Site icon Vistara News

Belagavi Milk Union: ಬೆಳಗಾವಿ ಹಾಲು ಒಕ್ಕೂಟ ನಿರ್ದೇಶಕ ಸ್ಥಾನಕ್ಕೆ ಅಮರನಾಥ ಜಾರಕಿಹೊಳಿ ರಾಜೀನಾಮೆ

Belagavi Milk Union

#image_title

ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ‌ (Belagavi Milk Union) ನಿರ್ದೇಶಕ ಸ್ಥಾನಕ್ಕೆ ಅಮರನಾಥ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಇವರು ಗೋಕಾಕ್ ಹಾಲು ಉತ್ಪಾದಕ ಸಂಘದಿಂದ ಬೆಮುಲ್‌ಗೆ ‌ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ಅಮರನಾಥ ಜಾರಕಿಹೊಳಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಕಿರಿಯ ಪುತ್ರರಾಗಿದ್ದಾರೆ. ಜಾರಕಿಹೊಳಿ ಕುಟುಂಬದ ಎರಡನೇ ತಲೆಮಾರಿನ ಅಮರನಾಥ, ಬೆಮುಲ್ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದರು. ಮೂರು ವರ್ಷಗಳ ಹಿಂದೆ ಗೋಕಾಕ್ ಹಾಲು ಉತ್ಪಾದಕ ಸಂಘದಿಂದ ಬೆಮುಲ್‌ಗೆ ನಿರ್ದೇಶಕರಾಗಿ ಇವರು ಅವಿರೋಧ ಆಯ್ಕೆಯಾಗಿದ್ದರು. ಬೆಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಕಳೆದ ತಿಂಗಳೇ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಈಗ ರಾಜೀನಾಮೆ ವಿಷಯವನ್ನು ಜಾರಕಿಹೊಳಿ ಕುಟುಂಬದ ಆಪ್ತ ಮೂಲಗಳು ಖಚಿತ ಪಡಿಸಿವೆ.

ಕೆಎಂಎಫ್ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಬಾಲಚಂದ್ರ ‌ಜಾರಕಿಹೊಳಿ ರಕ್ಷಣಾತ್ಮಕ ನಡೆ!

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚನೆ ಮೇರೆಗೆ ಅಮರನಾಥ ‌ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರ ಪತನವಾದ ಬಳಿಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬಿಎಸ್‌ವೈ ‌ಸರ್ಕಾರದಲ್ಲಿ ಕೆಎಂಎಫ್‌ಗೆ ನಾಮನಿರ್ದೇಶನರಾಗಿ ಅಧ್ಯಕ್ಷ ಹುದ್ದೆಗೇರುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅಚ್ಚರಿ ಮೂಡಿಸಿದ್ದರು. ಈಗ ಅದೇ ಕೆಎಂಎಫ್ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಜಾರಕಿಹೊಳಿ ಕುಟುಂಬದ ಮೆಗಾ ಪ್ಲ್ಯಾನ್ ಮಾಡಿದೆ ಮಾಡಿದೆ ಎನ್ನಲಾಗಿದೆ.

2023ರ‌ ಚುನಾವಣೆಯಲ್ಲಿ ಬಿಜೆಪಿ‌ ಸರ್ಕಾರ ಅಧಿಕಾರಕ್ಕೆ ‌ಬರದಿದ್ದರೆ ನಾಮನಿರ್ದೇಶನ ಸ್ಥಾನ ರದ್ದಾಗುವ ಸಾಧ್ಯತೆ ಇದೆ. ನಾಮನಿರ್ದೇಶನ ಸ್ಥಾನ ರದ್ದಾದರೆ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ‌ಅಧ್ಯಕ್ಷ ಸ್ಥಾನದಿಂದ‌ ಕೆಳಗಿಳಿಯಬೇಕಾದ ಅನಿವಾರ್ಯತೆ ಇದೆ. ಈ‌ ಕಾರಣಕ್ಕೆ ‌ಕೆಎಂಎಫ್ ಅಧ್ಯಕ್ಷ ‌ಸ್ಥಾನ ಉಳಿಸಿಕೊಳ್ಳಲು ಬಾಲಚಂದ್ರ ‌ಜಾರಕಿಹೊಳಿ ಅವರು ಅಮರನಾಥ್‌ ಅವರಿಂದ ರಾಜೀನಾಮೆ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ | Karnataka Election: ಚುನಾವಣೆ ದಿನಾಂಕ ಘೋಷಣೆ ಸನ್ನಿಹಿತ: ಮುಖ್ಯ ಚುನಾವಣಾ ಆಯುಕ್ತರಿಂದ ರಾಜ್ಯಕ್ಕೆ ಮೂರು ದಿನದ ಭೇಟಿ

ಇನ್ನು ರಾಜ್ಯ ಸರ್ಕಾರದ ನಾಮನಿರ್ದೇಶನ ಸ್ಥಾನಕ್ಕೆ ರಾಜೀನಾಮೆ ‌ನೀಡಿ ಗೋಕಾಕ್ ಹಾಲು ಉತ್ಪಾದಕ ಸಂಘದಿಂದ‌ ನಿರ್ದೇಶಕರಾಗಲು ಬಾಲಚಂದ್ರ ಸಿದ್ಧತೆ‌ ನಡೆಸುತ್ತಿದ್ದಾರೆ. ಮಾರ್ಚ್ ‌14 ರಂದು ಗೋಕಾಕ್ ಹಾಲು ಉತ್ಪಾದಕ ‌ಸಂಘದಿಂದ‌ ಬೆಮುಲ್‌ಗೆ ಅವಿರೋಧವಾಗಿ ಬಾಲಚಂದ್ರ‌ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಈ ನಿಟ್ಟಿನಲ್ಲಿ ಅಂದು ಬೆಮುಲ್ ‌ಆಡಳಿತ‌ ಮಂಡಳಿ ಸಭೆಯನ್ನು ವ್ಯವಸ್ಥಾಪಕ ‌ನಿರ್ದೇಶಕ ಕರೆದಿದ್ದಾರೆ. ಈ ಸಭೆಯಲ್ಲೇ ಬಾಲಚಂದ್ರ ಜಾರಕಿಹೊಳಿ ಅವರನ್ನು ನಿರ್ದೇಶಕರಾಗಿ ಅವಿರೋಧ ಆಯ್ಕೆ ಘೋಷಿಸುವ ಸಾಧ್ಯತೆ ಇದೆ. ಬೆಮುಲ್ ನಿರ್ದೇಶಕರಾದರೆ ಕೆಎಂಎಫ್ ‌ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಬಾಲಚಂದ್ರ ಅವರಿಗೆ ಅವಕಾಶವಿದೆ.

Exit mobile version