Site icon Vistara News

ಗೌರಿಯನ್ನು ಕೊಲ್ಲಿಸಿದವರು ದೇಶ ಆಳುತ್ತಿದ್ದಾರೆ ಎಂದು ನಟ ಪ್ರಕಾಶ್‌ ರಾಜ್ ಆಕ್ರೋಶ

ಪ್ರಕಾಶ್‌ ರಾಜ್

ಬೆಂಗಳೂರು: ಗೌರಿ ಲಂಕೇಶ್‌ ಅವರನ್ನು ಕೊಂದವರು ಜೈಲಿನಲ್ಲಿದ್ದಾರೆ. ಗೌರಿ ಸಾವಿನಿಂದ ನೊಂದವರು ಇಲ್ಲಿದ್ದೇವೆ, ಕೊಲ್ಲಿಸಿದವರು ರಾಜ್ಯ ಹಾಗೂ ದೇಶ ಆಳುತ್ತಿದ್ದಾರೆ ಎಂದು ನಟ ಪ್ರಕಾಶ್‌ ಹೇಳಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯಾಗಿ ಐದು ವರ್ಷವಾದ ಹಿನ್ನೆಲೆಯಲ್ಲಿ ನಗರದದ ಪ್ಯಾಲೇಸ್ ರಸ್ತೆಯಲ್ಲಿರುವ ಸ್ಕೌಟ್ಸ್ ಹಾಗು ಗೈಡ್ಸ್ ಸಭಾಂಗಣದಲ್ಲಿ ಗೌರಿ ಮೆಮೋರಿಯಲ್‌ ಟ್ರಸ್ಟ್‌ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗೌರಿ ನೆನಪು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೋಧ್ರಾ ಹಿಂಸಾಚಾರ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರದ ವೈಖರಿ ನೀವು ರೇಪ್ ಮಾಡಿ, ನಾವು ನಿಮ್ಮನ್ನು ಕಾಪಾಡುತ್ತೇವೆ ಎನ್ನುವಂತಿವೆ ಟೀಕಿಸಿದರು.

ಆರೆಸ್ಸೆಸ್‌ ಪ್ರಾಬಲ್ಯಕ್ಕೆ ನಮ್ಮ ಕಿತ್ತಾಟ ಕಾರಣ

ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ 2 ತಿಂಗಳ ಜೈಲು ವಾಸದಿಂದ ಹೊರಬಂದು ಗೌರಿ ಹಾಗೂ ಅವರ ಸಂಬಂಧದ ಬಗ್ಗೆ ಮಾತಾಡಿದ್ದಾರೆ. ಗೌರಿ ಹತ್ಯೆಯ ನಂತರ ನಾನೂ ಧ್ವನಿಯಾದೆ ಎಂದ ಅವರು, ಬಿಜೆಪಿ ಆರ್‌ಎಸ್‌ಎಸ್ ಪ್ರಾಬಲ್ಯ ಸಾಧಿಸಲು ನಮ್ಮ ನಿಮ್ಮೊಳಗಿನ ಕಿತ್ತಾಟವೇ ಕಾರಣ. ಗೌರಿಯ ಅಂತ್ಯಕ್ರಿಯೆ ಮಾಡಿದಾಗ ಗೌರಿಯನ್ನು ಹೂಳುತ್ತಿಲ್ಲ, ಗೌರಿಯನ್ನು ಬಿತ್ತುತ್ತಿದ್ದೇವೆ ಎಂದು ಹೇಳಿದ್ದ ಮಾತನ್ನು ಸ್ಮರಸಿಕೊಂಡ ಅವರು ಗೌರಿ ನೆನಪು, ಆದರ್ಶಗಳು ಶಾಶ್ವತ ಎಂದು ಹೇಳಿದರು.

ಖ್ಯಾತ ಬರಹಗಾರ್ತಿ ಅರುಂಧತಿ ರಾಯ್ ಮಾತನಾಡಿ, 3 ದಿನಗಳ ಹಿಂದೆ ನನ್ನ ತಾಯಿ ಅಂತ್ಯಕ್ರಿಯೆ ಮಾಡಿ ಬಂದಿದ್ದೇನೆ. ಇಲ್ಲಿಗೆ ಬರದಿದ್ದರೆ ನನ್ನ ತಾಯಿಯ ಆತ್ಮಕ್ಕೆ ಶಾಂತಿ ಸಿಗುತ್ತಿರಲಿಲ್ಲ. ನಾನು ಏನೇ ಬರೆದರೂ ಗೌರಿ ಕರೆ ಮಾಡಿ ನಾನೇ ಅನುವಾದ ಮಾಡುತ್ತೇನೆ ಎನ್ನುತ್ತಿದ್ದರು. ಈ ಸರ್ಕಾರ ನಮಗೆ ಏನು ಸಂದೇಶ‌ ನೀಡುತ್ತಿದೆ ಎಂಬುವುದು ಅರ್ಥವಾಗುತ್ತಿಲ್ಲ. ತೀಸ್ತಾ ಜೈಲಿನಲ್ಲಿದ್ದಾಗ ಗುಜರಾತ್ ಜೈಲಿನ ಬಗ್ಗೆ ಬರೆದು ಗಮನ ಸೆಳೆದಿದ್ದೆ ಎಂದು ಹೇಳಿದರು.

ಗೌರಿ ಮೆಮೋರಿಯಲ್‌ ಟ್ರಸ್ಟ್‌ ವತಿಯಿಂದ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸೋಮವಾರ ಗೌರಿ ಲಂಕೇಶ್‌ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಮಾಧ್ಯಮಗಳನ್ನು ನೋಡಲೂ ಮನಸ್ಸಿಲ್ಲ

ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿ, ಇತ್ತೀಚೆಗೆ ಸಭಾಂಗಣ ಬುಕ್ ಮಾಡಲು ಫೋನ್ ಮಾಡಿದ್ದೆ. ಜನ ಬರುತ್ತಾರೋ ಇಲ್ಲವೋ ಎಂಬ ಭಯ ಇತ್ತು. ಗೌರಿಗೋಸ್ಕರ ಅಪಾರ ಪ್ರಮಾಣದ ಜನ ಸೇರಿರುವುದು ಖುಷಿ ಆಗುತ್ತದೆ. ಗೌರಿ ಮೃತಪಟ್ಟು ಇಂದಿಗೆ 5‌ ವರ್ಷ ಕಳೆದಿದೆ. ಪ್ರತಿ ಸಲ ಈ ರೀತಿ ಕಾರ್ಯಕ್ರಮ, ಪ್ರತಿಭಟನೆ ಆದಾಗ, ಲಂಕೇಶ್ ಹಾಗೂ ಗೌರಿ ಇದ್ದಿದ್ದರೆ ಏನು ಹೇಳುತ್ತಿದ್ದರು ಎಂದು ಎನಿಸುತ್ತದೆ. ಶಿವಮೊಗ್ಗ ಮಂಗಳೂರಿನಂತೆ ಆಗುತ್ತಿದೆ. ಮಾಧ್ಯಮಗಳನ್ನು ನೋಡಲೂ ಮನಸ್ಸಿಲ್ಲ, 2 ವರ್ಷದಿಂದ ಮಾಧ್ಯಮಗಳನ್ನು ನೋಡುವುದೇ ಬಿಟ್ಟಿದ್ದೇನೆ ಎಂದರು.

ಗೌರಿ ಮೆಮೋರಿಯಲ್ ಟ್ರಸ್ಟ್‌ನ ದೀಪು ಮಾತನಾಡಿ, ಗೌರಿಗೆ ಎಂದಿಗೂ ಸಾವಿಲ್ಲ, ಅವರ ಆಶಯ ಜೀವಂತವಾಗಿದೆ, ಆಕೆ ಇನ್ನೂ ಜೀವಂತವಾಗಿದ್ದಾಳೆ. ಗೌರಿಗೆ ಜೀವ ಬೆದರಿಕೆ ಇದ್ದಾಗಲೂ ಪೊಲೀಸರ ರಕ್ಷಣೆ ಬೇಡ ಎನ್ನುತ್ತಿದ್ದರು. ಆದರೆ ಈಗ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ನಾವಿದ್ದೇವೆ. ರಾಷ್ಟ್ರ ರಾಜಕಾರಣ ಹಾಗೂ ಮೋದಿ ಬಗ್ಗೆ ಮಾತಾಡಿದರೆ ಕ್ರಮ ಜರುಗಿಸಲಾಗುತ್ತದೆ. ಇದು ಭಿನ್ನವಾದಂತಹ ಒಂದು ಯುಗದಂತಿದೆ. ಸರ್ಕಾರದ ವಿರುದ್ಧ ಮಾತನಾಡಿದರೆ ನಮ್ಮನ್ನು ಸಂಶಯದಿಂದ ನೋಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಪ್ರಕಾಶ್ ರಾಜ್, ಅರುಂಧತಿ‌ ರಾಯ್ ಆಗಮಿಸುವುದರಿಂದ ಮುತ್ತಿಗೆ ಆಗುತ್ತದೆ ಎಂದು ಪೊಲೀಸರು ಬಂದಿದ್ದಾರೆ. ಇದನ್ನು ಡೆಮಾಕ್ರಸಿ‌ ಎನ್ನುತ್ತಾರಾ? ಸರ್ಕಾರದ ವಿರುದ್ಧ ಮಾತನಾಡುವವರಿಗೆ ರಕ್ಷಣೆಯಿಲ್ಲ. 1990ರ ದಶಕದಲ್ಲಿ‌ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಏನಾದರೂ ತಿಳಿಸಬಹುದಿತ್ತು. ಆದರೆ ಈಗ ಅದೆಲ್ಲ ಆಗುವುದಿಲ್ಲ. ಪಠ್ಯ ಪರಿಷ್ಕರಣೆ ವಿರೋಧಿಸಿ ಪ್ರತಿಭಟನೆಗಳಾಗಿ ಯಾವುದೇ ಪ್ರಯೋಜನಗಳಾಗಲಿಲ್ಲ. ಈ ಹಿಂದೆ ಸತ್ಯ ಮಾತಾಡಿದಕ್ಕೆ ಜಿಗ್ನೇಶ್, ಕನ್ಹಯ್ಯ ಜೈಲಿಗೆ ಹೋದರು ಎಂದು ಸ್ಮರಿಸಿದರು.

ಇದನ್ನೂ ಓದಿ | ದಿಲ್ಲಿಯಲ್ಲಿ ಕುಮಾರಸ್ವಾಮಿ-ನಿತೀಶ್‌ ಕುಮಾರ್‌ ಭೇಟಿ: ಮತ್ತೆ ಚಿಗುರಿತು ಜನತಾ ಪರಿವಾರ ಒಗ್ಗೂಡಿಸುವ ಕನಸು

Exit mobile version