ಮಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಆಡಳಿತದಲ್ಲಿರುವವರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದು, ಗುದ್ದಲಿ ಪೂಜೆ ನೆರವೇರಿಸುವುದು, ಹೊಸ ಹೊಸ ಘೋಷಣೆಗಳನ್ನು ಮಾಡುವುದು ಸಾಮಾನ್ಯ. ಅದರಂತೆ ಕೆಲವು ಕಾಮಗಾರಿಗಳನ್ನು ಚುನಾವಣೆ ಹೊತ್ತಿಗೆ ಲೋಕಾರ್ಪಣೆಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ. ಆದರೆ, ಕಾಮಗಾರಿ ಮುಗಿದು ನಾಲ್ಕು ತಿಂಗಳು ಕಳೆದರೂ ಉದ್ಘಾಟನೆ ಮಾಡದೇ ಹಾಗೇ ಉಳಿಸಿಕೊಂಡಿದ್ದ ಪಾವೂರು ಹರೆಕಳದಿಂದ ಅಡ್ಯಾರು ಕಟ್ಟೆಯ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಈಗ ಡಿವೈಎಫ್ಐ ಲೋಕಾರ್ಪಣೆಗೊಳಿಸಿದೆ!
ಸಣ್ಣ ನೀರಾವರಿ ಇಲಾಖೆ ವತಿಯಿಂದ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ನಾಲ್ಕು ತಿಂಗಳ ಹಿಂದೆಯೇ ಈ ಕಾಮಗಾರಿ ಪೂರ್ಣಗೊಂಡಿತ್ತು. ಏಪ್ರಿಲ್ 1 ರಿಂದ ಸಂಚಾರಕ್ಕೆ ಅನುವು ಮಾಡುವ ಭರವಸೆ ನೀಡಲಾಗಿತ್ತು. ಈ ಮಧ್ಯೆ ನೀತಿ ಸಂಹಿತೆ ಸಹ ಜಾರಿಯಾಗಿದ್ದರಿಂದ ಲೋಕಾರ್ಪಣೆಗೊಳಿಸುವ ತಂಟೆಗೆ ಯಾರೂ ಹೋಗಿಲ್ಲ.
ಇದನ್ನೂ ಓದಿ: Dharma Dangal : ಬೇಲೂರು ಚನ್ನಕೇಶವ ಜಾತ್ರೆ ವೇಳೆ ಕುರಾನ್ ಬದಲು ಶ್ಲೋಕ ಪಠಣ; ಹಿಂದು ಕಾರ್ಯಕರ್ತರಿಂದ ಜೈಶ್ರೀರಾಮ್ ಘೋಷಣೆ
ಗೇಟ್ ಹಾಕಿ ಮಾರ್ಗ ಬಂದ್ ಮಾಡಲಾಗಿತ್ತು
ಸೇತುವೆ ನಿರ್ಮಾಣವಾದ ಬಳಿಕ ಉದ್ಘಾಟನೆಯಾಗುವವರೆಗೆ ಯಾರೂ ಸಹ ಸಂಚಾರ ಮಾಡದಂತೆ ಗೇಟ್ ನಿರ್ಮಿಸಿ ಬಂದ್ ಮಾಡಲಾಗಿತ್ತು. ಹೇಗೂ ಏಪ್ರಿಲ್ 1ರಂದು ಉದ್ಘಾಟನೆ ಮಾಡಿದ ಬಳಿಕ ಸಾರ್ವಜನಿಕ ಸಂಚಾರ ಮುಕ್ತ ಮಾಡುವ ಉದ್ದೇಶವನ್ನು ಹೊಂದಲಾಗಿತ್ತು. ಆದರೆ, ಅಷ್ಟರಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಇತ್ತ ನಾಗರಿಕರಿಗೆ ಈ ಸೇತುವೆ ಸಂಚಾರ ಮುಕ್ತವಾದರೆ ಸಾಕಷ್ಟು ದೂರ ಪ್ರಯಾಣ ಮಾಡುವುದು ತಪ್ಪುತ್ತಿತ್ತು. ಇದರಿಂದ ಅಂತರ ಹಾಗೂ ಸಮಯದ ಉಳಿತಾಯವೂ ಜನರಿಗೆ ಆಗುತ್ತಿತ್ತು.
ಇನ್ನು ಚುನಾವಣೆ ಮುಗಿಯುವವರೆಗೆ ಸಂಚಾರ ಮುಕ್ತವಾಗದೇ ಇದ್ದರೆ ಎಂಬ ಆತಂಕ ಜನರಲ್ಲಿ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ. ಅಲ್ಲದೆ, ಅಧಿಕಾರಿಗಳ ಬಳಿಗೆ ತೆರಳಿ ಸಮಸ್ಯೆಯನ್ನು ಹೇಳಲಾಗಿದೆ. ಅಡ್ಯಾರು ಕಟ್ಟೆಯ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯಿಂದ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರೂ ಇಲ್ಲದ ಸಬೂಬು ಹೇಳಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಲಾಗಿದೆ.
ಡಿವೈಎಫ್ಐ ನೇತೃತ್ವದಲ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಕಾಮಗಾರಿ ಮುಗಿದು ನಾಲ್ಕು ತಿಂಗಳಾದರೂ ಜನರಿಗೆ ಮಂಗಳೂರು ತಲುಪಲು ಸಮೀಪದ ರಸ್ತೆ ಇಲ್ಲವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಡಿವೈಎಫ್ಐ ನೇತೃತ್ವದಲ್ಲಿ ಸೇತುವೆ ಬಳಿ ಮಂಗಳವಾರ (ಏ. 4) ಜಮಾಯಿಸಿದ್ದಾರೆ. ಬಳಿಕ ಸೇತುವೆಗೆ ಹಾಕಿದ್ದ ಗೇಟ್ ಅನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರೇ ಗೇಟ್ ಅನ್ನು ತೆರವುಗೊಳಿಸಿದರು. ಆ ಮೂಲಕ ಸೇತುವೆಯನ್ನು ಸಂಚಾರ ಮುಕ್ತ ಮಾಡಲಾಯಿತು.