ಯಾದಗಿರಿ: ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ನಿರ್ದೇಶಕರಾಗಿ (AIIMS Delhi) ಆಯ್ಕೆಯಾಗಿರುವ ಡಾ. ಶ್ರೀನಿವಾಸ ಅವರು ಕಲ್ಯಾಣ ಕರ್ನಾಟಕದ ಯಾದಗಿರಿ ಮೂಲದವರಾಗಿದ್ದಾರೆ.
ಪ್ರಸ್ತುತ ಹೈದ್ರಾಬಾದ್‌ನ ಇಎಸ್‌ಐಸಿ ಆಸ್ಪತ್ರೆಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೋಘ ಸಾಧನೆಗೆ ಏಮ್ಸ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.
ಹಿಂದಿನ ಡೀನ್ ರಣದೀಪ್ ಗುಲೇರಿಯಾ ಅವಧಿ ಮುಕ್ತಾಯ ಹಿನ್ನಲೆ ಅವರ ಸ್ಥಾನಕ್ಕೆ ಕನ್ನಡಿಗ ಶ್ರೀನಿವಾಸ್ ಅವರಿಗೆ ಏಮ್ಸ್ ನಿರ್ದೇಶಕರ ಸ್ಥಾನ ಸಿಕ್ಕಿದೆ. ಹಿಂದುಳಿದ ಜಿಲ್ಲೆ ಯಾದಗಿರಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಡಾ.ಶ್ರೀನಿವಾಸ, ಕಲ್ಯಾಣ ಕರ್ನಾಟಕ ಭಾಗದ ಕೀರ್ತಿ ಹೆಚ್ಚಿಸಿದ್ದಾರೆ.
ತಂದೆ ಆಶೆಪ್ಪ ಹಾಗೂ ತಾಯಿ ಸರೋಜಾ ದಂಪತಿಗೆ ಜನಿಸಿದ ಶ್ರೀನಿವಾಸ ಅವರು ಯಾದಗಿರಿಯ ಶಾಸ್ತ್ರೀ ವೃತ್ತದ ಸಮೀಪದ ನಿವಾಸಿಯಾಗಿದ್ದಾರೆ. ಇವರ ಸಹೋದರ ನಾಗರಾಜ್ ಕಲಬುರಗಿಯ ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಮಾಧ್ಯಮದಲ್ಲಿಯೇ ಓದು
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಶ್ರೀನಿವಾಸ ತಮ್ಮ ಪ್ರಾಥಮಿಕ ಶಿಕ್ಷಣ ಎಂಪಿಎಸ್ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ನ್ಯೂ ಕನ್ನಡ ಶಾಲೆಯಲ್ಲಿ ಮುಗಿಸಿದ್ದರು. ಆ ಬಳಿಕ ಪಿಯು ಶಿಕ್ಷಣವನ್ನು ನಗರದ ಜೂನಿಯರ್ ಕಾಲೇಜ್‌ನಲ್ಲಿ ಮುಗಿಸಿದರೆ, ಬಳ್ಳಾರಿಯಲ್ಲಿ ಎಂಬಿಬಿಎಸ್, ದಾವಣಗೆರೆಯ ಜೆಜೆಎಮ್ ಕಾಲೇಜಿನಲ್ಲಿ ಎಂ.ಎಸ್ ವ್ಯಾಸಂಗ ಮಾಡಿದ್ದಾರೆ. ದೆಹಲಿಯ ಏಮ್ಸ್‌ನಲ್ಲಿ ಎಂಸಿಎಚ್ ( MCH) ಅಭ್ಯಾಸ ಮಾಡುತ್ತಿರುವಾಗಲೇ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಮ್ಸ್ ನಿರ್ದೇಶಕರಾಗಿ ಆಯ್ಕೆ ಆಗಿರುವುದು ಕರ್ನಾಟಕಕ್ಕೆ ಮತ್ತಷ್ಟು ಹೆಮ್ಮೆ ತಂದಿದೆ.
ಇದನ್ನೂ ಓದಿ | ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ರಕ್ತದ ಸಹಿಯ ಹೋರಾಟ