Site icon Vistara News

Bangalore Traffic: ಅಲೋಕ್ ಕುಮಾರ್‌ಗೆ ಬೆಂಗಳೂರು ಟ್ರಾಫಿಕ್‌ ನಿಯಂತ್ರಣ ಹೊಣೆ; ತಪ್ಪೀತೇ ಸಂಚಾರ ದಟ್ಟಣೆ ಕಿರಿಕಿರಿ?

ADGP Alok Kumar IPS

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅತ್ಯಂತ ದೊಡ್ಡ ಸಮಸ್ಯೆಗಳಲ್ಲಿ ಟ್ರಾಫಿಕ್‌ (Bangalore Traffic) ಸಹ ಒಂದು. ಈ ಹಿನ್ನೆಲೆಯಲ್ಲಿ ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರವು ಸಂಚಾರ ಮತ್ತು ರಸ್ತೆ ಸುರಕ್ಷತಾ (Bengaluru traffic and road safety) ವಿಭಾಗಕ್ಕೆ ಎಡಿಜಿಪಿ ಮಟ್ಟದ ಅಧಿಕಾರಿಯಾಗಿದ್ದ ಎಂ.ಎ. ಸಲೀಂ ಅವರನ್ನು ನೇಮಿಸಿತ್ತು. ಈಗ ಸಿದ್ದರಾಮಯ್ಯ ಸರ್ಕಾರ ಸಹ ಈ ಪದ್ಧತಿಯನ್ನೇ ಮುಂದುವರಿಸಿದ್ದು, ಟ್ರಾಫಿಕ್‌ ಆ್ಯಂಡ್ ರೋಡ್‌ ಸೇಫ್ಟಿ ವಿಭಾಗಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ (ADGP Alok Kumar) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇನ್ನಾದರೂ ಬೆಂಗಳೂರಿನ ಸಂಚಾರ ದಟ್ಟಣೆ ತಪ್ಪಲಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಅಲೋಕ್‌ ಕುಮಾರ್ ಅವರು‌ ಈ ಹಿಂದೆ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ) ಸೇವೆ ಸಲ್ಲಿಸುತ್ತಿದ್ದರು. ಈಗ ಆ ಜಾಗಕ್ಕೆ ಅಪರಾಧಗಳು ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಆರ್. ಹಿತೇಂದ್ರ ಅವರನ್ನು ನೇಮಿಸಲಾಗಿದೆ.

ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಉಮೇಶ್ ಕುಮಾರ್ ಅವರನ್ನು ಅಪರಾಧಗಳು ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಕಂಪ್ಯೂಟರ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸೌಮೇಂದು ಮುಖರ್ಜಿ ಅವರನ್ನು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಲೋಕ್‌ ಕುಮಾರ್‌ ಟ್ವೀಟ್‌

ಟ್ವೀಟ್‌ ಮಾಡಿ ಕೃತಜ್ಞತೆ ಸಲ್ಲಿಸಿದ ಅಲೋಕ್‌ ಕುಮಾರ್‌

ಈ ಬಗ್ಗೆ ಟ್ವೀಟ್ ಮಾಡಿರುವ ಅಲೋಕ್ ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದೇನೆ. ಈಗ ನಾನು ನೂತನ ಹುದ್ದೆಯ ಅಧಿಕಾರವನ್ನು ವಹಿಸಿಕೊಂಡಿದ್ದೇನೆ. ಈ ಹಿಂದಿನ ವಿಭಾಗದಲ್ಲಿ 387 ದಿನಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದು, ನನಗೆ ತೃಪ್ತಿ ತಂದಿದೆ. ಈ ಅವಧಿಯಲ್ಲಿ ನಾಗರಿಕರು ನನಗೆ ಬೆಂಬಲ ನೀಡಿದ್ದು, ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಪ್ರತಿ ಹುದ್ದೆಯಲ್ಲಿಯೂ ನನ್ನಿಂದ ಅತ್ಯುತ್ತಮವಾದದ್ದನ್ನೇ ನೀಡಲು ಸದಾ ಶ್ರಮಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

Exit mobile version