ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ಕನ್ನಡದ ಹಿರಿಯ ನಟಿ ಲೀಲಾವತಿ (Actress Leelavathi) ಅವರ ನೆಲಮಂಗಲ ತಾಲೂಕಿನಲ್ಲಿರುವ ಸೋಲದೇವನಹಳ್ಳಿಯ ನಿವಾಸಕ್ಕೆ ಇಂದು (ನವೆಂಬರ್ 28) ನಟ ಶಿವ ರಾಜ್‌ಕುಮಾರ್ (Shiva Rajkumar) ಹಾಗೂ ಅವರ ಪತ್ನಿ ಗೀತಾ ಶಿವ ರಾಜ್‌ಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
‘‘ಲೀಲಾವತಿ ಅವರಿಗೆ ಮೊದಲಿನಿಂದಲೂ ನಮ್ಮ ಬಗ್ಗೆ ಅಪಾರ ಪ್ರೀತಿ. ನಾವು ಅವರನ್ನು ಯಾವಾಗ ಕಂಡರೂ ಅದೇ ಆತ್ಮೀಯತೆ, ಅದೇ ಪ್ರೀತಿಯೊಂದ ಮಾತನಾಡಿಸುತ್ತಿದ್ದರು. ಅವರ ಆ ಪ್ರೀತಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈಗ ವಿನೋದ್ ರಾಜ್ ಅವರನ್ನು ನೋಡಿದರೆ ಅವರ ತಾಯಿಯನ್ನೇ ನೋಡಿದಂತೆ ಆಗುತ್ತದೆ. ಲೀಲಾವತಿ ಅವರ ಆರೋಗ್ಯ ಕ್ಷೀಣಿಸಿರುವ ಬಗ್ಗೆ ಬೇಜಾರಾಗುತ್ತದೆ. ಆದರೆ ಅವರು ಇನ್ನೂ ನಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ ಇದೆ. ಅವರಿಗೆ ದೇವರ ಆಶೀರ್ವಾದವಿದೆ. ಎಲ್ಲದಕ್ಕಿಂತಲೂ ಹೆಚ್ಚಿನದಾಗಿ ಅವರ ಮಗನ ಪ್ರೀತಿ ಇದೆ’’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
‘ʼಅಮ್ಮ ನನ್ನ ಧ್ವನಿ ಕಂಡು ಹಿಡಿದರು. ಈ ವಯಸ್ಸಿನಲ್ಲಿಯೂ ಅವರು ನೋವನ್ನು ಸಹಿಸಿಕೊಂಡು ಇರುವ ಶಕ್ತಿ ಇದೆಯಲ್ಲ ಅದು ಸಾಮಾನ್ಯದ್ದಲ್ಲ. ಯೋಗ ಪುರುಷರು ಅನ್ನುತ್ತಾರಲ್ಲ ಹಾಗೆ. ಈಗಲೂ ಅವರು ಸ್ಟ್ರಾಂಗ್ ಆಗಿದ್ದಾರೆ. ಒಳ್ಳೆಯ ಮನಸ್ಸಿರುವವರು, ಒಳ್ಳೆಯ ವ್ಯಕ್ತಿತ್ವ ಉಳ್ಳವರು. ನಾವು ಅವರನ್ನು ಇಷ್ಟೊಂದು ಪ್ರೀತಿಸಲು ಅದೇ ಕಾರಣ’ʼ ಎಂದು ಶಿವಣ್ಣ ಭಾವುಕರಾದರು. ಜತೆಗೆ ವಿನೋದ್ ರಾಜ್ ಕೈ ಹಿಡಿದು ಸಾಂತ್ವಾನ ಹೇಳಿದರು.
ʼʼನೋವು ಎಲ್ಲರಿಗೂ ಆಗುತ್ತೆ. ನಾವು ತಾಳಿಕೊಂಡಿಲ್ಲವೇ ಹಾಗೆಯೇ ನೀವು ಧೈರ್ಯ ತಂದುಕೊಳ್ಳಿ. ನಿಮ್ಮ ತಾಯಿಯವರಿಗೆ ಮಗ ಚೆನ್ನಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅವರ ಆಸೆಯಂತೆ ನೀವು ಚೆನ್ನಾಗಿರಬೇಕು’’ ವಿನೋದ್ಎಂ ರಾಜ್ ಅವರ ಕೈ ಹಿಡಿದು ಶಿವರಾಜ್ ಕುಮಾರ್ ಧೈರ್ಯ ತುಂಬಿದರು. ಇಂದು (ನವೆಂಬರ್ 28) ಲೀಲಾವತಿ ಅವರ ಹೆಸರಲ್ಲಿ ಪಶು ಆಸ್ಪತ್ರೆ ಉದ್ಘಾಟನೆ ಆಗುತ್ತಿರುವ ಬಗ್ಗೆಯೂ ಶಿವರಾಜ್ ಕುಮಾರ್ ದಂಪತಿ ಸಂತಸ ವ್ಯಕ್ತಪಡಿಸಿದರು.
ಇತ್ತೀಚೆಗೆ ಲೀಲಾವತಿ ಅವರ ಮನೆಗೆ ವಿವಿಧ ಕಲಾವಿದರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಅರ್ಜುನ್ ಸರ್ಜಾ, ದರ್ಶನ್, ಅಭಿಷೇಕ್ ಅಂಬರೀಶ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರು ಆಗಮಿಸಿ ಲೀಲಾವ ಅವರನ್ನು ಮಾತನಾಡಿಸಿದ್ದಾರೆ.
ಇದನ್ನೂ ಓದಿ: Actor Darshan: ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ದರ್ಶನ್
ಲೀಲಾವತಿ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂನ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಪೈಕಿ 400ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಎನ್ನುವುದು ವಿಶೇಷ. ಲೀಲಾವತಿ ಮತ್ತು ಡಾ.ರಾಜ್ ಕುಮಾರ್ ಜೋಡಿ ಬಹಳ ಜನಪ್ರಿಯವಾಗಿತ್ತು. ಬಹಳಷ್ಟು ಚಿತ್ರದಲ್ಲಿ ಇವರಿಬ್ಬರು ಜತೆಯಾಗಿ ನಟಿಸಿದ್ದರು. ವತಿ ಅವರಿಗೆ ಲೀಲಾ 1999-2000 ಸಾಲಿನಲ್ಲಿ ಕರ್ನಾಟಕ ಚಲನಚಿತ್ರರಂಗದ ಜೀವಮಾನದ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಡಾ.ರಾಜ್‌ಕುಮಾರ್ ಪ್ರಶಸ್ತಿ ನೀಡಲಾಗಿತ್ತು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ