Site icon Vistara News

Free Bus Service: ಧರ್ಮಸ್ಥಳದಿಂದ ಕುಕ್ಕೆಗೆ ಲಗ್ಗೆಯಿಟ್ಟ ಮಹಿಳೆಯರು; ಹೆಚ್ಚುವರಿ ಬಸ್ ವ್ಯವಸ್ಥೆ

Women passengers in Dharmasthala

#image_title

ಮಂಗಳೂರು: ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ (Free Bus Service) ಸೌಲಭ್ಯದ ಪರಿಣಾಮ ರಾಜ್ಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಲಗ್ಗೆ ಇಡುತ್ತಿದ್ದಾರೆ. ಅದೇ ರೀತಿ ವಾರಂತ್ಯದ ಹಿನ್ನೆಲೆಯಲ್ಲಿ ಶನಿವಾರ ಧರ್ಮಸ್ಥಳ ಕ್ಷೇತ್ರಕ್ಕೆ ಸಾವಿರಾರು ಮಹಿಳೆಯರು ಆಗಮಿಸಿದ್ದರು. ಅಲ್ಲಿಂದ ಅವರೆಲ್ಲಾ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಲು ಮುಂದಾಗಿದ್ದರಿಂದ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.

ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಭಾಗ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಕುಟುಂಬ ಸಮೇತ ಹಾಗೂ ಸ್ನೇಹಿತರ ಬಳಗ ಕಟ್ಟಿಕೊಂಡು ಸಾಗರೋಪಾದಿಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ. ಇದರಿಂದ ಧರ್ಮಸ್ಥಳ ಹಾಗೂ ಕುಕ್ಕೆ ಕ್ಷೇತ್ರಗಳು ಸೇರಿ ಇಲ್ಲಿಗೆ ಬರುವ ಸಾರಿಗೆ ಬಸ್‌ಗಳೂ ತುಂಬಿ ತುಳುಕುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರು ಸಾಮಾನ್ಯವಾಗಿ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುತ್ತಾರೆ. ಹೀಗಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಸಾರಿಗೆ ಇಲಾಖೆ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಿದೆ.

ಧರ್ಮಸ್ಥಳ, ಸುಬ್ರಹ್ಮಣ್ಯಗಳಲ್ಲಿ ಕಾಲಿಡಲು ಜಾಗವಿಲ್ಲ!

ಬೆಂಗಳೂರು: ಶಕ್ತಿ ಉಚಿತ ಬಸ್‌ ಪ್ರಯಾಣ ಯೋಜನೆಯ ಪರಿಣಾಮ ವಾರಾಂತ್ಯದಲ್ಲಿ ಪುಣ್ಯಕ್ಷೇತ್ರಗಳಲ್ಲಿ ಕಾಣಿಸುತ್ತಿದೆ. ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಮಹಿಳಾ ಭಕ್ತಾದಿಗಳು ಪುಣ್ಯಕ್ಷೇತ್ರಗಳಿಗೆ ದಾಳಿಯಿಡುತ್ತಿದ್ದು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಗಳಲ್ಲಿ ತುಂಬಿ ತುಳುಕಾಡುತ್ತಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಾಗರೋಪಾದಿಯಲ್ಲಿ ಮಹಿಳಾ ಭಕ್ತರು ಹರಿದು ಬಂದಿದ್ದಾರೆ. ಉಚಿತ ಪ್ರಯಾಣ ಘೋಷಣೆಯ ಬಳಿಕದ ಮೊದಲ ವೀಕೆಂಡ್‌ನಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರದ್ದೇ ಪೂರ್ತಿ ರಶ್ ಕಾಣಬರುತ್ತಿದೆ. ಧರ್ಮಸ್ಥಳ ಮಹಿಳೆಯರು, ಯುವತಿಯರಿಂದಲೇ ತುಂಬಿಹೋಗಿದ್ದು, ಹೆಚ್ಚಿನವರು ಉತ್ತರ ಕರ್ನಾಟಕ ಭಾಗದಿಂದಲೇ ಬಂದಿದ್ದಾರೆ.

ಫ್ರೀ ಬಸ್ - ಧರ್ಮಸ್ಥಳದಲ್ಲಿ ತುಂಬಿ ತುಳುಕಾಡಿದ ಭಕ್ತರು | Free Bus | Shakti Scheme | Dharmasthala

ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಭಾಗದಿಂದಲೂ ಮಹಿಳಾ ಭಕ್ತರು ಇಲ್ಲಿಗೆ ಧಾವಿಸಿದ್ದು, ಧರ್ಮಸ್ಥಳದ ಎಲ್ಲಿ ನೋಡಿದರಲ್ಲಿ ಸ್ತ್ರೀಯರೇ ಕಾಣಿಸುತ್ತಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದು‌ ಕುಕ್ಕೆ ಸುಬ್ರಹ್ಮಣ್ಯದತ್ತಲೂ ಮಹಿಳಾ ಭಕ್ತರು ತೆರಳುತ್ತಿದ್ದಾರೆ. ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ಸುಗಳಲ್ಲೂ ಮಹಿಳಾ ಭಕ್ತರ ರಶ್ ಕಾಣಬರುತ್ತಿದೆ. ಇಂದು ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆಯಲ್ಲಿಯೂ ಭಕ್ತ ಸಮೂಹ ಹೆಚ್ಚಾಗಿ ಬಂದಿದೆ ಎನ್ನಲಾಗುತ್ತಿದೆ.

ಮೆಜೆಸ್ಟಿಕ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಪ್ರಯಾಣಿಕರ ದಂಡು ಕಂಡುಬರುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಗೆ ಉಚಿತ ಪ್ರಯಾಣ ಬೆಳೆಸುತ್ತಿದ್ದಾರೆ. ಬೆಂಗಳೂರಿನಿಂದ ಶನಿವಾರ ಮುಂಜಾನೆ 10 ಗಂಟೆವರೆಗೆ ಧರ್ಮಸ್ಥಳಕ್ಕೆ 14 ಬಸ್‌ಗಳು ತೆರಳಿದ್ದು, 1,000ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ. 30 ನಿಮಿಷಕ್ಕೊಂದು ಬಸ್ ವ್ಯವಸ್ಥೆ ಧರ್ಮಸ್ಥಳಕ್ಕೆ ಮಾಡಲಾಗಿದೆ. ರಾಜ್ಯದ ವಿವಿಧ ಡಿಪೊಗಳಿಂದ ಧರ್ಮಸ್ಥಳಕ್ಕೆ ಬಸ್‌ ವ್ಯವಸ್ಥೆಯಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಧಾರ್ಮಿಕ ಕ್ಷೇತ್ರ ಸಿಗಂದೂರಿಗೆ ಹೊಗುವವರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ. ಈ ಕಡೆ ತೆರಳುವ ಬಸ್ಸುಗಳು ತುಂಬಿದ್ದು, ಸಿಗಂದೂರಿಗೆ ಹೆಚ್ಚುವರಿ ಬಸ್ ಬಿಡುಗಡೆ ಮಾಡಲು ಬೇಡಿಕೆ ವ್ಯಕ್ತವಾಗಿದೆ. ಹೀಗಾಗಿ ಮೆಜೆಸ್ಟಿಕ್‌ನಿಂದ ಸಿಗಂದೂರಿಗೆ ಪ್ರತ್ಯೇಕ ಬಸ್ ಬಿಡಲಾಗಿದೆ.

ಶೃಂಗೇರಿ, ಹೊರನಾಡು, ಕೊಲ್ಲೂರು ಮುಂತಾದ ಮಲೆನಾಡಿನ ಕ್ಷೇತ್ರಗಳಿಗೆ, ಘಾಟಿ ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಮುಂತಾದ ಬಯಲುಸೀಮೆಯ ಕ್ಷೇತ್ರಗಳಿಗೆ ತೆರಳುವ ಮಹಿಳಾ ಭಕ್ತಾದಿಗಳ ಸಂಖ್ಯೆಯಲ್ಲಿಯೂ ತುಸು ಏರಿಕೆ ಕಂಡುಬಂದಿದೆ.

Exit mobile version