ಶಿವಮೊಗ್ಗ: ನಟ ಪ್ರಕಾಶ್ ರಾಜ್ ಭೇಟಿ ಕೊಟ್ಟಿದ್ದ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗೋಮೂತ್ರ, ನೀರು ಹಾಕಿ ಶುದ್ಧೀಕರಣ ಮಾಡಿರುವುದು ಭದ್ರಾವತಿಯಲ್ಲಿ ನಡೆದಿದೆ. ಕಾರ್ಯಕ್ರಮಕ್ಕೂ ಮುನ್ನಾ ನಟ ಪ್ರಕಾಶ್ ರಾಜ್ ಆಗಮನ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು, ಬಳಿಕ ನಟ ಓಡಾಡಿದ್ದ ಜಾಗವನ್ನು ಗೋಮೂತ್ರ, ನೀರಿನ ಮೂಲಕ ಶುದ್ಧೀಕರಣ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ಭದ್ರಾವತಿಯ ಸರ್ ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ರಂಗಭೂಮಿ, ಸಿನಿಮಾ ಮತ್ತು ಸಮಾಜ ಎಂಬ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಭಾಗಿಯಾಗಿದ್ದರು. ಹೀಗಾಗಿ ನಟನ ಆಗಮನ ವಿರೋಧಿಸಿ ವಿದ್ಯಾರ್ಥಿಗಳು ಗೋ ಮೂತ್ರ, ನೀರು ಹಾಕಿ ಶುದ್ಧೀಕರಣ ಮಾಡಿದ್ದಾರೆ.
ಇದನ್ನೂ ಓದಿ | CT Ravi : ಡಿಕೆಶಿ ಗುರಿ ಇರುವುದು ಬೆಂಗಳೂರು ಅಭಿವೃದ್ಧಿಯಲ್ಲ, ತಮ್ಮ ರಿಯಲ್ ಎಸ್ಟೇಟ್ ಅಭಿವೃದ್ಧಿ ಎಂದ ಸಿ.ಟಿ ರವಿ
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ಹೊರಗಿಟ್ಟು ಕಾರ್ಯಕ್ರಮ ಮಾಡಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್ ಸಾಥ್ ನೀಡಿದರು.
ತುಕ್ಡೆ ಗ್ಯಾಂಗ್ ನಾಯಕ ಪ್ರಕಾಶ್ ರೈಗೆ ಧಿಕ್ಕಾರ ಎಂದು ಘೋಷಣೆ ಕೂಗಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು. ಪ್ರಕಾಶ್ ರೈ ಅವರಿಂದ ವಿದ್ಯಾರ್ಥಿಗಳು ಕಲಿಯುವುದಾದರೂ ಏನಿದೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Chaluvarayaswamy: ತಾವೇ ರಾಜ್ಯಪಾಲರಿಗೆ ಪತ್ರ ಕಳುಹಿಸಿದ್ದು ಎಂದು ಎಚ್‌ಡಿಕೆ ಒಪ್ಪಿಕೊಳ್ಳಲಿ: ಚಲುವರಾಯಸ್ವಾಮಿ
ನಾನು ಲೆಫ್ಟಿಸ್ಟ್, ರೈಟಿಸ್ಟ್, ಸೆಂಟರಿಸ್ಟ್ ಅಲ್ಲ… ಮನುಷ್ಯ: ಪ್ರಕಾಶ್ ರಾಜ್
ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರನ್ನು ಪ್ರೀತಿಸಬೇಕು. ಭಿನ್ನಾಭಿಪ್ರಾಯಗಳು ಇರಬೇಕು, ಅದನ್ನು ನಾವು ಎದುರಿಸಲೇಬೇಕು. ಕಲಾವಿದನಾಗಿರುವುದು ಕೇವಲ ನನ್ನ ಪ್ರತಿಭೆಯಿಂದಲ್ಲ, ನನ್ನನ್ನು ಪ್ರೀತಿಸಿದ ಪ್ರೇಕ್ಷಕರು ಹಾಗೂ ನಿರ್ದೇಶಕರಿಂದ ನಾನು ಕಲಾವಿದನಾಗಿದ್ದೇನೆ. ನಾನು ಲೆಫ್ಟಿಸ್ಟ್, ರೈಟಿಸ್ಟ್, ಸೆಂಟರಿಷ್ಟ್ ಅಲ್ಲ. ನಾನು ಕೇವಲ ಮನುಷ್ಯ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ಪತ್ರಿಕಾ ಸಂವಾದಲ್ಲಿ ಮಾತನಾಡಿದ ಅವರು, ಮಾನವ ಜೀವನ ತುಳಿಯುವ ಶಕ್ತಿಗಳ ವಿರುದ್ಧ ನಮ್ಮ ಹೋರಾಟ ಇದೆ. ಯಾವುದೇ ವಿಷಯದ ಬಗ್ಗೆ ಮಾತುಕತೆ, ಸಂವಾದ ಅಗತ್ಯವಿದೆ, ಜಗಳವಲ್ಲ. ಮನುಷ್ಯನ ಮೇಲಾದ ಗಾಯ ವಾಸಿಯಾಗುತ್ತದೆ, ಅದೇ ದೇಶ, ಸಮಾಜಕ್ಕೆ ಆದ ಗಾಯ ಹಾಗೆ ಬಿಟ್ಟರೆ ಹೆಚ್ಚುತ್ತದೆ ಎಂದರು.
ನಿರ್ದಿಗಂತ ಒಂದು ತಂಡವಲ್ಲ, ರಂಗಭೂಮಿಯ ಕಲಿಕೆಯ ಭಾಗವಾಗಿ ಸ್ಥಾಪಿಸಲಾಗಿದೆ. ಇಂದಿನ ಯುವ ಪೀಳಿಗೆಗೆ ರಂಗಭೂಮಿಯ ಕಲಿಕೆ, ನಟನೆಯನ್ನು ಕಲಿಸಲು ನಿರ್ದಿಗಂತ ಇದೆ. ಸಮಾಜದಲ್ಲಿ ಜಾತಿ, ಧರ್ಮ, ಕುಲ, ಭಿನ್ನಾಭಿಪ್ರಾಯ ಎಲ್ಲವೂ ಮರೆತು ಒಂದಾಗಿ ಪ್ರತಿಭೆಗೆ ಅವಕಾಶ ಸಿಗಬೇಕಿದೆ. ರಂಗಭೂಮಿಯ ಅನುಭವಗಳನ್ನು ಹಂಚಿಕೊಳ್ಳಲು ಇದೊಂದು ವೇದಿಕೆಯಾಗಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಠ್ಯ ಪುಸ್ತಕದಲ್ಲಿ ಸಂಗತಿಗಳನ್ನು ತಿರುಚಿದರೆ ಅದು ತಪ್ಪಾಗುತ್ತದೆ. ಯಾವುದೇ ಸರ್ಕಾರವಿರಲಿ ಪಠ್ಯಗಳಲ್ಲಿ ವ್ಯತ್ಯಾಸಗಳನ್ನು ಮಾಡಿದರೆ ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಪಠ್ಯ ಪುಸ್ತಕಗಳಲ್ಲಿ ಒಳ್ಳೆಯ ವಿಷಯಗಳು ಇರಬೇಕು. ಇಡಿ ಪಠ್ಯಗಳಲ್ಲಿ ಕೇಸರಿ ಬಣ್ಣ ಬಳಿದರೆ ಅದು ತಪ್ಪಾಗುತ್ತದೆ. ನಾನು ಯಾವುದೇ ಧರ್ಮದ ವಿರುದ್ಧ ಮಾತಾಡಿಯೇ ಇಲ್ಲ. ರಾಜಕೀಯ ಪಕ್ಷಗಳ ಕೆಲಸ, ಶಾಲೆಗಳನ್ನು ಮಾಡುವುದು ಉದ್ಯೋಗ ಕೊಡುವುದು ಎಂದರು.
ಮುಸ್ಲಿಂ ಕಂಡಕ್ಟರ್ ಟೋಪಿ ಧರಿಸಿ ಬಂದರೆ ಮಹಿಳೆ ಬೈಯುತ್ತಾಳೆ, ಇದು ಆಗಬಾರದು. ಸಮಾಜದಲ್ಲಿ ಅಯ್ಯಪ್ಪ ಮಾಲೆ ಧರಿಸಿರುವವ, ಆಂಜನೇಯನ ಭಕ್ತನು ಎಲ್ಲರೂ ಸಮಾನರು. ಅವರವರ ನಂಬಿಕೆಯನ್ನು ತಡೆಯಲು ಆಗಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | Tweet war : ಸಿದ್ದರಾಮಯ್ಯ ನಕಲಿ ಸಂವಿಧಾನ ತಜ್ಞ ಎಂದ HDK, ಅವರಿಗೆ ಮಾನಸಿಕ ಸ್ಥಿಮಿತತೆ ಇಲ್ಲ ಎಂದ ಸಿಎಂ
ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿ, ಬಡವರಿಗೆ ಕೊಡುವ ವಿಚಾರದಲ್ಲಿ ಯಾಕೆ ಬೇಡ ಎನ್ನಬೇಕು. ಬಡವರ ತೆರಿಗೆ ಹಣವನ್ನು ಅವರಿಗೆ ವಿನಿಯೋಗಿಸಲಾಗಿದೆ. ಪ್ರಧಾನಿಯವರ ಯೋಜನೆಗಳಿಂದಲೇ ದೇಶ ದಿವಾಳಿಯಾಗಿದೆ. ನಾವು ಮತ ಹಾಕಿದ್ದರಿಂದ ನೀವು ಪ್ರಧಾನಿ. 5 ವರ್ಷ ನಿಮನ್ನು ಪ್ರಶ್ನೆ ಮಾಡುವ ಅಧಿಕಾರ ನಮಗೆ ಇದೆ ಎಂದ ಅವರು, ಉಚಿತ ಯೋಜನೆಗಳಿಗೆ ನನ್ನ ಬೆಂಬಲ ಇದೆ. ಆದರೆ, ಅವು ಫಲಾನುಭವಿಗಳಿಗೆ ತಲುಪಿದೆಯಾ ಎಂದು ನೋಡಬೇಕು. ಸಿದ್ಧವಾಗದಿರುವ ರಸ್ತೆ, ಏರ್‌ಪೋರ್ಟ್ ಉದ್ಘಾಟನೆ ಮಾಡಿವುದು ಸರಿಯಲ್ಲ ಎಂದು ಟೀಕಿಸಿದರು.
ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಧರ್ಮಾಧಿಕಾರಿ ವಿರುದ್ಧ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೇ ತಪ್ಪು ಮಾಡಿದರೂ ಕ್ರಮ ಆಗಬೇಕು, ಧರ್ಮದ ಹೆಸರಿನಲ್ಲಿ ಯಾರು ದ್ವೇಷ ಮಾಡಬಾರದು. ಧರ್ಮಾಧಿಕಾರಿಗಳನ್ನು ಮಂಪರು ಪರೀಕ್ಷೆ ಮಾಡುವ ವಿಚಾರ ಪ್ರಕರಣದ ತನಿಖಾಧಿಕಾರಿಗೆ ಬಿಟ್ಟದ್ದು ಎಂದು ತಿಳಿಸಿದರು.