷಗೆ ಒಳಪಡಿಸಲಾಗಿತ್ತು. ಇದೀಗ ರಕ್ತಪರೀಕ್ಷೆ ಹಾಗೂ ಮದ್ಯಪಾನದ ರಿಪೋರ್ಟ್ ನೆಗೆಟಿವ್ ಬಂದಿದೆ.
ಅಪಘಾತದ ನಂತರ ನಟ ನಾಗಭೂಷಣ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಠಾಣೆಯಲ್ಲಿ ಸ್ಟೇಷನ್ ಬೇಲ್ ನೀಡಿ ಬಿಡುಗಡೆ ಮಾಡಲಾಗಿತ್ತು. ತನಿಖೆಯನ್ನು ಮುಂದುವರಿಸಿದ್ದು ಮಂಗಳವಾರ (ಅ.2) ರಂದು ವಿಚಾರಣೆಗೆ ಹಾಜರಾಗಬೇಕೆಂದು ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರು ನಟನಿಗೆ ನೋಟೀಸ್ ನೀಡಿದ್ದಾರೆ.
ವೇಗವಾಗಿ ಚಾಲನೆ ಮಾಡಿದ್ದು, ನಿಜ ಆದರೆ ತಿರುವು ಇದ್ದ ಕಾರಣ ತಿಳಿಯಲಿಲ್ಲ. ತಿರುವಿನಲ್ಲಿ ನಿಯಂತ್ರಣ ಮಾಡಲು ಆಗದೆ ಈ ಅಪಘಾತ ನಡೆದಿದೆ ಎಂದು ನಟ ನಾಗಭೂಷಣ್ ಹೇಳಿಕೆ ದಾಖಲಿಸಿದ್ದಾರೆ.
ಚೇತರಿಸಿಕೊಳ್ಳುತ್ತಿರುವ ಗಾಯಾಳು
ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಕೃಷ್ಣರಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪಘಾತದ ದೃಶ್ಯ ಇಲ್ಲಿದೆ ನೋಡಿ
ವಿಸ್ತಾರ ನ್ಯೂಸ್‌ಗೆ ಅಪಘಾತದ ಎಕ್ಸ್‌ಕ್ಯೂಸಿವ್ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಪ್ರೇಮ ಹಾಗೂ ಕೃಷ್ಣ ದಂಪತಿಗೆ ಡಿಕ್ಕಿ ಹೊಡೆದ ಬಳಿಕ ನಾಗಭೂಷಣ್ ಕಂಬಕ್ಕೆ ಗುದ್ದಿದ್ದಾರೆ. ನಾಗಭೂಷಣ್ ಕಾರು ಕಂಬಕ್ಕೆ ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 30ರ ರಾತ್ರಿ 10.21ರ ಸಮಯಕ್ಕೆ ಈ ಅಪಘಾತ ಪ್ರಕರಣ ನಡೆದಿದೆ.
ಏನಿದು ಘಟನೆ?
ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲಿ ನಟಿಸಿರುವ ನಟ ನಾಗಭೂಷಣ ಅವರ (Actor Nagabhushana) ಕಾರು ದಂಪತಿಗೆ ಡಿಕ್ಕಿಯಾಗಿದ್ದು, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ವಸಂತನಗರ ಮುಖ್ಯರಸ್ತೆಯ ಬಳಿ ಶನಿವಾರ ರಾತ್ರಿ (ಸೆಪ್ಟೆಂಬರ್ 30) ದಂಪತಿ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುವಾಗ ನಾಗಭೂಷಣ ಅವರ ಕಾರು ಡಿಕ್ಕಿಯಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೃಷ್ಣ (58) ಹಾಗೂ ಅವರ ಪತ್ನಿ ಪ್ರೇಮಾ (48) ಅವರು ರಾತ್ರಿ ವಾಕಿಂಗ್ ಮಾಡುವಾಗ ನಟ ನಾಗಭೂಷಣ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಮೊದಲು ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದ್ದು, ನಂತರ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಕೃಷ್ಣ ಅವರು ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರಹಳ್ಳಿ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ರಾತ್ರಿ 9.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೃಷ್ಣ ಹಾಗೂ ಪ್ರೇಮಾ ದಂಪತಿಯ ಪುತ್ರ ಪಾರ್ಥ ಎಂಬುವರು ಕುಮಾರಸ್ವಾಮಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪಾರ್ಟ್‌ಮೆಂಟ್ ಬಳಿಯ ಫುಟ್‌ಪಾತ್ ಮೇಲೆ ವಾಕಿಂಗ್ ಮಾಡುವಾಗ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೃಷ್ಣ ಅವರ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಕೃಷ್ಣ ಅವರ ಕೈ, ಕಾಲು ಹಾಗೂ ಬೆನ್ನಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮೃತ ಪ್ರೇಮಾ ಅವರ ಶವವನ್ನು ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಯಾವ್ಯಾವ ಕೇಸ್ ದಾಖಲು
ನಟ ನಾಗಭೂಷಣ್ ವಿರುದ್ಧ ಐಪಿಸಿ 279 , 337 ಹಾಗೂ 304A ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯದಿಂದ ಕಾರು ಚಾಲನೆ ಹಾಗೂ ಅತಿ ವೇಗವಾಗಿ ಫುಟ್‌ಪಾತ್ ಮೇಲೆ ಚಲಾಯಿಸದ್ದಕ್ಕೆ ಐಪಿಸಿ 279 ಹಾಕಲಾಗಿದೆ. 337 ಜೀವಕ್ಕೆ ಹಾನಿ ಹಾಗೂ 304 A ಅಡಿ ಅಪಘಾತ ಪ್ರಕರಣವನ್ನು ದಾಖಲು ಮಾಡಲಾಗಿದೆ.
ನಟ ನಾಗಭೂಷಣ್‌ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲ್ಲ. ಇದು ಹಿಟ್ ಆ್ಯಂಡ್ ರನ್ ಕೇಸ್ ಅಲ್ಲ, ಇದೊಂದು ಅಪಘಾತದ ಪ್ರಕರಣವಾಗಿದೆ. ಹೀಗಾಗಿ ಠಾಣಾ ಜಾಮೀನು ಕೊಟ್ಟಿದ್ದೇವೆ ಎಂದು ಸಂಚಾರಿ ದಕ್ಷಿಣ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ