Site icon Vistara News

ಬಿಸಿಸಿಐ ಚುನಾವಣೆ ಬೆನ್ನಲ್ಲೆ ಕೆಎಸ್​ಸಿಎಯಲ್ಲಿ ಪಟ್ಟಕ್ಕಾಗಿ ಪೈಪೋಟಿ

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆ ಅಲಂಕರಿಸಿದ ಕರ್ನಾಟಕದ ಎರಡನೇಯವರಾಗಿದ್ದಾರೆ. ಇದಕ್ಕೂ ಮೊದಲು ಎಂ.ಚಿನ್ನಸ್ವಾಮಿ 1977 ರಿಂದ 1980ರವರೆಗೆ ಅಧ್ಯಕ್ಷರಾಗಿದ್ದರು.

ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೆ ಬಿನ್ನಿ ಕೆಎಸ್​ಸಿಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು. ಇದರ ಬೆನ್ನಲ್ಲೇ ಕೆಎಸ್​ಸಿಎ ಅಂಗಳದಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿವೆ.. ಕೆಎಸ್​ಸಿಎ ಪದಾಧಿಕಾರಿಗಳ ಚುನಾವಣೆಯೂ ಮುಂದಿನ ತಿಂಗಳು ನಡೆಯುವ ಸಾಧ್ಯತೆಗಳಿವೆ.

ತ್ರಿಕೋನ ಸ್ಪರ್ಧೆ ಸಾಧ್ಯತೆ

ಮತ್ತೊಂದೆಡೆ, ಕೆಎಸ್​ಸಿಎ ಅಧ್ಯಕ್ಷ ಸ್ಥಾನಕ್ಕೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ. ಹಾಲಿ ಖಜಾಂಚಿ ವಿನಯ್ ಮೃತ್ಯುಂಜಯ, ಉಪಾಧ್ಯಕ್ಷ ಜೆ.ಅಭಿರಾಮ್, ಮಾಜಿ ಆಟಗಾರ ರಘುರಾಮ್ ಭಟ್ ಹೆಸರು ಕೇಳಿ ಬರುತ್ತಿದೆ. ಈ ಪೈಕಿ ವಕ್ತಾರರೂ ಆಗಿರುವ ಖಜಾಂಚಿ ವಿನಯ್ ಮೃತ್ಯುಂಜಯ ಹೆಸರು ಮುಂಚೂಣಿಯಲ್ಲಿದೆ ಎಂದು ಕೆಎಸ್​ಸಿಎ ಮೂಲಗಳು ವಿಸ್ತಾರ ನ್ಯೂಸ್​ಗೆ ತಿಳಿಸಿವೆ. ಸಂತೋಷ್​ ಮೆನನ್, ಕಾರ್ಯದರ್ಶಿಯಾಗಿ ಮುಂದುವರಿಯುವ ಸಾಧ್ಯತೆಗಳಿವೆ.

ಕೆಎಸ್​ಸಿಎ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಬಣವೇ ಈ ಬಾರಿಯೂ ಕೆಎಸ್​ಸಿಎಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವುದು ಪಕ್ಕಾ ಆಗಿದೆ. ಕಳೆದ 9 ವರ್ಷಗಳಿಂದಲೂ ಕೆಎಸ್​ಸಿಎಯಲ್ಲಿ ಬ್ರಿಜೇಶ್ ಬಣವೇ ಬಿಗಿ ಹಿಡಿತ ಸಾಧಿಸುತ್ತಾ ಬಂದಿದೆ. ಬ್ರಿಜೇಶ್ ಪಟೇಲ್​ಗೆ 69 ವರ್ಷ ವಯಸ್ಸಾಗಿದ್ದು, ಲೋಧಾ ಸಮಿತಿ ವರದಿ ಅನ್ವಯ 70 ವಯೋಮಿತಿಯವರು ಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾಗಿ ಈ ಬಾರಿ ಬ್ರಿಜೇಶ್ ಪಟೇಲ್ ಚುನಾವಣಾ ಕಣದಿಂದ ಹಿಂದೆ ಸರಿಯಲಿದ್ದಾರೆ.

ಇದನ್ನೂ ಓದಿ | BCCI President | ಗಂಗೂಲಿಗೆ ಕರ್ಮ ಫಲ ತಟ್ಟಿದೆ ಎನ್ನುತ್ತಿದ್ದಾರೆ ವಿರಾಟ್‌ ಕೊಹ್ಲಿ ಅಭಿಮಾನಿಗಳು!

Exit mobile version