Site icon Vistara News

Alma Media School | ಜಗತ್ತನ್ನು ಮುಂದೆ ನಿಂತು ನೋಡದೆ, ಹಿಂದೆ ನಿಂತು ನೋಡುವವನೇ ಒಳ್ಳೆಯ ಪತ್ರಕರ್ತ: ಹರಿಪ್ರಕಾಶ್‌ ಕೋಣೆಮನೆ

alma media house hariprakash

ಬೆಂಗಳೂರು: ಒಳ್ಳೆಯ ಪತ್ರಕರ್ತನಾಗಬೇಕೆಂದರೆ ಜಗತ್ತನ್ನು ನಾವೇ ಮುಂದು ನಿಂತು ನೋಡುವುದಲ್ಲ, ಹಿಂದೆ ನಿಂತು ನೋಡಬೇಕು. ಅಲ್ಲದೆ, ನಾವು ಬಳಸುವ ಭಾಷೆಯಲ್ಲಿ ಪ್ರಭುತ್ವ ಸಾಧಿಸಿರಬೇಕು. ಇದಕ್ಕೆ ಉತ್ತಮ ಓದಿನ ಅಗತ್ಯ ಇದೆ ಎಂದು ಆಲ್ಮಾ ಮೀಡಿಯಾ ಸ್ಕೂಲ್‌ (Alma Media School) ವಿದ್ಯಾರ್ಥಿಗಳಿಗೆ ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ತಿಳಿಸಿದರು.

ಹಿರಿಯ ಪತ್ರಕರ್ತ, ಸುದ್ದಿ ನಿರೂಪಕ ಗೌರೀಶ್‌ ಅಕ್ಕಿ ನೇತೃತ್ವದ ಆಲ್ಮಾ ಮೀಡಿಯಾ ಸ್ಕೂಲ್‌ನ “ಡಿಪ್ಲೊಮಾ ಇನ್‌ ಪ್ರಾಕ್ಟಿಕಲ್‌ ಜರ್ನಲಿಸಮ್‌ ಆ್ಯಂಡ್ ಮೀಡಿಯಾ ಮ್ಯಾನೇಜ್ಮೆಂಟ್‌” ಕೋರ್ಸ್‌- ಜನವರಿ 2023ನೇ ಹೊಸ ಬ್ಯಾಚ್‌ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪತ್ರಿಕೋದ್ಯಮದ ಸವಾಲುಗಳು, ಪತ್ರಕರ್ತನ ಜವಾಬ್ದಾರಿ, ಭಾಷೆಯ ಪ್ರಾಮುಖ್ಯತೆ, ಡಿಜಿಟಲ್‌ ಮಾಧ್ಯಮದ ವಿಸ್ತಾರತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡ, ಇಂಗ್ಲಿಷ್‌, ತಮಿಳು, ತೆಲುಗು ಹೀಗೆ ಭಾಷೆ ಯಾವುದೇ ಇರಲಿ, ಆದರೆ ನಾವು ಬಳಸುವ ಭಾಷೆಯಲ್ಲಿ ಪ್ರಭುತ್ವನ್ನು ಸಾಧಿಸಿರಬೇಕು. ನಾವು ಇಂದು ಕಂಗ್ಲಿಷ್‌ ಭಾಷೆಯನ್ನು ಅಳವಡಿಸಿಕೊಂಡಿದ್ದೇವೆ. ಆದರೆ, ಅದು ಹಾಗಾಗಬಾರದು. ಇಂಗ್ಲಿಷ್‌ ಬಳಕೆ ಮಾಡಿದರೆ ಇಂಗ್ಲಿಷ್‌ ಅನ್ನು ಮಾತ್ರವೇ ಸರಳವಾಗಿ, ಸ್ವಚ್ಛವಾಗಿ ಮಾತನಾಡಬೇಕು. ಕನ್ನಡವನ್ನು ಮಾತನಾಡಿದರೆ, ಅದನ್ನೇ ಸ್ಪಷ್ಟವಾಗಿ ಮಾತನಾಡಬೇಕು. ಈ ನಿಟ್ಟಿನಲ್ಲಿ ಭಾಷೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾಷೆ ನಮಗೆ ಹುಟ್ಟಿನಿಂದ ಬರುತ್ತದೆ. ಅದು ಪ್ರದೇಶವಾರು ಬದಲಾಗಿರುತ್ತದೆ. ನಾವು ಆ ಭಾಷೆಯ ಸೊಗಡನ್ನು ಇಟ್ಟುಕೊಂಡು ಅದನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು. ಇದಾಗಬೇಕೆಂದರೆ ಓದಿನಿಂದ ಮಾತ್ರ ಸಾಧ್ಯ. ಅಂದರೆ ಪ್ರಜ್ಞಾಪೂರ್ವಕವಾಗಿರುವ ಪರಿಶ್ರಮದಿಂದ ಆಗಬೇಕು ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಇದನ್ನೂ ಓದಿ | ವಿಸ್ತಾರ Explainer | ಭಾರತದ ಜತೆ ಯುದ್ಧಗಳಿಂದ ಪಾಕ್‌ ನಿಜಕ್ಕೂ ಪಾಠ ಕಲಿತಿದೆಯಾ? ಪಾಕ್‌ ಪ್ರಧಾನಿ ಮಾತಿನ ಅರ್ಥವೇನು?

ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ಪುಸ್ತಕಗಳನ್ನು ತಂದಿಟ್ಟುಕೊಳ್ಳಬೇಕು. ನಿಮಗೆ ಇಷ್ಟವಾದ ಪುಸ್ತಕವನ್ನು ಹೆಚ್ಚು ಹೆಚ್ಚು ಓದಬೇಕು. ಓದುವುದರ ಜತೆಗೆ ಬರೆಯುವ ಅಭ್ಯಾಸವನ್ನೂ ರೂಢಿಸಿಕೊಳ್ಳಬೇಕು. ನಾನು ಇವತ್ತಿಗೂ ಸಹ ಬರವಣಿಗೆಗೆ ಹೆಚ್ಚು ಆದ್ಯತೆ ಕೊಡುತ್ತೇನೆ. ಪ್ರಯತ್ನಪೂರ್ವಕವಾಗಿ ಸಮಯವನ್ನು ಮಾಡಿಕೊಂಡು ಬರೆಯುತ್ತೇನೆ. ಮೊದಲು ನೋಟ್‌ಬುಕ್‌ನಲ್ಲಿ ಪಾಯಿಂಟ್‌ಗಳನ್ನು ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತೇನೆ. ಇನ್ನು ಲೇಖನವನ್ನು ಬರೆಯಬೇಕೆಂದರೆ ಕೈಯಲ್ಲೇ ಬರೆಯುತ್ತೇನೆ. ಆನಂತರ ಅದನ್ನು ಲ್ಯಾಪ್‌ಟಾಪ್‌ನಲ್ಲಿ ಟೈಪ್‌ ಮಾಡುತ್ತೇನೆ. ಹೀಗೆ ಮಾಡುವುದರಿಂದ ನಾವು ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ನಮ್ಮ ಬರವಣಿಗೆ ಶೈಲಿ, ಕೈಬರಹದ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ. ಇದಲ್ಲದೆ, ಓದುವುದರ ಜತೆಗೆ ಬರೆದಾಗ ಮನಸ್ಸಿನಲ್ಲಿ ಹೆಚ್ಚು ದಾಖಲಾಗುತ್ತದೆ. ಒಂದು ಪುಸ್ತಕ ಓದಿದವರು ಅದರ ಬಗ್ಗೆ ಸುಮಾರು ಒಂದೂವರೆ ಪುಟ ನೋಟ್ಸ್‌ ಮಾಡಿಕೊಂಡರೆ ಅದು ಕೊನೇವರೆಗೂ ನೆನಪುಳಿಯುತ್ತದೆ. ಮತ್ತೆ ಆ ಪುಸ್ತಕವನ್ನು ಓದಬೇಕಾದ ಪ್ರಮೇಯವೇ ಬರುವುದಿಲ್ಲ. ನಿಮಗೆ ಏಕಾಗ್ರತೆ ಬರಬೇಕೆಂದರೆ ಧ್ಯಾನ, ಯೋಗ ಮಾಡಬೇಕೆಂದೇನೂ ಇಲ್ಲ. ಶ್ರದ್ಧೆಯಿಂದ ಓದಿದರೆ ಸಾಕು ಎಂದು ವಿದ್ಯಾರ್ಥಿಗಳಿಗೆ ಹರಿಪ್ರಕಾಶ್‌ ಕೋಣೆಮನೆ ಸಲಹೆ ನೀಡಿದರು.

ನಾನು ಪತ್ರಕರ್ತ ಎಂದು ಏನು ಬೇಕಾದರೂ ಮಾಡಬಹುದು, ಯಾರನ್ನು ಬೇಕಾದರೂ ಸುಲಭವಾಗಿ ಪ್ರಶ್ನೆ ಮಾಡಬಹುದು ಎಂದು ಭಾವಿಸಬಾರದು. ಇಂದು ಸುದ್ದಿ ಮಾಧ್ಯಮದಲ್ಲಿ ರಾಜಕಾರಣಿಗಳು ಸೇರಿದಂತೆ ಗಣ್ಯರ ಒಂದು ಹೇಳಿಕೆ ಪಡೆಯಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂಬುದು ಟಿವಿ ವರದಿಗಾರರಿಗೆ ಗೊತ್ತಿರುತ್ತದೆ. ಇಂದು ಮಾಧ್ಯಮ ಬಹಳ ವಿಸ್ತಾರವಾಗಿ ವಿಸ್ತರಿಸಿದೆ. ಪತ್ರಿಕೆ, ಟಿವಿಗೆ ಮಾತ್ರ ಸೀಮಿತವಾಗಿ ನಿಂತಿಲ್ಲ. ನಿಜವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಇಂದು ಸಾಧ್ಯವಾಗುತ್ತಿದೆ. ಯೂಟ್ಯೂಬ್‌ ಚಾನೆಲ್‌ಗಳು ಇಂದು ಲಕ್ಷ ಕೋಟಿ ಫಾಲೋವರ್ಸ್‌ಗಳನ್ನು ಹೊಂದಿವೆ. ಸೋಷಿಯಲ್‌ ಮೀಡಿಯಾ ಮೂಲಕ ಇಂದು ಜನರನ್ನು ತಲುಪಲು ನಮಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.

ಇಂದು ಹೇಳಿದ್ದನ್ನು ಹಾಗೂ ಕೇಳಿದ್ದನ್ನು ವರದಿ ಮಾಡುವ ಪತ್ರಿಕೋದ್ಯಮ ಇಲ್ಲ. ನೀವೇ ಸೃಷ್ಟಿ ಮಾಡುವಂತಹ ಉತ್ತಮ ಚಿಂತನೆಗಳನ್ನು ಬಿತ್ತುವಂತಹ ಕೆಲಸಗಳು ಆಗಬೇಕಿದೆ. ಪತ್ರಕರ್ತರಿಗೆ ಗೌರವಯುತ ಸ್ಥಾನವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಪ್ರಾರಂಭಿಸಲಾಗಿದೆ. ಯಾವುದೇ ಉದ್ಯಮಿಯ ಕೆಳಗೆ ಅವರ ಆಕಾಂಕ್ಷೆ, ಅಭಿಲಾಷೆಗಳಿಗೆ ಕೆಲಸ ಮಾಡುವುದಾದರೆ ಅದಕ್ಕೆ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಬೇಕಿಲ್ಲ. ಅದಕ್ಕೆ ಅನೇಕ ಬೇರೆ ಬೇರೆ ಕೆಲಸಗಳಿವೆ. ಪತ್ರಿಕೋದ್ಯಮ ವೃತ್ತಿಯ ಮೌಲ್ಯವೇ ಬೇರೆ ಎಂದು ಹೇಳಿದರು.

ಇದನ್ನೂ ಓದಿ | SBI PO Exam : ಎಸ್‌ಬಿಐ ಪಿಓ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ; ಜ.30ಕ್ಕೆ ಮುಖ್ಯ ಪರೀಕ್ಷೆ

ವಿಸ್ತಾರ ಮೀಡಿಯಾ ಸಂಸ್ಥೆ ಪಾರದರ್ಶಕ

ಮಾಧ್ಯಮ ಸಂಸ್ಥೆಯಲ್ಲಿ ಮ್ಯಾನೇಜ್ಮೆಂಟ್‌ ಬಹಳ ಮುಖ್ಯವಾಗುತ್ತದೆ. ಇಂದು ಪತ್ರಿಕೋದ್ಯಮ ಪ್ರಾರಂಭಿಸಲು ನಿಮ್ಮ ಬಳಿ ಹಣ ಇರಬೇಕು ಎಂದಿಲ್ಲ. ಹಣವನ್ನು ಹೂಡಿಕೆ ಮಾಡುವವರು ಬಹಳ ಜನರು ಸಿಗುತ್ತಾರೆ. ಆದರೆ, ಅವರಿಂದ ಹಣ ಹಾಕಿಸುವ ವಿಶ್ವಾಸಾರ್ಹತೆಯನ್ನು ನಾವು ಗಳಿಸಿಕೊಳ್ಳಬೇಕು. ನಾನು ಇಂದು ಹಣ ಇಟ್ಟುಕೊಂಡು ಮಾಧ್ಯಮ ಸಂಸ್ಥೆಯನ್ನು ಪ್ರಾರಂಭ ಮಾಡಿಲ್ಲ. ಜತೆಗೆ ಯಾವುದೇ ಒಂದು ಚಿಕ್ಕ ಕಳಂಕವೂ ಇಲ್ಲದಂತೆ, ಪರಿಶುದ್ಧವಾಗಿ ಹಣ ಹೂಡಿಕೆ ಮಾಡಿ ನಾವು ಮಾಧ್ಯಮ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ನಮ್ಮ ವಿಶ್ವಾಸಾರ್ಹತೆಯನ್ನು ಯಾರು ಬೇಕಾದರೂ ಪ್ರಶ್ನೆ ಮಾಡಬಹುದು. ಹಣದ ಮೂಲವನ್ನು ಕೇಳಬಹುದು. ಇಡೀ ಮಾಧ್ಯಮ ಸಂಸ್ಥೆಯಲ್ಲಿ ಇದುವರೆಗೆ ಯಾರೂ ಸಹ ತಮ್ಮ ಹಣದ ಮೂಲ ಏನು? ಹೂಡಿಕೆದಾರರು ಯಾರು ಎಂಬುದನ್ನು ಯಾರಾದರೂ ಘೋಷಣೆ ಮಾಡಿದ್ದಿದ್ದರೆ ಅದು ವಿಸ್ತಾರ ನ್ಯೂಸ್‌ ಮಾತ್ರ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತೇನೆ ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ನವ ದೆಹಲಿಯಲ್ಲಿ ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ನಲ್ಲಿ ಮಾಧ್ಯಮ ಸಂಸ್ಥೆಯನ್ನು ನೋಂದಾಯಿಸಬೇಕು. ಅಲ್ಲಿ ಕೇಂದ್ರ ಸರ್ಕಾರ ಬಹಳ ಪಾರದರ್ಶಕ ಪದ್ಧತಿಯನ್ನು ಅಳವಡಿಸಿದೆ. ನಾವು ಅಲ್ಲಿ ಘೋಷಿಸಿಕೊಂಡ ಎಲ್ಲ ದಾಖಲೆಯನ್ನು ನಮ್ಮ ವೆಬ್‌ಸೈಟ್‌ ಆರಂಭದ ದಿನದಂದೇ ಘೋಷಿಸಿದ್ದೇವೆ. ಜತೆಗೆ ನಮ್ಮ ಹೂಡಿಕೆ ಎಷ್ಟು? ಹೂಡಿಕೆದಾರರು ಯಾರು ಎಂಬ ಬಗ್ಗೆ ಅವರ ಪೂರ್ತಿ ಮಾಹಿತಿಯನ್ನು ಘೋಷಿಸಿದ್ದೇವೆ ಎಂದು ಹೇಳಿದರು.

ಕನ್ನಡ ಭಾಷೆಯು ಉತ್ಕೃಷ್ಟವಾಗಿದೆ. ನಮಗೆ ಡಿ.ವಿ. ಗುಂಡಪ್ಪ, ಕುವೆಂಪು ಅವರೆಲ್ಲರೂ ಆದರ್ಶರಾಗಿದ್ದಾರೆ. ಇಂಥವರಲ್ಲಿ ಅನೇಕರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಆದರೆ, ಕನ್ನಡದಲ್ಲಿ ಪ್ರಭುತ್ವವನ್ನು ಹೊಂದಿದ್ದರು. ನಾವು ಭಾಷೆ ಬಗ್ಗೆ ಕೀಳರಿಮೆ ಹೊಂದುವುದು ಬೇಡ. ಯಾವ ಭಾಷೆಯನ್ನು ನಾವು ಬಳಸುತ್ತೇವೋ ಅದನ್ನು ಚೆನ್ನಾಗಿ ಬಳಸೋಣ. ಶಿಕ್ಷಣದ ನಂತರ ಈ ಸಮಾಜದಲ್ಲಿ ಏನಾದರೂ ಬದಲಾವಣೆ ತರುವುದಿದ್ದರೆ ಅದು ಮಾಧ್ಯಮದಿಂದ ಮಾತ್ರ ಸಾಧ್ಯ. ನಾವು ಅದನ್ನು ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಲರ್ಸ್‌ ಕನ್ನಡ ವಾಹಿನಿಯ ಕ್ಲಸ್ಟರ್‌ ಬಿಸಿನೆಸ್ ಹೆಡ್‌ ಪರಮೇಶ್ವರ ಗುಂಡ್ಕಲ್‌ ಮಾತನಾಡಿ, ವಿದ್ಯಾರ್ಥಿಗಳಿಗೆ ಮನೋರಂಜನೆ ಕ್ಷೇತ್ರದ ಮಹತ್ವ, ಅಪಾರ ಅವಕಾಶಗಳನ್ನು ಮತ್ತು ಸೃಜನಶೀಲ ಬರವಣಿಗೆ ಕುರಿತು ತಿಳಿಸಿಕೊಟ್ಟರು. ಅಲ್ಲದೆ, ಆಸಕ್ತಿಕರ ಕ್ಷೇತ್ರ ಯಾವುದೆಂದು ಅರಿತುಕೊಂಡ ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹೊಸ ದಿಗಂತ ಪತ್ರಿಕೆಯ ಪ್ರಧಾನ ಸಂಪಾದಕ, ಆಲ್ಮಾ ಮೀಡಿಯಾ ಸ್ಕೂಲ್‌ ಪ್ರಾಧ್ಯಾಪಕ ವಿನಾಯಕ ಭಟ್‌ ಮೂರೂರು, ಪ್ರಾಧ್ಯಾಪಕ ಅಕ್ಷಯ್‌ ಹೆಗಡೆ, ಪ್ರಾಧ್ಯಾಪಕಿ ಮಾಲತಿ ಗೌರೀಶ್‌ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸೆಪ್ಟೆಂಬರ್‌ 2022ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಇದನ್ನೂ ಓದಿ | Microsoft Layoffs | ಇಂದು 10 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದೆ ಮೈಕ್ರೋಸಾಫ್ಟ್!

Exit mobile version