Site icon Vistara News

ವಂಚನೆ ಮಾಡಿ ಜಮೀನು ಗುಳುಂ ಆರೋಪ; ಮೂವರು ಮಕ್ಕಳೊಂದಿಗೆ ಮುಂಜಾನೆ 5 ಗಂಟೆಗೇ ಟವರ್‌ ಏರಿದ!

chikkaballapura land issue

ಚಿಕ್ಕಬಳ್ಳಾಪುರ: ತಮಗೆ ಮೋಸ ಮಾಡಿ ತಂದೆಯಿಂದ ಜಮೀನು ಪತ್ರಕ್ಕೆ ಸಹಿ ಮಾಡಿಸಿಕೊಂಡು ವಂಚನೆ ಮಾಡಲಾಗಿದೆ. ನಮಗೆ ನ್ಯಾಯ ಬೇಕೇ ಬೇಕು. ನಮ್ಮ ಜಮೀನು ನಮಗೆ ವಾಪಸ್‌ ಬೇಕು. ಇಲ್ಲದಿದ್ದರೆ ಇಲ್ಲಿಯೇ ಪ್ರಾಣ ಬಿಡುತ್ತೇವೆ ಎಂದು ಕುಟುಂಬವೊಂದರ ಯಜಮಾನ ತನ್ನ ಮೂವರು ಮಕ್ಕಳೊಂದಿಗೆ ಮೊಬೈಲ್‌ ಟವರ್‌ ಏರಿದ್ದ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಚಿಂತಾಮಣಿ ನಗರದ ಕನಂಪಲಗಲ್ಲಿಯ ಗಂಗರಾಜು ಎಂಬುವವರು ಮೊಬೈಲ್ ಟವರ್ ಏರಿದ್ದರು. ತಮ್ಮ ಜತೆಗೆ ಮೂವರು ಮಕ್ಕಳನ್ನೂ ಟವರ್‌ ಮೇಲೆ ಹತ್ತಿಸಿ ಕುಳಿತುಕೊಂಡಿದ್ದರು. ತಮಗೆ ನ್ಯಾಯ ಸಿಗುವವರೆಗೂ ಕೆಳಗೆ ಬರುವುದಿಲ್ಲ. ಇಲ್ಲಿಂದ ಬಲವಂತವಾಗಿ ಇಳಿಸಲು ಬಂದರೆ ಇಲ್ಲಿಂದಲೇ ಮಕ್ಕಳೊಂದಿಗೆ ಹಾರಿ ಪ್ರಾಣ ಬಿಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದರು. ಬೆಳಗ್ಗೆ ೫ ಗಂಟೆಗೇ ಟವರ್‌ ಹತ್ತಿದ್ದು, ಜತೆಯಲ್ಲಿ ಸೀಮೆಎಣ್ಣೆ ಹಾಗೂ ವಿಷದ ಬಾಟಲಿಯನ್ನೂ ಹೊತ್ತೊಯ್ದಿದ್ದ.

ಮೂಗಲಮರಿ ಗ್ರಾಮದ ವೆಂಕಟರೆಡ್ಡಿ ಮಲ್ಲಪ್ಪ ನಾರಾಯಣಪ್ಪ ವಿರುದ್ಧ ಗಂಗರಾಜು ವಂಚನೆ ಆರೋಪ ಮಾಡಿದ್ದಾರೆ. ವೆಂಕಟರೆಡ್ಡಿ ಮೋಸ ಮಾಡಿ ನಮ್ಮ ತಂದೆಯ ಸಹಿ ಪಡೆದು ಜಮೀನು ಖಾತೆ ಮಾಡಿಸಿಕೊಂಡಿದ್ದಾರೆ. ಈಗ ನನಗೆ ನನ್ನ ಜಮೀನು ಬೇಕು. ಇಲ್ಲದಿದ್ದರೆ ನನ್ನ ಕುಟುಂಬ ಬೀದಿಗೆ ಬರಲಿದೆ. ಅದಕ್ಕಿಂತ ನಾನು ಇಲ್ಲಿಯೇ ಸಾಯುತ್ತೇನೆ ಎಂದು ಗಂಗರಾಜು ಬೆದರಿಕೆಯೊಡ್ಡಿದ್ದಾನೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಎಷ್ಟೇ ಮನವೊಲಿಸಿದರೂ ಆತ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಬಳಿಕ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳನ್ನೂ ಕರೆಸಿಕೊಳ್ಳಲಾಗಿದ್ದು, ಎಲ್ಲರೂ ಸೇರಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಂತಿಮವಾಗಿ ತಾಲೂಕು ಕಚೇರಿಗೆ ಕರೆದೊಯ್ದು ದಾಖಲೆ ಪರಿಶೀಲನೆ ಮಾಡುವ ಭರವಸೆಯನ್ನು ಅಧಿಕಾರಿಗಳು ನೀಡಿದ ಮೇಲೆ ಗಂಗರಾಜು ಟವರ್‌ನಿಂದ ಕೆಳಕ್ಕೆ ಇಳಿಯಲು ಒಪ್ಪಿದ್ದಾನೆ.

ಇದನ್ನೂ ಓದಿ: kodi mutt swamiji: ಪಕ್ಷಗಳು ಒಡೆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠ ಶ್ರೀ ಭವಿಷ್ಯ

ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಟವರ್‌ ಏರಿ ಹಗ್ಗದ ಸಹಾಯದಿಂದ ಮಕ್ಕಳನ್ನು ಮೊದಲಿಗೆ ಕೆಳಕ್ಕೆ ಸುರಕ್ಷಿತವಾಗಿ ಇಳಿಸಿದ್ದಾರೆ. ಕೊನೆಗೆ ಗಂಗರಾಜುವನ್ನೂ ಇಳಿಸಿದ್ದಾರೆ. ಈ ಬಗ್ಗೆ ಗಂಗರಾಜು ತಂದೆ ಪ್ರತಿಕ್ರಿಯೆ ನೀಡಿದ್ದು, ತನಗೆ ಮೋಸದಿಂದ ಸಹಿ ಮಾಡಿಸಿಕೊಂಡು ಜಮೀನನ್ನು ಖಾತೆ ಮಾಡಿಸಿಕೊಂಡಿದ್ದಾರೆ. ಈ ವಿಷಯ ತಿಳಿದ ಮಗ ನನ್ನ ಮೊಮ್ಮಕ್ಕಳೊಂದಿಗೆ ಟವರ್‌ ಏರಿ ಕುಳಿತಿದ್ದಾನೆ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ.

Exit mobile version