Site icon Vistara News

Publishers association Award : ವೈ.ಎ ದಂತಿ, ವಿಶಾಲಾಕ್ಷೀ ಶರ್ಮಗೆ ಕರ್ನಾಟಕ ಪ್ರಕಾಶಕರ ಸಂಘದ ವಾರ್ಷಿಕ ಪ್ರಶಸ್ತಿ, ಏ. 23ರಂದು ಪ್ರದಾನ

Publishers Award

#image_title

ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘವು (Publishers association Award) ವಾರ್ಷಿಕವಾಗಿ ನೀಡುವ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಗೆ ಸಾಗರದ ವೈ.ಎ. ದಂತಿ (ರವೀಂದ್ರ ಪುಸ್ತಕಾಲಯ) ಅವರನ್ನು ಆಯ್ಕೆ ಮಾಡಲಾಗಿದೆ. ನಂಜನಗೂಡು ತಿರುಮಲಾಂಬ ಪ್ರಶಸ್ತಿಗೆ ವಿಶಾಲಾಕ್ಷೀ ಶರ್ಮ (ಭೂಮಿ ಬುಕ್ಸ್) ಅವರನ್ನು ಆರಿಸಲಾಗಿದೆ. ಪ್ರಶಸ್ತಿಗಳು ರೂ. 15,000 ನಗದು ಮತ್ತು ಫಲಕವನ್ನು ಒಳಗೊಂಡಿವೆ. ಏಪ್ರಿಲ್‌ 23ರ ವಿಶ್ವ ಪುಸ್ತಕ ದಿನದಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಪ್ರಕಾಶಕರ ಸಂಘದ ಜಂಟಿ ಕಾರ್ಯದರ್ಶಿ ಸೃಷ್ಟಿ ನಾಗೇಶ್ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪರಿಚಯ

ವೈ.ಎ.ದಂತಿ, ರವೀಂದ್ರ ಪುಸ್ತಕಾಲಯ, ಸಾಗರ

ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರಾದ ವೈ.ಎ. ದಂತಿ ಅವರು 1958ರಲ್ಲಿ ಸಾಗರದ ಕಾರ್ಗಲ್‌ಗೆ ಬಂದು 1965ರಲ್ಲಿ ಸಾಗರದಲ್ಲಿ ‘ರವೀಂದ್ರ ಪುಸ್ತಕಾಲಯ’ವನ್ನು ಆರಂಭಿಸಿದರು. ಸದಬಿರುಚಿಯ ಪುಸ್ತಕ ಪ್ರಕಟಣೆ, ವಿತರಣೆ, ಮಾರಾಟ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕನ್ನಡದ ಸಾಂಸ್ಕೃತಿಕ ಚಹರೆಗಳನ್ನು ವಿಸ್ತರಿಸಿದರು. ಶಿವರಾಮ ಕಾರಂತ, ಎಂ.ಕೆ. ಇಂದಿರಾ, ಹೊಸ್ತೋಟ ಮಂಜುನಾಥ ಭಾಗವತ, ಹಾ.ಮಾ. ನಾಯಕ, ನಾ. ಡಿಸೋಜ, ವೀಣಾ ಬನ್ನಂಜೆ ಮುಂತಾದ ಅನೇಕ ಹಿರಿ ಕಿರಿಯ ಲೇಖಕರ ಕೃತಿಗಳನ್ನು ಪ್ರಕಟಿಸಿದ ಹೆಮ್ಮೆ ರವೀಂದ್ರ ಪುಸ್ತಕಾಲಯದ್ದು. ಇವರ ಸೇವೆಯನ್ನು ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಈಗ ಕರ್ನಾಟಕ ಪ್ರಕಾಶಕರ ಸಂಘವು 2023ನೇ ಸಾಲಿನ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ನೀಡಿದೆ.

ವಿಶಾಲಾಕ್ಷೀ ಶರ್ಮ, ಭೂಮಿ ಬುಕ್ಸ್‌ ಪ್ರಕಾಶನ

ಉತ್ತರ ಕನ್ನಡ ಜಿಲ್ಲೆಯ ಬಕ್ಕೆಮನೆಯಲ್ಲಿ 1953ರ ಅಕ್ಟೋಬರ್‌ 26ರಂದು ಜನಿಸಿದ ವಿಶಾಲಾಕ್ಷಿ ಶರ್ಮ ಅವರು ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಓದು, ಕಾವ್ಯ ರಚನೆ, ಕೃಷಿ, ಅಡುಗೆ, ಹೊಲಿಗೆ ಮುಂತಾದವುಗಳಲ್ಲಿ ಆಸಕ್ತರಾದ ಇವರು ಭೂಮಿ ಬುಕ್ಸ್ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ವಿಜ್ಞಾನ, ಸಮಾಜಶಾಸ್ತ್ರ, ಕೃಷಿ, ಅಭಿವೃದ್ಧಿ ಮೀಮಾಂಸೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಪ್ರತಿಯೊಂದು ಪುಸ್ತಕ ಪ್ರಕಟವಾದಾಗಲೂ ಒಂದೊದು ಮರ ನೆಟ್ಟು ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಕ್ರಿಯಾಶೀಲವಾಗಿ ಪಾಲಿಸುತ್ತಾ ಬಂದಿರುವ ವಿಶಿಷ್ಟ ಪ್ರಕಾಶನ ಸಂಸ್ಥೆ ಇದಾಗಿದೆ. ನಾಗೇಶ್ ಹೆಗಡೆ, ಕೊಳ್ಳೆಗಾಲ ಶರ್ಮ, ಅನಿತಾ ಪೈಲೂರ್, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದತೀರ್ಥ ಪ್ಯಾಟಿ, ಗುರುರಾಜ್ ದಾವಣಗೆರೆ, ಅಖಿಲೇಷ್ ಚಿಪ್ಪಳಿ, ಶರಣ ಬಸವೇಶವರ ಅಂಗಡಿ ಮುಂತಾದವರ ಕೃತಿಗಳನ್ನು ಪ್ರಕಟಿಸಿದ್ದಾರೆ. ಈಗ ಕರ್ನಾಟಕ ಪ್ರಕಾಶಕರ ಸಂಘವು 2023ನೇ ಸಾಲಿನ ನಂಜನಗೂಡು ತಿರುಮಲಾಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.

ಇದನ್ನೂ ಓದಿ : Havyaka Awards : 80ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ; ಸಪ್ತ ಸಾಧಕರಿಗೆ ಹವ್ಯಕ ವಾರ್ಷಿಕ ವಿಶೇಷ ಪ್ರಶಸ್ತಿ ಪ್ರದಾನ

Exit mobile version