Site icon Vistara News

Akhil Bharatiya Sahitya Parishad : ನಮ್ಮವರು ಬ್ರಿಟಿಷ್ ಮಾನಸಿಕತೆಯಿಂದ ಹೊರಬಂದಿಲ್ಲ: ಹರಿಪ್ರಕಾಶ್‌ ಕೋಣೆಮನೆ

Hariprakash Konemane inaugurated Poetry Festival in sirsi

ಶಿರಸಿ: ಸ್ವಾತಂತ್ರ್ಯ ಲಭಿಸಿ 76 ವರ್ಷಗಳು ಕಳೆದರೂ ಬ್ರಿಟಿಷ್ ಮಾನಸಿಕತೆಯಿಂದ (British mentality) ಹೊರಬಾರದೇ ಇರುವುದು ದೇಶದ ದುರ್ದೈವ ಎಂದು ಅಖಿಲ‌ ಭಾರತೀಯ ಸಾಹಿತ್ಯ ಪರಿಷದ್‌ನ (Akhil Bharatiya Sahitya Parishad) ರಾಜ್ಯ ಉಪಾಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅಭಿಪ್ರಾಯಪಟ್ಟರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ (ಸೆ.03) ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸ್ವರಾಜ್ಯ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಹರಿಪ್ರಕಾಶ್ ಕೋಣೆಮನೆ, ಕೆಲ ಮಹಾನ್ ನಾಯಕರು ಎನಿಸಿಕೊಂಡವರು ಇಂದು ಪಾಕಿಸ್ತಾನದ ಬಗ್ಗೆ ವಿದೇಶದಲ್ಲಿ ಕುಳಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅವರಿಗೆ ದೇಶದ ಸಾರ್ವಭೌಮತೆ ಬಗೆಗಿನ ಕಲ್ಪನೆಯ ಅರಿವು ಇಲ್ಲ. ಚೀನಾದಂತಹ ದೇಶವನ್ನು ಬಗ್ಗು ಬಡಿಯುತ್ತಿರುವ ಭಾರತದ ಬಗ್ಗೆ ಜಗತ್ತಿನ ಅನೇಕ ದೇಶಗಳು ಮೆಚ್ಚುಗೆ ಜತೆಗೆ ಬೆಂಬಲಿಸುತ್ತಿರುವ ಈ ಕಾಲದಲ್ಲಿ ನಮ್ಮ ದೇಶದ ಮಹಾನ್ ನಾಯಕರೆನ್ನುವವರು ಆಡುವ ಮಾತುಗಳಿಂದ ದೇಶಕ್ಕೆ ಒಳಿತಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Operation Hasta : ಮಾಜಿ ಶಾಸಕರಾದ ಬಿ.ಸಿ. ಪಾಟೀಲ್‌, ರಾಜುಗೌಡ ಜತೆ ಡಿಕೆಶಿ ರಹಸ್ಯ ಮಾತುಕತೆ!

ದೇಶದ ಪ್ರಧಾನಿಯಾಗಲು ಹೊರಟವರ ರಕ್ತ ಭಾರತದ್ದಲ್ಲ | Hariprakash Konemane About Swarajya | Vistara News

ನಮ್ಮ ದೇಶವನ್ನಾಳಿದ ಬ್ರಿಟಿಷರ ಹಾಗೆ ಸಂಪತ್ತು ಕೊಳ್ಳೆ ಹೊಡೆಯುವುದನ್ನು ಕೆಲವರು ಮುಂದುವರಿಸಿಕೊಂಡು ಬಂದಿದ್ದಾರೆ. ಇಂದು ದೇಶಕ್ಕೆ ಭದ್ರ ಬುನಾದಿ ಹಾಕುವ ಮತ್ತು ವಿಶ್ವ ಗುರುವಿನ ಸ್ಥಾನಕ್ಕೇರಿಸುವ ಇಚ್ಛಾಶಕ್ತಿಯುಳ್ಳ ನಾಯಕರ ಅಗತ್ಯವಿದ್ದು, ಅದನ್ನು ದೇಶದ ಪ್ರಜ್ಞಾವಂತರು ತೀರ್ಮಾನಿಸಿದ ಪರಿಣಾಮ ದೇಶದ ಪರಿವರ್ತನೆಗೆ ನಾಂದಿಯಾಗಿದೆ ಎಂದು ಹರಿಪ್ರಕಾಶ್‌ ಕೋಣೆಮನೆ ಅಭಿಪ್ರಾಯಪಟ್ಟರು.

ಕೇವಲ ಬರೆದಿದ್ದೆಲ್ಲ ಕವಿತೆಗಳಾಗಲು ಸಾಧ್ಯವಿಲ್ಲ. ಆ ಬರವಣಿಗೆಯಲ್ಲಿ ದೇಶದ ಕುರಿತಾದ ಚಿಂತನೆ, ಭಕ್ತಿರಸ, ಮೌಲ್ಯ ಇದ್ದಾಗ ಮಾತ್ರ ಉತ್ತಮ ಕವನ ಆಗುವುದಕ್ಕೆ ಸಾಧ್ಯ. ಆ ನಿಟ್ಟಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದೇಶಾದ್ಯಂತ ಆ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ನಾವು ಜಯ ಭಾರತ ತನುಜಾತೆ ಹೇಗೆ ಹಾಡಬೇಕು? ಹೇಗೆ ಮೊಟಕು ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡುತ್ತೇವೆಯೇ ವಿನಃ ಅದರ ಶಕ್ತಿಯ ಅರಿವನ್ನು ಮಾಡಿಕೊಳ್ಳದೇ ಮುನ್ನಡೆಯುತ್ತಿರುವುದು ವಿಪರ್ಯಾಸ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಕುವೆಂಪು, ಬೇಂದ್ರೆ, ಅಡಿಗ ಹೀಗೆ ಹತ್ತಾರು ಕವಿಗಳು ಈ ನೆಲದ ಜೀವಂತಿಕೆಗೆ ಕೊಡುಗೆ ನೀಡಿದ್ದಾರೆ. ಎಲ್ಲಿಯೂ ಗೌಡ, ಬ್ರಾಹ್ಮಣ, ಕುರುಬ, ಲಿಂಗಾಯತ ಹೀಗೆ ಜಾತಿಯ ವಿಷ ಬೀಜ ತುರುಕದೆ ಆನೋ ಭದ್ರಹ ಎಂಬಂತೆ ವಿಶ್ವವೇ ನಮ್ಮ ಕಲ್ಯಾಣ ಎಂಬ ಚಿಂತನೆಯನ್ನು ನಮ್ಮ ಪರಿಷದ್ ಹೊಂದಿದೆ. ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಚಂದ್ರಯಾನ 3ರಲ್ಲಿ ಜಗತ್ತು ನಿಬ್ಬೆರಗಾಗುವಂತೆ ಮಾಡಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.‌ ಚೀನಾ, ಪಾಕಿಸ್ತಾನದ ನಿಲುವು ಹೊಂದಿದ ಕೆಲವರು ಇದರ ವಿಫಲತೆಯ ನಿರೀಕ್ಷೆಯಲ್ಲಿದ್ದರು. ಈ ಮೂಲಕ ನಮ್ಮ ದೇಶದ ಕೆಲವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಉಚಿತ ಆಮಿಷಗಳ ಬಗ್ಗೆ ಹರಿಪ್ರಕಾಶ್‌ ಕೋಣೆಮನೆ ಹೇಳಿದ್ದೇನು? ಇಲ್ಲಿದೆ ವಿಡಿಯೊ

ಸಾಹಿತ್ಯ ನಿತ್ಯ ನೂತನವಾಗಿರಬೇಕು

ಯಾವುದೇ ಕಾರ್ಯ ಯಶಸ್ವಿಯಾಗಬೇಕಾದರೆ ಸುಜ್ಞಾನವೂ ಬೇಕು, ವಿಜ್ಞಾನವೂ ಬೇಕು. ಆ ಹಿನ್ನೆಲೆಯಲ್ಲಿ ಸುಜ್ಞಾನದ ಅರಿವು ಹೊಂದಿದ ವಿಜ್ಞಾನಿಗಳು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ್ದು ದೇಶದ ಸಂಸ್ಕೃತಿಯ ಮಹತ್ವವನ್ನು ಪ್ರತಿಬಿಂಬಿಸುವಂತಾಗಿದೆ. ನಮ್ಮ ಸಾಹಿತ್ಯ ನಿತ್ಯ ನೂತನವಾಗಿರಬೇಕು. ಅಂತಹ ಬರಹಗಳನ್ನು ನಮ್ಮ ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ಮಾಡಬೇಕಾದ ಸನ್ನಿವೇಶ ನಮಗಿದೆ. ನಮ್ಮ ಹಿರಿಯರು ಆ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಬೇಕಾಗಿದೆ ಎಂದರು.

ಇದೇ ವೇಳೆ ಕವಿಗೋಷ್ಠಿಯಲ್ಲಿ ಉತ್ತಮ ಕವನ ರಚಿಸಿದ ಪುಷ್ಪಾ ಮಾಳ್ಕೊಪ್ಪ, ಶೀಲಾ ಅರಕಲಗೋಡ ಹಾಗೂ ಮಂಜುನಾಥ ಮರವಂತೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಕೃತ ಪ್ರಾಧ್ಯಾಪಕ‌ ರಾಮಚಂದ್ರ ರಾವ್ ಸ್ಪರ್ಧಾಳುಗಳಿಗೆ ಕಾವ್ಯ ಹಾಗೂ ಸಾಹಿತ್ಯದ ಕುರಿತು ಅವಲೋಕನ ಮತ್ತು ಅದರ ರಚನೆ ಕುರಿತು ತಿಳಿಸಿದರು.

ಇದನ್ನೂ ಓದಿ: BJP Politics : ಬಿಜೆಪಿಯಲ್ಲಿ ಮೊಳಗಿದ ಬಿಎಸ್‌ವೈ ನಾಯಕತ್ವ; ಲಿಂಗಾಯತ ಕಡೆಗಣನೆ ಕೂಗು!

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಇದ್ದರು‌. ಸಿಂಧೂರ ಹೆಗಡೆ, ಶ್ರಾವಣಿ, ಪ್ರೇರಣಾ, ಪ್ರತೀಕ ಭಟ್ಟ ಪ್ರಾರ್ಥಿಸಿದರು. ರಾಜ್ಯ ಕಾರ್ಯಕಾರಿ ಸದಸ್ಯ ಜಗದೀಶ ಭಂಡಾರಿ ಸ್ವಾಗತಿಸಿದರು.

Exit mobile version