ಬೆಂಗಳೂರು: ನಟಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ನೆಲಮಂಗಲದಲ್ಲಿ ಶನಿವಾರ ಮುಂಜಾನೆ 5 ರಿಂದ 10 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸಂಜೆ ಸೋಲದೇವನಹಳ್ಳಿಯ ತೋಟದ ಮನೆ ಸಮೀಪ ಲೀಲಾವತಿ ಅವರ (Actress Leelavathi) ಅಂತ್ಯ ಸಂಸ್ಕಾರ ನೆರವೇರಲಿದೆ.
ಈ ಬಗ್ಗೆ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಮಾಹಿತಿ ನೀಡಿದ್ದು, ಶನಿವಾರ ಮುಂಜಾನೆ 5 ಗಂಟೆಯಿಂದ 10 ಗಂಟೆವರೆಗೆ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ 10.45ರಿಂದ 2 ಗಂಟೆವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರು ರವೀಂದ್ರ ಕಲಾ ಕ್ಷೇತ್ರದಲ್ಲಿಯೇ ಅಂತಿಮ ದರ್ಶನಕ್ಕೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Actress Leelavathi: ನಟಿ ಲೀಲಾವತಿ ನಿಧನಕ್ಕೆ ಮೋದಿ ಸೇರಿ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರ ಸಂತಾಪ
ದೇವರನ್ನು ಎಷ್ಟು ಬೇಡಿಕೊಂಡರೂ ತಾಯಿಯನ್ನು ಮತ್ತೆ ಪಡೆಯಕ್ಕೆ ಆಗಲ್ಲ. ಕಲಿತಿದ್ದೀರಾ, ಕೆಟ್ಟದು ಮಾಡಬೇಡಿ ಎಂದು ಹೇಳಿ ಅಮ್ಮ ಹೋಗಿದ್ದಾರೆ. ಸಣ್ಣಪುಟ್ಟ ಚಿಲ್ಲರೆ ಕಾಸು ಹಂಚುತಿದ್ದರು. ಏನು ಇಲ್ಲದೆ ಬಂದೆವು, ಭಗವಂತ ಈ ಪರಿಸ್ಥಿತಿ ಕೊಟ್ಟಿದ್ದಾರೆ. ಶಿವಣ್ಣ ಬಂದು ಸಮಾಧಾನ ಮಾಡಿದ್ದಾರೆ ಎಂದು ಹೇಳಿದರು.
ಕನ್ನಡದ ಕಲಾಸರಸ್ವತಿ, 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಮೇರುನಟಿ ಶುಕ್ರವಾರ ಸಂಜೆ ನೆಲಮಂಗಲದ ತೋಟದ ಮನೆಯಲ್ಲಿ (Leelavathi No More) ಕೊನೆಯುಸಿರೆಳೆದರು. 86 ವರ್ಷಗಳ ಸುದೀರ್ಘ ಜೀವನದಲ್ಲಿ ಹೋರಾಟದ ಕೆಚ್ಚಿನಿಂದಲೇ ಬದುಕಿನದ ಅವರು ಕೆಲವು ತಿಂಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ನೆಲಮಂಗಲದ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದ ಅವರಿಗೆ ಶುಕ್ರವಾರ ಸಂಜೆ ಆರೋಗ್ಯ ತೀವ್ರವಾಗಿ ಕೈಕೊಟ್ಟಿತು.
ಊರಿಗೊಂದು ಪಶು ಆಸ್ಪತ್ರೆ ಕಟ್ಟಿಸಬೇಕು ಎಂಬ ಕೊನೆಯಾಸೆಯನ್ನು ಇತ್ತೀಚೆಗಷ್ಟೇ ಅವರು ತಮ್ಮ ಮಗ ವಿನೋದ್ ರಾಜ್ ಮೂಲಕ ನೆರವೇರಿಸಿಕೊಂಡಿದ್ದರು.
ಆರು ದಶಕಕ್ಕೂ ಅಧಿಕ ಕಲಾಸೇವೆ
1937ರಲ್ಲಿ ಲೀಲಾವತಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. 1949ರಲ್ಲಿ ನಾಗಕನ್ನಿಕೆ ಸಿನಿಮಾದಲ್ಲಿ ಸಖಿಯ ಪಾತ್ರದ ಮೂಲಕ ಚಂದನವನ ಪ್ರವೇಶಿಸಿದರು. ಅಲ್ಲಿಂದ ಬಳಿಕ ಸುಮಾರು 6 ದಶಕಗಳ ಕಲಾಸೇವೆ ಮಾಡಿದ್ದು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿದ್ದಾರೆ. ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.