ವಿಜಯಪುರ: ಇಲ್ಲಿನ ನಿಡಗುಂದಿ ತಾಲೂಕಿನಲ್ಲಿರುವ ಲಾಲ್‌ಬಹಾದ್ದೂರ್‌ಶಾಸ್ತ್ರಿ ಸಾಗರ ಎಂದು ಕರೆಯಲ್ಪಡುವ ಆಲಮಟ್ಟಿ ಜಲಾಶಯವನ್ನು (Alamatti Reservoir) ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಸದ್ಯ ಆಲಮಟ್ಟಿ ಜಲಾಶಯ (Alamatti Dam) ಬರಿದಾಗುವ (Dead Storage) ಆತಂಕ ನಿರ್ಮಾಣವಾಗಿದ್ದು, ಎಲ್ಲರ ಚಿತ್ತ ಮಹಾರಾಷ್ಟ್ರದ ಮಳೆಯತ್ತ ನೆಟ್ಟಿದೆ.
ವಾಡಿಕೆಯಂತೆ ರಾಜ್ಯದಲ್ಲಿ ರೋಹಿಣಿ ಮಳೆ ಕಳೆದು ಮೃಗಶಿರಾ ಮಳೆ ಆರಂಭದ ಹಂತದಲ್ಲಿದ್ದೇವೆ. ಕೃಷ್ಣೆಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ ಪ್ರದೇಶದಲ್ಲಿ ಇನ್ನೂ ಮಳೆ ಆರಂಭವಾಗಿಲ್ಲ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲೂ ಸಮರ್ಪಕವಾಗಿ ಮಳೆಯಾಗಿಲ್ಲ. ಹೀಗಾಗಿ ಮಳೆ ಬಾರದೆ ಬಿಸಿಲಿನ ಕೆನ್ನಾಲಿಗೆಗೆ ಜೀವಜಲ ತಳ ಮುಟ್ಟುತ್ತಿದೆ.
ಆಲಮಟ್ಟಿ ಅಣೆಕಟ್ಟಿನ ಎತ್ತರ 519.60 ಮೀಟರ್‌ನಷ್ಟು ಇದೆ. 123.081 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ, ಪ್ರಸ್ತುತ ನೀರಿನ ಮಟ್ಟ 507.78 ಮೀಟರ್‌ವರೆಗೆ ತಲುಪಿದೆ. ಇದರಲ್ಲಿ ಜಲಾಶಯದಲ್ಲಿನ ಜಲಚರಗಳಿಗಾಗಿ 17.62 ಟಿಎಂಸಿ ಡೆಡ್ ಸ್ಟೋರೇಜ್ ನೀರು ಮೀಸಲಿರಿಸಲಾಗಿದೆ. ಸದ್ಯ 20.618 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿದ್ದು, 2.998 ಟಿಎಂಸಿಯಷ್ಟು ನೀರು ಬಳಕೆಗೆ ಯೋಗ್ಯವಾಗಿದೆ.
ಕೆಪಿಸಿಎಲ್ ಮುಖಾಂತರ 250 ಕ್ಯೂಸೆಕ್, ಆವಿಯಾಗುವಿಕೆ ಹಾಗೂ ಕುಡಿಯುವ ನೀರಿಗಾಗಿ 521 ಕ್ಯೂಸೆಕ್ ಸೇರಿ ಒಟ್ಟು ದಿನಂಪ್ರತಿ 821 ಕ್ಯೂಸೆಕ್ ಹೊರಹರಿವು ಇದೆ. ಒಳಹರಿವು ಇನ್ನೂ ಆರಂಭವಾಗಿಲ್ಲ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ಇದಕ್ಕಿಂತಲೂ 20 ಟಿಎಂಸಿಯಷ್ಟು ಅಧಿಕ ನೀರು ಬಳಕೆಗೆ ಲಭ್ಯವಿತ್ತು. ಒಳಹರಿವು ಇನ್ನೂ ಆರಂಭವಾಗದೇ, ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಜಲಾಶಯದ ಗೇಟುಗಳ ಬೆಡ್ ಕಾಣುವಂತಾಗಿದೆ.
ರಾಜ್ಯದಲ್ಲಿ ಕೃಷ್ಣೆಗೆ ಹಿಪ್ಪರಗಿ ಹಾಗೂ ಚಿಕ್ಕಪಡಸಲಗಿ ಬಳಿ ಶ್ರಮ ಬಿಂದು ಸಾಗರ ಬ್ಯಾರೇಜ್ ಹಾಕಲಾಗಿದೆ. ಆಲಮಟ್ಟಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಮತ್ತು ನಾರಾಯಣಪುರದಲ್ಲಿ ಬಸವಸಾಗರ ಜಲಾಶಯಗಳನ್ನು ನಿರ್ಮಿಸಲಾಗಿದೆ. ಇವುಗಳ ಮೂಲಕ ನೀರನ್ನು ಸಂಗ್ರಹಿಸುವುದರಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಸೇರಿದಂತೆ ಕೃಷ್ಣೆಯ ದಡದಲ್ಲಿರುವ ಜಿಲ್ಲೆಗಳ ಜನತೆಯ ಜೀವಜಲದ ದಾಹ ನೀಗಿಸುತ್ತದೆ.
ಕೆಬಿಜೆಎನ್‌ಎಲ್ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನಗರ ಹಾಗೂ ಬಹುಹಳ್ಳಿ ಕುಡಿಯುವ ನೀರಿನ ಘಟಕಕ್ಕೆ ನೀರು ಸಂಗ್ರಹ ಮಾಡಿಕೊಂಡಿದ್ದಾರೆ. ಆದಾಗ್ಯೂ ಕಳೆದ ಕೆಲ ದಿನಗಳಿಂದ ಜಲಾಶಯಗಳಲ್ಲಿ ಬಿಸಿಲಿನ ಝಳಕ್ಕೆ ಸಂಗ್ರಹಿಸಿರುವ ನೀರು ತಳ ಮುಟ್ಟುತ್ತಿದ್ದು, ಈ ಭಾಗದ ಜನತೆಯ ಆತಂಕಕ್ಕೆ ಕಾರಣವಾಗಿದೆ.
2016ರಲ್ಲೂ ನೀರಿಗಾಗಿ ಪರದಾಟ
2016ರಲ್ಲಿ ಮಳೆಗಾಲ ತಡವಾಗಿ ಆರಂಭವಾಗಿದ್ದರ ಪರಿಣಾಮ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ತಪ್ಪು ನಿರ್ಧಾರದಿಂದಾಗಿ ವಿಜಯಪುರ ನಗರ ಸೇರಿದಂತೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿದ್ದ ಪ್ರದೇಶದಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಜಲಚರಗಳಿಗಾಗಿ ಮೀಸಲಿರಿಸಲಾಗಿದ್ದ ನೀರನ್ನು ಬಳಸಿಕೊಂಡಿದ್ದರ ಪರಿಣಾಮ ಜಲಚರಗಳು ಸಾವನ್ನಪ್ಪಲು ಕಾರಣವಾಗಿತ್ತು ಎಂಬ ಆರೋಪಗಳೂ ಕೇಳಿ ಬಂದಿದ್ದವು.
2016ರಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳು ಕಲಿತ ಪಾಠದಿಂದ ದೂರದೃಷ್ಟಿಯನ್ನಿರಿಸಿಕೊಂಡು ಜೂನ್ ಅಂತ್ಯದವರೆಗೂ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿದೆ. ಈಗ ಜಲಾಶಯದಲ್ಲಿ ಸಂಗ್ರಹವಿರುವ ನೀರಿನಲ್ಲಿ ಇನ್ನೂ ಒಂದೂವರೆ ತಿಂಗಳ ಕಾಲ ಕುಡಿಯುವ ನೀರಿಗೆ ತೊಂದರೆಯಾಗದು ಎಂದು ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರರು ಅಭಿಪ್ರಾಯಪಟ್ಟಿದ್ದಾರೆ.
8 ಬಾರಿ ಡೆಡ್‌ಸ್ಟೋರೇಜ್ ತಲುಪಿರುವ ಜಲಾಶಯ
ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಉಗಮವಾಗುವ ಕೃಷ್ಣಾ ನದಿ ಆಂಧ್ರ ಬಳಿಯಿರುವ ಸಮುದ್ರ ಸೇರುತ್ತದೆ. ಸರಿಸುಮಾರು 1400 ಕಿ.ಮೀ ಹರಿಯುವ ಕೃಷ್ಣಾ ನದಿ ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಹರಿದು ಜನ-ಜಾನುವಾರುಗಳ ನೀರಿನ ದಾಹ ನೀಗಿಸುತ್ತದೆ. 2002ರಲ್ಲಿ ಆಲಮಟ್ಟಿ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಪ್ರಕ್ರಿಯೆ ಆರಂಭಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಎಂಟು ಬಾರಿ ಡೆಡ್‌ಸ್ಟೋರೇಜಿಗಿಂತ ಕಡಿಮೆ ಮಟ್ಟಕ್ಕೆ ಜಲಾಶಯದ ಮಟ್ಟ ತಲುಪಿದೆ.
ಈ ವರ್ಷ ಜಲಾಶಯ ಡೆಡ್‌ಸ್ಟೋರೇಜ್ ಮಟ್ಟ ತಲುಪಲು ಇನ್ನೂ ಒಂದು ಮೀಟರ್ ಮಾತ್ರ ಬಾಕಿ ಇದೆ. ಈ ತನಕ ಒಟ್ಟು 8 ಬಾರಿ ಜಲಾಶಯ ಡೆಡ್‌ಸ್ಟೋರೇಜ್ ಮಟ್ಟಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಈ ಸಂದರ್ಭಗಳಲ್ಲಿ ಡೆಡ್‌ಸ್ಟೋರೇಜ್ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗಿದೆ. ರಾಜ್ಯದ ಹಲವೆಡೆ 17 ಟಿಎಂಸಿಯಷ್ಟು ಡೆಡ್‌ಸ್ಟೋರೇಜ್ ಸಂಗ್ರಹ ಸಾಮರ್ಥ್ಯದ ಜಲಾಶಯಗಳು ಇವೆ. ಇಡೀ ರಾಜ್ಯದಲ್ಲಿಯೇ ಹೆಚ್ಚು ಡೆಡ್‌ಸ್ಟೋರೇಜ್ ಹೊಂದಿರುವ ಜಲಾಶಯಗಳಲ್ಲಿ ಆಲಮಟ್ಟಿ ಜಲಾಶಯವೂ ಒಂದು. ಆದರೆ, ಈ ವರ್ಷ ಜಲಾಶಯದಲ್ಲಿ ಇನ್ನೂ 2.998 ಟಿಎಂಸಿ ಸದ್ಯ ಬಳಕೆಗೆ ಯೋಗ್ಯವಾದ ನೀರಿದೆ. ಜಲಾಶಯದ ಮೊದಲಿನ ನೀರು ಸಂಗ್ರಹದ ಅಂಕಿ-ಅಂಶಗಳನ್ನು ಗಮನಿಸಿದರೆ ಈ ವರ್ಷ ನೀರಿನ ಕೊರತೆಯ ಯಾವುದೇ ಆತಂಕದ ಸ್ಥಿತಿ ಇನ್ನೂ ತಲುಪಿಲ್ಲ.
ಯಾವ್ಯಾವ ವರ್ಷ ಎಷ್ಟು ಇತ್ತು ನೀರಿನ ಮಟ್ಟ?
2003 ಮತ್ತು 2017ರಲ್ಲಿ ಜಲಾಶಯದ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ತಲುಪಿತ್ತು. 2003ರಲ್ಲಿ ಜಲಾಶಯದ ನೀರಿನ ಮಟ್ಟ 502.72 ಮೀಟರ್‌ಗೆ ಕುಸಿದಿತ್ತು. ಆಗ ಜಲಾಶಯದಲ್ಲಿ ಕೇವಲ 8.777 ಟಿಎಂಸಿ ಅಡಿ ನೀರಿತ್ತು. ಇತ್ತೀಚಿನ ವರ್ಷಗಳಲ್ಲಿ 2017ರಲ್ಲಿ ಜೂನ್ 7 ರಂದು ಜಲಾಶಯದ ಮಟ್ಟ 503.47 ಕ್ಕೆ ತಲುಪಿ, ಆಗ ಜಲಾಶಯದಲ್ಲಿ ಕೇವಲ 9.815 ಟಿಎಂಸಿ ಅಡಿ ನೀರಿತ್ತು. 2016ರಲ್ಲಿ ಜಲಾಶಯದ ನೀರಿನ ಮಟ್ಟ 505.31 ಮೀಟರ್, 2012ರಲ್ಲಿ 505.98, 2013ರಲ್ಲಿ 506.19 ಹಾಗೂ 2009ರಲ್ಲಿ 506.94, 2005ರಲ್ಲಿ 506.33, 2004ರಲ್ಲಿ ಜಲಾಶಯದ ನೀರಿನ ಮಟ್ಟ 506.20 ಮೀಟರಿಗೆ ಇಳಿದಿತ್ತು.
ಇತ್ತೀಚೆಗೆ ವ್ಯವಸ್ಥಿತವಾಗಿ ನೀರಿನ ನಿರ್ವಹಣೆ ಮಾಡಲಾಗುತ್ತಿದೆ. ಮೊದಲೆಲ್ಲಾ ನೀರಾವರಿ ಕ್ಷೇತ್ರ ಹೆಚ್ಚಿರಲಿಲ್ಲ, ಕೆರೆಗೆಳ ಭರ್ತಿ, ಹಿನ್ನೀರಿನ ಬಳಕೆ, ಕುಡಿಯುವ ನೀರಿನ ಜಾಕ್‌ವೆಲ್‌ಗಳು ಕಡಿಮೆಯಿದ್ದವು. ಆದರೆ, ಈ ವರ್ಷ ಜಿಲ್ಲೆಯ 169 ಕೆರೆಗಳನ್ನು ಎರಡು ಬಾರಿ ಭರ್ತಿ ಮಾಡಲಾಗಿದೆ. ನೀರಾವರಿಗೆ ಕಾಲುವೆಗಳ ಮುಖಾಂತರ ಸಾಕಷ್ಟು ಕಾಲ ನೀರು ಹರಿಸಲಾಗಿದೆ. ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ನಾನಾ ಜಿಲ್ಲೆಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ 1.6 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸಲಾಗಿದೆ. ಆ ಮೂಲಕ ಗರಿಷ್ಠ ಪ್ರಮಾಣದಲ್ಲಿ ನೀರಿನ ಸದ್ಬಳಕೆ ಮಾಡಿಕೊಳ್ಳಲಾಗಿದೆ.
ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಗಳು ನಿರಂತರ ನಿಗಾವಹಿಸಿ ಜಲಾಶಯದ ನೀರನ್ನು ನಿರ್ವಹಿಸಿದ್ದಾರೆ. ಇದರ ಪರಿಣಾಮ, ಗರಿಷ್ಠ ಪ್ರಮಾಣದ ನೀರು ಬಳಸಿಕೊಂಡರೂ ಆಲಮಟ್ಟಿ ಜಲಾಶಯದಲ್ಲಿ ಇನ್ನೂ ಬಳಕೆ ಯೋಗ್ಯವಾದ ನೀರು ಮೂರು ಟಿಎಂಸಿಯಷ್ಟಿದೆ. ಸದ್ಯಕ್ಕೆ ನೀರಿನ ಆತಂಕದ ಸ್ಥಿತಿ ಇಲ್ಲ. ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಆರಂಭಗೊಂಡು ನೀರು ಹರಿದು ಬಂದರೆ ಕೇವಲ 15 ರಿಂದ 20 ದಿನದಲ್ಲಿ ಜಲಾಶಯ ತನ್ನ ಗರಿಷ್ಠ ಮಟ್ಟಕ್ಕೆ ತಲುಪುತ್ತದೆ.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಕವಿಯಲಿದೆ ಮೋಡ; ಕರಾವಳಿಯಲ್ಲಿ ಮಳೆಯ ಅಬ್ಬರ ನೋಡ
ಪ್ರತಿವರ್ಷ ಜೂನ್ ಮೊದಲ ವಾರ ಜಲಾಶಯದ ಒಳಹರಿವು ಆರಂಭಗೊಳ್ಳುವುದು ಸಂಪ್ರದಾಯವಾಗಿದೆ. ಆದರೆ ಜೂನ್ ಕೊನೆಯ ಹಾಗೂ ಜುಲೈ ಮೊದಲ ವಾರದಲ್ಲಿಯೂ ಒಳಹರಿವು ಆರಂಭಗೊಂಡ ಉದಾಹರಣೆಗಳಿವೆ. ಇತ್ತೀಚಿನ ವರ್ಷಗಳಲ್ಲಿ 2019ರ ಸಾಲಿನಲ್ಲಿ ಜುಲೈ 3ರಂದು ಜಲಾಶಯಕ್ಕೆ ಒಳಹರಿವು ಆರಂಭಗೊಂಡಿತ್ತು. ತಡವಾಗಿ ಒಳಹರಿವು ಆರಂಭಗೊಂಡಿದ್ದರೂ ಆ ವರ್ಷ ಕೇವಲ 15 ದಿನದಲ್ಲಿ ಜಲಾಶಯ ಭರ್ತಿಗೊಂಡಿತ್ತು. ಒಳಹರಿವು ತಡವಾದಷ್ಟೂ ರೈತರ ತಳಮಳ ಹೆಚ್ಚಾಗಲಿದೆ. ಸದ್ಯ ಎಲ್ಲರ ಚಿತ್ತ ಮಹಾರಾಷ್ಟ್ರದ ಮಳೆಯತ್ತ ಎನ್ನುವಂತಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ