Site icon Vistara News

Dr Alok Mohan IPS: ನೂತನ ಡಿಜಿ-ಐಜಿಪಿ ಅಲೋಕ್ ಮೋಹನ್ ಅಧಿಕಾರ ಸ್ವೀಕಾರ

Dr Alok Mohan IPS New DG IGP of Karnataka

Dr Alok Mohan IPS New DG IGP of Karnataka

ಬೆಂಗಳೂರು: ರಾಜ್ಯದ ನೂತನ ಪೊಲೀಸ್‌ ಮಹಾನಿರ್ದೇಶಕ (ಡಿಜಿ-ಐಜಿಪಿ) ಡಾ. ಅಲೋಕ್ ಮೋಹನ್ ಅವರು (Dr Alok Mohan IPS) ಸೋಮವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ಡಿಜಿ-ಐಜಿಪಿ ಪ್ರವೀಣ್ ಸೂದ್‌ ಅವರು ಅಲೋಕ್‌ ಮೋಹನ್‌ ಅವರಿಗೆ ಬ್ಯಾಟನ್‌ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಬಿಹಾರ ಮೂಲದ ಡಾ.ಅಲೋಕ್ ಮೋಹನ್ ಅವರು ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. 1987ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾದ ಇವರು 36 ವರ್ಷ ಸೇವೆ ಸಲ್ಲಿಸಿದ್ದಾರೆ. ಅಗ್ನಿಶಾಮಕದಳ ಹಾಗೂ ತುರ್ತು ಸೇವೆಗಳ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದ ಇವರು, ಈ ಹಿಂದೆ ಕಾರಾಗೃಹ ಇಲಾಖೆ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಹಾಗೆಯೇ ಎಸಿಬಿ ಎಡಿಜಿಪಿ ಸೇರಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲೋಕ್ ಮೋಹನ್ ಅವರು 2025ರ ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ.

ಡಿಜಿ-ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ.ಅಲೋಕ್‌ ಮೋಹನ್‌ ಅವರು, ಡಿಜಿ-ಐಜಿಪಿ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ನನ್ನನ್ನು ಈ ಹುದ್ದೆಗೆ ಪರಿಗಣಿಸಿದ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇದೇ ನಮಗೆ ನಮ್ಮ ಮೊದಲ ಆದ್ಯತೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಕ್ರೈಂ ಪ್ರಕರಣಗಳಿಗೆ ಕಡಿವಾಣಕ್ಕೆ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.

ಪೊಲೀಸರು ಠಾಣೆಗೆ ಬರುವ ಎಲ್ಲ ದೂರುಗಳನ್ನು ಸ್ವೀಕರಿಸಬೇಕು. ನಮ್ಮ ಪೊಲೀಸರಿಗೆ ಮತ್ತಷ್ಟು ಹೆಚ್ಚಿನ ಟೆಕ್ನಿಕಲ್ ಟ್ರೈನಿಂಗ್ ನೀಡಲಾಗುವುದು. ಟ್ರಾಫಿಕ್ ಮ್ಯಾನೇಜ್ಮೆಂಟ್ ಕೂಡ ಮುಖ್ಯವಾಗುತ್ತದೆ. ಸಂಚಾರ ದಟ್ಟಣೆ ಆಗದಂತೆ ಗಮನ ನೀಡಲಿದ್ದೇವೆ. ಯಾವುದೇ ಕಾರಣಕ್ಕೂ ಸಂಘಟಿತ ಅಪರಾಧ ಸಹಿಸುವುದಿಲ್ಲ. ಮಾದಕ ವಸ್ತುಗಳ ಸಾಗಣೆ ಸಂಪೂರ್ಣವಾಗಿ ನಿರ್ಬಂಧಿಸುವುದು ನಮ್ಮ ಗುರಿ. ಮಾನವ ಹಕ್ಕುಗಳನ್ನು ಗೌರವಿಸಿ, ಜನರಿಗೆ ಅರಿವು ಮೂಡಿಸುತ್ತೇವೆ ಎಂದು ಹೇಳಿದರು.

ಅಲೋಕ್‌ ಮೋಹನ್‌ ಅವರು ನಡೆದು ಬಂದ ದಾರಿ

ವೃತ್ತಿಜೀವನದ ಮೂರು ದಶಕಗಳಿಗೂ ಹೆಚ್ಚು ಅವಧಿಯಲ್ಲಿ ಅಲೋಕ್‌ ಮೋಹನ್ ಅವರು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸವಾಲಿನ ಮತ್ತು ನಿರ್ಣಾಯಕ ಕಾರ್ಯಯೋಜನೆಗಳಲ್ಲಿ ಉನ್ನತ ನಿರ್ವಹಣಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 

ಇವರು ಮೂರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ; ರೂರ್ಕಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಯಿಂದ ‘ಆನರ್ಸ್’ ಜತೆಗೆ ವಿಜ್ಞಾನದ ಮಾಸ್ಟರ್ (M.Sc.); ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಫಿಲಾಸಫಿ (M. ಫಿಲ್) ಮತ್ತು ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್, ಹಾರ್ವರ್ಡ್ ವಿಶ್ವವಿದ್ಯಾಲಯ, USA ಮತ್ತು ಲೀ ಕ್ವಾನ್ ಯೂ (LKY) ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ, ಸಿಂಗಾಪುರ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನಿರ್ವಹಣೆಯಲ್ಲಿ ಮಾಸ್ಟರ್ (MPM). ಅವರು ತಮ್ಮ ಎಂಪಿಎಂ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಲೀ ಕುವಾನ್ ಯೂ ಫೆಲೋಶಿಪ್’ ಅನ್ನು ಪಡೆದಿದ್ದಾರೆ.

ಬೆಂಗಳೂರಿನಲ್ಲಿ ನೂತನ ಡಿಜಿಪಿ ಅಲೋಕ್‌ ಮೋಹನ್‌ ಅವರು ನಿರ್ಗಮಿತ ಡಿಜಿಪಿ ಪ್ರವೀಣ್‌ ಸೂದ್‌ ಅವರಿಗೆ ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು.

ಸಿಬಿಐ ನಿರ್ದೇಶಕರಾಗಿ ಪ್ರವೀಣ್‌ ಸೂದ್‌

ಈ ಹಿಂದೆ ರಾಜ್ಯದ ಡಿಜಿಪಿಯಾಗಿದ್ದ ಪ್ರವೀಣ್‌ ಸೂದ್‌ (Praveen Sood) ಅವರನ್ನು ಸಿಬಿಐ ನಿರ್ದೇಶಕರನ್ನಾಗಿ (CBI director) ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಖಾಲಿಯಾದ ಹುದ್ದೆಗೆ ಅಲೋಕ್‌ ಮೋಹನ್‌ ಅವರನ್ನು ನೇಮಿಸಲಾಗಿದೆ.

ಕೇಂದ್ರೀಯ ತನಿಖಾ ಮಂಡಳಿಯ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್‌ ಸೂದ್‌ ಅವರನ್ನು ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವಿಭಾಗ ರಾಜ್ಯ ಸೇವೆಯಿಂದ ಮೇ 22ರಿಂದ ಅನ್ವಯವಾಗುವಂತೆ ತೆರವುಗೊಳಿಸಿದೆ. ಹೀಗಾಗಿ ಈ ಹುದ್ದೆಗೆ ಡಾ. ಅಲೋಕ್‌ ಮೋಹನ್‌ ಅವರನ್ನು ನೇಮಿಸಲಾಗಿದೆ.

ಇದನ್ನೂ ಓದಿ | Karnataka CM: ಸಿಎಂ ಮಾಧ್ಯಮ ಸಲಹೆಗಾರರಾಗಿ ಕೆ.ವಿ. ಪ್ರಭಾಕರ್‌, ಹೆಚ್ಚುವರಿ ಕಾರ್ಯದರ್ಶಿಯಾಗಿ ರಜನೀಶ್‌

ನೂತನ ಅಡ್ವೊಕೇಟ್‌ ಜನರಲ್‌ ಆಗಿ ಶಶಿಕಿರಣ್ ಶೆಟ್ಟಿ ನೇಮಕ;‌ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು: ರಾಜ್ಯದ ನೂತನ ಅಡ್ವೊಕೇಟ್‌ ಜನರಲ್‌ ಆಗಿ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ಅವರು ನೇಮಕವಾಗಿದ್ದಾರೆ. ಇತ್ತೀಚೆಗೆ ಅಡ್ವೊಕೇಟ್‌ ಜನರಲ್‌ ಸ್ಥಾನಕ್ಕೆ‌ (Advocate General) ಪ್ರಭುಲಿಂಗ ನಾವದಗಿ ಅವರು ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ಶಶಿಕಿರಣ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.

Exit mobile version