ಬೆಂಗಳೂರು: ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶನ ಮಾಡಿರುವ ‘ಟಿಪ್ಪು ನಿಜ ಕನಸುಗಳುʼ (Tipu Nija Kanasugalu) ಕೃತಿ ಮಂಗಳವಾರ ಮರು ಲೋಕಾರ್ಪಣೆಗೊಂಡಿತು. ನಗರದ ಬಸವನಗುಡಿ ಬಳಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಂಗಕರ್ಮಿ ಎನ್.ಎಸ್.ಸೇತುರಾಂ, ಎಸ್.ಆರ್.ಲೀಲಾ, ರೋಹಿತ್ ಚಕ್ರತೀರ್ಥ ಸಮ್ಮುಖದಲ್ಲಿ ಪುಸ್ತಕ ಮರು ಲೋಕಾರ್ಪಣೆ ಮಾಡಲಾಯಿತು.
ಇತ್ತೀಚೆಗೆ ಮೈಸೂರಿನಲ್ಲಿ ಡಾ. ಎಸ್.ಎಲ್. ಭೈರಪ್ಪ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿದ್ದರು. ಲೋಕಾರ್ಪಣೆ ಬಳಿಕ ಮಾತನಾಡಿದ ಕೃತಿಯ ಕರ್ತೃ ಅಡ್ಡಂಡ ಕಾರ್ಯಪ್ಪ ಮಾತನಾಡಿ, ನಮ್ಮ ಭಾಗದಲ್ಲಿ ನಾಯಿಗಳಿಗೆ ಟಿಪ್ಪು ಎಂದು ಹೆಸರಿಡಲಾಗಿದೆ. ನಾಯಿಗಳನ್ನು ಮುಸ್ಲಿಮರು ಮುಟ್ಟುವುದಿಲ್ಲ, ಹೀಗಾಗಿಯೇ ನಾಯಿಗಳಿಗೆ ಟಿಪ್ಪು ಹೆಸರಿಡಲಾಗಿದೆ. ಟಿಪ್ಪುವನ್ನು ಅವಮಾನ ಮಾಡುವುದೇ ಇದರ ಹಿಂದಿನ ಉದ್ದೇಶವಾಗಿತ್ತು ಎಂಬುವುದು ಹಿರಿಯರನ್ನು ಕೇಳಿದಾಗ ತಿಳಿದುಬಂದಿತ್ತು. ಹಾಗೆಯೇ ನಮ್ಮ ಮನೆಯ ನಾಯಿಗೂ ಟಿಪ್ಪು ಹೆಸರಿಡಲಾಗಿದೆ.
2005ರಲ್ಲಿ ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಆರಂಭಿಸಿದ್ದರು. ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರಿಂದ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷವೇ ಮಾಯವಾಯಿತು. ಅಲ್ಲಿಗೆ ಬಿಜೆಪಿ ಗೆಲ್ಲಿಸಲು ಮೋದಿ ಬರಲಿಲ್ಲ, ಸಿದ್ದರಾಮಯ್ಯನ ಟಿಪ್ಪು ಜಯಂತಿಯೇ ಸಾಕಾಯಿತು ಎಂದು ಹೇಳಿದರು.
ವಿಮರ್ಶಕ ಡಾ. ಜಿ.ಬಿ. ಹರೀಶ್ ಮಾತನಾಡಿ, ಇಲ್ಲಿಯವರೆಗೆ ಬಿಂಬಿಸಲಾಗಿದ್ದ ಸುಳ್ಳುಗಳನ್ನು ಹಿಂದೆ ಸರಿಸಿ ಸತ್ಯವನ್ನು ತಿಳಿಸುವತ್ತ ಈ ಕೃತಿ ಬಹುಮುಖ್ಯ ಹೆಜ್ಜೆ ಇಟ್ಟಿದೆ. ಕಾರ್ನಾಡರು ಬರೆದ ಪುಸ್ತಕಕ್ಕೆ ಪುಸ್ತಕದ ಮೂಲಕವೇ ಉತ್ತರ ನೀಡಿರುವುದು ಮತ್ತೂ ಉತ್ತಮ ಸಂಗತಿ. ಇಂತಹ ಕಾರ್ಯಗಳು ಹೆಚ್ಚಾಗಬೇಕು. ನಿಜವಾದ ಇತಿಹಾಸವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಟಿಪ್ಪು ನಿಜ ಕನಸುಗಳು ಕೃತಿಯು ಆರಂಭವಷ್ಟೆ. ಮುಂದೆ ಮತ್ತಷ್ಟು ಹೊರಬರಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | Border Dispute | ಜತ್ ತಾಲೂಕಿನ ಜನ ಕರ್ನಾಟಕ ಸೇರುವ ನಿರ್ಣಯ ಮಾಡಿದ್ದರು: ಮಹಾರಾಷ್ಟ್ರಕ್ಕೆ CM ಬೊಮ್ಮಾಯಿ ಎಚ್ಚರಿಕೆ
ಗಿರೀಶ್ ಕಾರ್ನಾಡ್ ಬರೆದಿದ್ದು ಟಿಪ್ಪು ಸುಲ್ತಾನ್ ಕನಸುಗಳನ್ನಲ್ಲ!
ಕೃತಿ ರಚಿಸಿದ ನನ್ನಲ್ಲೇ ಟಿಪ್ಪು ಬಗ್ಗೆ ಇಷ್ಟು ಆವೇಶ ಇರಬೇಕಾದರೆ, ಟಿಪ್ಪು ಸುಲ್ತಾನ್‌ನಿಂದ ಅಮಾನುಷವಾಗಿ ದೌರ್ಜನ್ಯಕ್ಕೊಳಗಾದ ಕೊಡಗು ಮಂದಿಯ ನೋವು, ಆಕ್ರೋಶ ಎಷ್ಟಿರಬಹುದು ಊಹಿಸಿಕೊಳ್ಳಬಹುದು ಎಂದು ಅಡ್ಡಂಡ ಕಾರ್ಯಪ್ಪ ಹೇಳಿದರು. ಸ್ವಾತಂತ್ರ್ಯದ ಸುವರ್ಣ ಮಹೋತ್ಸವದಲ್ಲಿ ಗಿರೀಶ್ ಕಾರ್ನಾಡ್ ಮತ್ತು ಬಸವಲಿಂಗಯ್ಯ ಸುಳ್ಳು ಹೇಳಿದ್ದಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ನಾನು ಇದೇ ರಂಗಾಯಣಕ್ಕೆ ಬಂದೆ. ನನಗೆ ಅದೇ ಟಿಪ್ಪುವಿನ ನಾಟಕ ಮಾಡಲು ಅವಕಾಶ ಸಿಕ್ಕಿತು. ಗಿರೀಶ್ ಕಾರ್ನಾಡ್‌ಗೆ ನನ್ನ ಮನೆಯಿಂದ 20 ಕಿ.ಮೀ ದೂರದಲ್ಲಿ 80 ಎಕರೆ ತೋಟ ಸಿಕ್ಕಿದೆ. ಆತ ಕೊಡಗಿನ ಅಳಿಯ ಹಾಗೂ ಅರ್ಬನ್ ನಕ್ಸಲ್. ಆತ ಬರೆದಿದ್ದು ಟಿಪ್ಪು ಸುಲ್ತಾನ್ ಕಂಡ ಕನಸುಗಳಲ್ಲ, ಆತನ ಕನಸುಗಳು ಎಂದು ಜರೆದರು.
ಎಷ್ಟೊಂದು ಕೊಡವರ ಹತ್ಯೆಯಾಗಿದೆ. ಮಂಡ್ಯ ಅಯ್ಯಂಗಾರರು ಇಂದಿಗೂ ದೀಪಾವಳಿ ಆಚರಣೆ ಮಾಡುವುದಿಲ್ಲ. ಅದಕ್ಕೆ ಕಾರಣ ಟಿಪ್ಪು ಎಂದ ಅವರು, ಟಿಪ್ಪು ನಾಟಕಕ್ಕೆ ಮಂಡ್ಯ ಅಯ್ಯಂಗಾರರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಸ್ಥಾನ ಕೆಡವಿ ಜಾಮಿಯಾ ಮಸೀದಿ ಕಟ್ಟಲಾಗಿದೆ. ಈ ಕೆಲಸ ಇನ್ಯಾರು ಮಾಡುತ್ತಾರೆ? ತನ್ವೀರ್ ಸೇಠ್ ಮಾಡುತ್ತಾರಾ, ನಾನು ಅವರನ್ನೇ ಕೇಳಿದ್ದೆ, ನಿಮಗೆ ಚಾಕುವಿನಿಂದ ಇರಿದಿದ್ದು ಹಿಂದುಗಳಲ್ಲ, ಪಿಎಫ್‌ಐನವರು. ಪಿಎಫ್‌ಐನವರು ಯಾರು ಗೊತ್ತೇ, ಡಿ.ಕೆ ಶಿವಕುಮಾರ್ ಸಹೋದರರರು ಮತ್ತು ಸಿದ್ದರಾಮಯ್ಯನ ಆಪ್ತ ಬಂಧುಗಳು ಎಂದು ಕಿಡಿಕಾರಿದರು.
ಈ ಹಿಂದೆ ಕೇಂದ್ರದಲ್ಲಿ ರೆಹಮಾನ್ ಖಾನ್ ಕಾಂಗ್ರೆಸ್‌ನಿಂದ ಸಚಿವರಾಗಿದ್ದರು. ಅವರು ಮೈಸೂರಿಗೆ ಬಂದಾಗ ಮೈಸೂರಿನಲ್ಲಿ ಮುಸ್ಲಿಮರಿಗಾಗಿ ಟಿಪ್ಪು ಹೆಸರಿನಲ್ಲಿ ವಿವಿ ಆರಂಭಿಸುವುದಾಗಿ ಹೇಳಿದ್ದರು. ಅದು ದೊಡ್ಡ ಕಿಡಿ ಹಚ್ಚಿಸಿತ್ತು, ಕೊಡವರು, ನಿವೃತ್ತ ಸೈನಿಕರು ಸಭೆ ನಡೆಸಿ ಆಕ್ರೋಶ ಹೊರಹಾಕಿದ್ದೆವು. ನಾನು ಆಗ ಟಿಪ್ಪುವಿನ ಬಗ್ಗೆ ಅಷ್ಟು ಓದಿರಲಿಲ್ಲ. ನಂತರ ಆತನಕ ಕ್ರೌರ್ಯ ಅರ್ಥವಾಯಿತು,” ಎಂದು ತಿಳಿಸಿದರು.
ಚಿಂತಕ ರೋಹಿತ್ ಚಕ್ರತೀರ್ಥ ಮಾತನಾಡಿ, ಟಿಪ್ಪುವಿನ ನಿಜ ಬಣ್ಣವನ್ನು ತೋರಿಸಲು ಈ ಪುಸ್ತಕವನ್ನು ಕಾರ್ಯಪ್ಪ ಅವರು ಬರೆದಿದ್ದಾರೆ. ಇದು ಅತ್ಯಂತ ಯಶಸ್ಸು ಕಂಡ ನಾಟಕ. ಮುಂದಿನ ದಿನಗಳಲ್ಲಿ ನೆಹರು ಬಗ್ಗೆಯೂ ಪುಸ್ತಕ ಬರೆಯಬೇಕು ಎಂದು ಕೋರಿದರು.
ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಹಿಂದು-ಮುಸ್ಲಿಂ ಏಕತೆಯೇ ಮೋದಿ ಅಪೇಕ್ಷೆ: ಮುಸ್ಲಿಮರು BJP ಬೆಂಬಲಿಸಿ ಎಂದ ಯಡಿಯೂರಪ್ಪ